ರಾಜ್ಯ ಸುದ್ದಿ

ಮಂಗಳೂರು ದಸರಾಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ

ಮಂಗಳೂರು: ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನವರಾತ್ರಿ ಮಹೋತ್ಸವ ಹಾಗೂ ಮಂಗಳೂರು ದಸರಾ 2018ಕ್ಕೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭಾನುವಾರ ಚಾಲನೆ ನೀಡಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರು ಸಂದೇಶ ಸಾರುವ ಹಳದಿ ಧ್ವಜವನ್ನು ದೇಗುಲ ಟ್ರಸ್ಟ್ ಅಧ್ಯಕ್ಷ ಸಾಯಿರಾಂ ಅವರಿಗೆ ಹಸ್ತಾಂತರಿಸುವ ಮುಖೇನ ಮುಖ್ಯಮಂತ್ರಿಗಳು ದಸರಾ ಕಾರ್ಯಕ್ರಮ ಉದ್ಘಾಟಿಸಿದ್ದಾರೆ.

ದಸರಾ ಉದ್ಘಾಟನೆ ಬಳಿಕ ಮಾತನಾಡಿದ ಕುಮಾರಸ್ವಾಮಿ “ಇದು ನನ್ನ ಅದೃಷ್ಟದ ಕ್ಷಣ, ನಾನು ಪ್ರತಿ ಕ್ಷಣವೂ ದೇವರನ್ನು ನಂಬಿ ಬದುಕುತ್ತೇನೆ.ದಿನದ ಪ್ರಾರಂಬ ಸಹ ದೇವರ ಸ್ಮರಣೆಯೊಡನೆ ಆಗುತ್ತದೆ” ಎಂದರು. ಮೈಸೂರಿನಲ್ಲಿ ಮಹಾರಾಜರು ದಸರಾ ಆಚರಣೆ ಮಾಡಿದರೆ ಮಂಗಳೂರು ದಸರಾ ಜನಸಾಮಾನ್ಯರ ಉತ್ಸವವಾಗಿದೆ. ಎಂದ ಕುಮಾರಸ್ವಾಮಿ “ರಾಜ್ಯ ಅಭಿವೃದ್ದಿಯತ್ತ ದಾಪುಗಾಲು ಹಾಕುತ್ತಿದ್ದರೂ ಸಹ ಸಮಸ್ಯೆಗಳೂ ಸಾಕಷ್ಟಿದೆ. ನಾವೆಷ್ಟೇ ವೈಜ್ಞಾನಿಕವಾಗಿ ಬೆಳೆಫ಼್ದರೂ ದೇವರ ಶರಣು ಹೋಗದೆ ಇರಲಿಕ್ಕೆ ಆಗುವುದಿಲ್ಲ.ಕಷ್ಟ ಎದುರಾದಾಗ ವಿಜ್ಞಾನ  ನೆನಪಾಗುವುದಿಲ್ಲ, ದೇವರು ನೆನಪಾಗುತ್ತಾನೆ” ಎಂದರು. ಮಂಗಳೂರು ದಸರಾಗಾಗಿ ಸರ್ಕಾರ ಯಾವ ರೀತಿಯ ಹಣಕಾಸು ಸಹಾಯ ಒದಗಿಸುವುದಿಲ್ಲ, ಇದೊಂದು ವಿಶಿಷ್ಟ ವಿಭಿನ್ನ ಆಚರಣೆ ಎಂದು ಹರ್ಷ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಉಸ್ತುವಾರಿ ಸಚಿವ ಯು.ಟಿ. ಖಾದರ್ ಸಚಿವ ಹಾಗೂ ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.
ಪತ್ರಕರ್ತರ ಕಲ್ಯಾಣಕ್ಕೆ ನೆರವು: ಪತ್ರಕರ್ತರ ಕಲ್ಯಾಣಕ್ಕೆ ನೆರವಾಗುವ ಎಲ್ಲಾ ವಿವಿಧ ಯೋಜನೆಗೆ ರಾಜ್ಯ ಸರ್ಕಾರ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ “ಬ್ರಾಂಡ್ ಮಂಗಳೂರು” ಯೋಜನೆ ಹಾಗೂ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಅವರು ಮಾತನಾಡಿದ್ದಾರೆ.

ಪತ್ರಕರ್ತರಿಗೆ ನಿವೇಶನ, ಬಸ್ ಪಾಸ್, ಅದ್ಯಯನ ಪ್ರವಾಸ, ಕುಟುಂಬ ಆರೋಗ್ಯ ವಿಮೆ ಸೇರಿ ವಿವಿಧ ಸೌಲಭ್ಯ ಒದಗಿಸುವುದು ಸರ್ಕಾರಕ್ಕೆ ಕಷ್ಟವಲ್ಲ, ಪತ್ರಕರ್ತರು ಸಲ್ಲಿಸುವ ಮನವಿ ಪರಿಗಣಿಸಿ ಇದರ ಕುರಿತು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಅವರು ಹೇಳಿದ್ದಾರೆ. ರೈತರ ನೆಮ್ಮದಿಗಾಗಿ ಸಾಲಮನ್ನಾ ಯೋಜನೆ ಜಾರಿಯಾಗಿದ್ದು ಇದರಿಂದ ರಾಜ್ಯ ಬೊಕ್ಕಸಕ್ಕೆ ಯಾವ ಹಾನಿಯಾಗಿಲ್ಲ.ಬೊಕ್ಕಸದಲ್ಲಿ ಸಾಕಷ್ಟು ಹಣವಿದೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ರಾಜ್ಯ ಸರಕಾರದ ಚಾಲ್ತಿ ಖಾತೆಯಲ್ಲಿ 10 ಸಾವಿರ ಕೋಟಿ ರೂ. ಮಿಕ್ಕಿ ಹಣವಿದ್ದು ಅಭಿವೃದ್ಧಿ ಕಾಮಗಾರಿಗಳಿಗೆ ವೇಗಕ್ಕೆ ಯಾವಡ್ಡಿ ಇಲ್ಲ ಎಂದರು.

About the author

ಕನ್ನಡ ಟುಡೆ

Leave a Comment