ರಾಜ್ಯ ಸುದ್ದಿ

ಮಂಗಳೂರು: ಸೇತುವೆಯಿಂದ ನದಿಗುರುಳಿದ ಬೊಲೆರೋ, ಮಹಿಳೆ ಸಾವು

ಮಂಗಳೂರು: ಬೊಲೆರೋ ಜೀಪ್ ಒಂದು ಸೇತುವೆಯಿಂದ ನದಿಗುರುಳಿದ ಪರಿಣಾಮ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ಮಂಗಳೂರು ಹೊರವಲಯದ ಕಿನ್ನಿಗೋಳಿ ಬಳಿಯ ಸಂಕಲಕರಿಯದಲ್ಲಿ ನಡೆದಿದೆ.
ಡಯಾನ(45) ಎಂಬಾಕೆ ಘಟನೆಯಲ್ಲಿ ದುರ್ಮರಣಕ್ಕೀಡಾಗಿದ್ದು ಈಕೆ ಕಾರ್ಕಳದ ಬೋಳ ಗ್ರಾಮ ನಿವಾಸಿ ಎಂದು ಗುರುತಿಸಲಾಗಿದೆ. ಇದೇ ವೇಳೆ ಇತರೆ ಮೂವರನ್ನು ಪ್ರಾಣಾಪಾಯದಿಂದ ರಕ್ಷಿಸಲಾಗಿದೆ. ಇನ್ನು ಜೀಪಿನಲ್ಲಿ ಮೃತ ಮಹಿಳೆಯ ಪತಿ ಸ್ಟ್ಯಾನಿ ಮಸ್ಕರೇನಸ್ ಹಾಗೂ ಮಕ್ಕಳಾದ ಶೆಲ್ಚನ್ ಹಾಗೂ ಶಮೀದ್ ಇದ್ದರು. ಸ್ಟ್ಯಾನಿಯೇ ವಾಹನ ಚಾಲನೆ ಮಾಡುತ್ತಿದ್ದರೆನ್ನಲಾಗಿದ್ದು ಇವರೆಲ್ಲರೂ ಬೋಳ ಗ್ರಾಮದಿಂದ ಮಂಗಳೂರಿಗೆ ವಿವಾಹ ಕಾರ್ಯಕ್ರಮಕ್ಕಾಗಿ ಹೋಗುತ್ತಿದ್ದರು.
ಶಾಂಭವಿ ನದಿಯ ತಡೆಯಿಲ್ಲದ ಸೇತುವೆ ದಾಟುವ ವೇಳೆ ಎದುರಿನಿಂದ ಬರುತ್ತಿದ್ದ ಲಾರಿ ಜೀಪಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಮುಂದಾದಾಗ ಜೀಪ್ ಚಾಲಕನ ನಿಯಂತ್ರಣ ತಪ್ಪಿ ನದಿಗೆ ಉರುಳಿದೆ. ತಕ್ಷಣ ಸ್ಥಳೀಯರು ನೀರಿನಲ್ಲಿ ಮುಳುಗಿದ್ದ ಮೂವರನ್ನು ರಕ್ಷಿಸಿದ್ದಾರೆ. ಆದರೆ ಸೀಟ್ ಬೆಲ್ಟ್ ಧರಿಸಿದ್ದ ಡಯಾನಾ ಅವರ ಕಡೆಗಿದ್ದ ಡೋರ್ ಲಾಕ್ ಆಗಿದ್ದರಿಂದ ಅವರ ರಕ್ಷಣೆ ಸಾಧ್ಯವಾಗಿಲ್ಲ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment