ರಾಷ್ಟ್ರ ಸುದ್ದಿ

ಭಾರತ-ಪಾಕ್ ನಡುವಿನ ಕರ್ತಾರ್ಪುರ ಕಾರಿಡಾರ್ ಯೋಜನೆ ಜನರನ್ನು ಸಂಪರ್ಕಿಸುತ್ತದೆ: ಪ್ರಧಾನಿ ಮೋದಿ

ನವದೆಹಲಿ: ಭಾರತ ಹಾಗೂ ಪಾಕಿಸ್ತಾನ ನಡುವಿನ ಕರ್ತಾರ್ಪುರ ಕಾರಿಡಾರ್ ಯೋಜನೆ ಉಭಯ ರಾಷ್ಟ್ರಗಳ ಜನರು ಸಂಪರ್ಕಿಸುವಂತೆ ಮಾಡುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶುಕ್ರವಾರ ಹೇಳಿದ್ದಾರೆ.
ಶಿರೋಮಣಿ ಅಕಾಲಿ ದಳ (ಎಸ್ಎಡಿ) ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದರ್ ಅವರು ತಮ್ಮ ನಿವಾಸದಲ್ಲಿ ಆಯೋಜಿಸಿದ್ದ ಆಯೋಜಿಸಿದ್ದ ಗುರುಪುರಬ್ ಕೀರ್ತನ್ ದರ್ಬಾರ್’ನಲ್ಲಿ ಪಾಲ್ಗೊಂಡಿದ್ದ ಪ್ರಧಾನಿ ಮೋದಿಯವರು ಕರ್ತಾರ್ಪುರ ಯೋಜನೆ ಕುರಿತಂತೆ ಮಾತನಾಡಿದ್ದಾರೆ. ಪೂರ್ವ ಹಾಗೂ ಪಶ್ಚಿಮ ಜರ್ಮನ್ನರ ಸಂಬಂಧಕ್ಕೆ ನಿರ್ಬಂಧ ಹಾಕಿದ್ದ ಬರ್ಲಿನ್ ಗೋಡೆಯೇ ನೆಲಸಮವಾದಾಗ, ಕರ್ತಾರ್ಪುರ ಕಾರಿಡಾರ್ ಯೋಜನೆ ಕೂಡ ಭಾರತ ಹಾಗೂ ಪಾಕಿಸ್ತಾನ ಜನರ ನಡುವೆ ಸಂಪರ್ಕವನ್ನು ಕಲ್ಪಿಸಬಹುದು ಎಂದು ಹೇಳಿದ್ದಾರೆ.
ಗುಜರಾತ್ ರಾಜ್ಯದಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ, ಭೂಕಂಪದಿಂದಾಗಿ ನಾಶಗೊಂಡಿದ್ದ ಗುರು ನಾನಕ್ ಅವರ ಪವಿತ್ರ ಸ್ಥಳವನ್ನು ಮರು ನಿರ್ಮಾಣ ಮಾಡುವಂತೆ ಆದೇಶಿಸಿದ್ದೆ. ಇಂದು ಅದೇ ಸ್ಥಳ ವಿಶ್ವಖ್ಯಾತಿ ಪಡೆದುಕೊಂಡಿದೆ. ಗುರು ನಾನಕ್ ದೇವ್ ಜೀಯವರ ಆಶೀರ್ವಾದಂದ ಕರ್ತಾರ್ಪುರ ಕಾರಿಡಾರ್ ಯೋಜನೆ ಆರಂಭವಾಗುತ್ತಿದೆ. ಕರ್ತಾರ್ಪುರ ಕಾರಿಡಾರ್ ಕೇವಲ ಕಾರಿಡಾರ್ ಅಷ್ಟೇ ಅಲ್ಲ, ಇದು ಉಭಯ ರಾಷ್ಟ್ರಗಳ ಜನರನ್ನು ಸಂಪರ್ಕಿಸುತ್ತದೆ ಎಂದು ತಿಳಿಸಿದ್ದಾರೆ.
ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ದೇವ್ ಅವರ 550ನೇ ಜನ್ಮ ದಿನಾಚರಣೆ ಹಿನ್ನಲೆಯಲ್ಲಿ ಅಂತರಾಷ್ಟ್ರೀಯ ಗಡಿಗೆ ಹೊಂದಿಕೊಂಡಂತೆ ತನ್ನ ನೆಲದಲ್ಲಿರುವ ಗುರುನಾನಕ್ ಅವರ ಸಮಾಧಿ ಸ್ಥಳ ಕರ್ತಾರ್ಪುರ ಸಾಹಿಬ್’ಗೆ ತೆರಳುವ ಹಾದಿಯನ್ನು ಭಾರತಿಯ ಸಿಕ್ಖರಿಗೆ ಮುಕ್ತಗೊಳಿಸುವುದಾಗಿ ಪಾಕಿಸ್ತಾನ ಘೋಷಣೆ ಮಾಡಿತ್ತು. ಪಂಜಾಬ್’ನ ಗುರುದಾಸ್ಪುರದಲ್ಲಿರುವ ಡೇರಾ ಬಾಬಾ ನಾನಕ್’ನಿಂದ ಅಂತಾರಾಷ್ಟ್ರೀಯ ಗಡಿವರೆಗೆ ನಾವು ಕಾರಿಡಾರ್ ಅಭಿವೃದ್ಧಿಪಡಿಸುತ್ತೇವೆ. ಗಡಿಯಾಚೆಯಿಂದ ಕರ್ತಾರ್ಪುರವರೆಗೆ ನೀವೂ ಕಾರಿಡಾರ್ ಅಭಿವೃದ್ಧಿ ಮಾಡಿ ಎಂದು ಕೇಂದ್ರ ಸರ್ಕಾರ ಪಾಕಿಸ್ತಾನಕ್ಕೆ ಗುರುವಾರವಷ್ಟೇ ಸಲಹೆ ಮಾಡಿತ್ತು. ಇದಾದ ಬೆನ್ನಲ್ಲೇ ಸಿಖ್ ಭಕ್ತರಿಗೆ ಗುರು ನಾನಕ್’ರ ಸಮಾಧಿ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ಪಾಕಿಸ್ತಾನ ಘೋಷಣೆ ಮಾಡಿದೆ.
ಸಿಖ್ ಧರ್ಮ ಸಂಸ್ಥಾಪಕ ಗುರು ನಾನಕ್ ಅವರ ಸಮಾಧಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ನರೋವಲ್ ಜಿಲ್ಲೆಯಲ್ಲಿದೆ. ಅಂತರಾಷ್ಟ್ರೀಯ ಗಡಿಯಲ್ಲಿ ನಿಂತರೆ ಸಮಾಧಿ ಇರುವ ಕರ್ತಾರ್ಪುರ ಗುರುದ್ವಾರ ಕಾಣುತ್ತದೆ. ಆದರೆ, ಅಲ್ಲಿಗೆ ಹೋಗಲು ಸಿಕ್ಖರು ಪಾಕಿಸ್ತಾನದ ವೀಸಾಗೆ ಅರ್ಜಿ ಸಲ್ಲಿಸಬೇಕು. ಪಾಕಿಸ್ತಾನ ಪ್ರಧಾನಿ ಇರ್ಮಾನ್ ಖಾನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಅವರು ಕರ್ತಾರ್ಪುರ ಕಾರಿಡಾರ್’ನ್ನು ಪಾಕಿಸ್ತಾನ ತೆರೆಯಲಿದೆ ಎಂದು ಹೇಳಿದ್ದರು.
ಕರ್ತಾರ್ಪುರ ಸಾಹಿಬ್ ಹಾಗೂ ಗುರುದಾಸ್ಪುರದ ಡೇರಾ ಬಾಬಾ ನಾನಕ್ ನಡುವೆ ನೇರ ಕಾರಿಡಾರ್ ನಿರ್ಮಾಣಕ್ಕೆ ಬೇಡಿಕೆ ಇದೆ. ಉಭಯ ದೇಶಗಳ ಸಂಬಂಧ ಹಳಸಿರುವ ಹಿನ್ನಲೆಯಲ್ಲಿ ಡೇರಾ ಬಾಬಾ ನಾನಕ್ ಬಳಿ ಬೃಹತ್ ಸಾಮರ್ಥ್ಯದ ಟೆಲಿಸ್ಕೋಪ್ ಅಳವಡಿಸಿ, ಕರ್ತಾರ್ಪುರ ಸಾಹಿಬ್ ದರ್ಶನ ಮಾಡಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ ಎಂದು ವರದಿಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment