ದೇಶ ವಿದೇಶ

ಭಾರತ ಅತ್ಯಂತ ದುಬಾರಿ ತೆರಿಗೆ ದೇಶ; ಅದಕ್ಕೆ ಪ್ರತಿಯಾಗಿ ತೆರಿಗೆ ವಿಧಿಸುತ್ತೇವೆ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಧಿಕ ತೆರಿಗೆ ವಿಧಿಸುತ್ತಿರುವ ಭಾರತಕ್ಕೆ ಪ್ರತಿಯಾಗಿ ಅಮೆರಿಕಾ ಕೂಡ ಭಾರತದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಅಧಿಕ ಪ್ರತಿ ತೆರಿಗೆ ವಿಧಿಸುವುದಾಗಿ ಅಮೆರಿಕಾ ಬೆದರಿಕೆ ಹಾಕಿದೆ.
ಮೇರಿಲ್ಯಾಂಡ್ ನಲ್ಲಿ ನಡೆದ 4 ದಿನಗಳ ಸಂರಕ್ಷಣಾ ರಾಜಕೀಯ ಕಾರ್ಯ ಸಮ್ಮೇಳನ(ಸಿಪಿಎಸಿ)ದ ಕೊನೆಯ ದಿನ ಮಾತನಾಡಿದ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಭಾರತ ಅತ್ಯಂತ ದುಬಾರಿ ತೆರಿಗೆ ದೇಶವಾಗಿದೆ. ನಾವು ಬೈಕೊಂದನ್ನು ಭಾರತಕ್ಕೆ ಕಳುಹಿಸಿದರೆ ಅವರು ಶೇಕಡಾ 100ರಷ್ಟು ತೆರಿಗೆ ವಿಧಿಸುತ್ತಾರೆ. ಅದೇ ಭಾರತ ಇಲ್ಲಿಗೆ ಮೋಟಾರ್ ಸೈಕಲ್ ವೊಂದನ್ನು ಕಳುಹಿಸಿದರೆ ನಾವು ಯಾವುದೇ ತೆರಿಗೆ ಹೇರುವುದಿಲ್ಲ. ಇನ್ನು ಮುಂದೆ ಭಾರತದ ಅಧಿಕ ತೆರಿಗೆಗೆ ಪ್ರತಿಯಾಗಿ ನಾವು ಕೂಡ ಬದಲಿ ತೆರಿಗೆ ವಿಧಿಸಬೇಕು ಎಂದು ಹೇಳಿದರು. ಬದಲಿ ತೆರಿಗೆ(RECIPROCAL TAX) ತೆರಿಗೆಯ ಒಂದು ರೂಪವಾಗಿದ್ದು, ಅಮೆರಿಕಾದಿಂದ ರಫ್ತು ಆಗುವ ವಸ್ತುಗಳಿಗೆ ವಿಧಿಸುವ ತೆರಿಗೆಗೆ ಪ್ರತಿಯಾಗಿ ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ವಿಧಿಸುವ ತೆರಿಗೆ ದರವಾಗಿದೆ.ಬೇರೆ ದೇಶಗಳು ಶೇಕಡಾ 100ರಷ್ಟು ತೆರಿಗೆ ವಿಧಿಸಲು ನಾವು ಬಿಡುವುದಿಲ್ಲ. ನಮಗೆ ಅದೇ ಉತ್ಪನ್ನಕ್ಕೆ ಸರಿಯಾದ ತೆರಿಗೆ ಸಿಗುವುದಿಲ್ಲ. ಅದೊಂದು ವಿಷಯಕ್ಕೆ ಭಾರತ ನಮ್ಮನ್ನು ಗೌರವಿಸುತ್ತಿಲ್ಲ, ನಾವು ಮೂರ್ಖರು ಎಂದು ಭಾವಿಸುತ್ತಾರೆ, ಆದರೆ ಇಡೀ ವಿಶ್ವ ನಮ್ಮನ್ನು ಗೌರವಿಸುತ್ತಿದೆ, ನಮ್ಮನ್ನು ಅವರು ಕೂಡ ಗೌರವಿಸುತ್ತಾರೆ ಎಂದು ಟ್ರಂಪ್ ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ದೇಶದಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯಡಿ ವಿದೇಶಿ ಹೂಡಿಕೆ ಮಾಡುವಂತೆ ಕರೆ ಕೊಟ್ಟಿದ್ದರು, ಭಾರತವನ್ನು ಉತ್ಪಾದನೆಯ ಕೇಂದ್ರವನ್ನಾಗಿ ಮಾರ್ಪಡಿಸಿ ಯುವಕರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಗೆ ಒತ್ತಾಯಿಸಿದ್ದರು. ಆದರೆ ಅಮೆರಿಕಾ ಅಧ್ಯಕ್ಷ ಟ್ರಂಪ್ ಅವರು ಅಮೆರಿಕಾ ಉತ್ಪಾದನೆ ಕಂಪೆನಿಗಳು ಮೇಕ್ ಅಮೆರಿಕಾ ಗ್ರೇಟ್ ಅಗೈನ್ ಅಭಿಯಾನದಡಿ ತಮ್ಮ ರಾಷ್ಟ್ರದಲ್ಲಿಯೇ ಹೆಚ್ಚೆಚ್ಚು ಹೂಡಿಕೆ ಮಾಡಿ ಉತ್ಪಾದನೆ ಮಾಡುವಂತೆ ಕೋರಿದ್ದರು.

About the author

ಕನ್ನಡ ಟುಡೆ

Leave a Comment