ರಾಜ್ಯ ಸುದ್ದಿ

ಮಂಡ್ಯದಲ್ಲಿ 2.5 ಲಕ್ಷ ಜನರಿಂದ ಅಂತಿಮ ದರ್ಶನ

ಬೆಂಗಳೂರು: ಶನಿವಾರ ನಿಧನರಾದ ರೆಬೆಲ್‌ ಸ್ಟಾರ್‌ ಅಂಬರೀಷ್‌ ಅವರ ಅಂತಿಮ ಯಾತ್ರೆ ಇಂದು ನಡೆಯಲಿದೆ ಅಂಬರೀಶ್‌ ಹುಟ್ಟೂರು ಮಂಡ್ಯದಲ್ಲಿ ಸಾರ್ವಜನಿಕ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟ ನಂತರ ಅಂಬಿ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ರವಾನಿಸಲಾಯಿತು. ಸೇನಾ ಹೆಲಿಕಾಪ್ಟರ್‌ ಮೂಲಕ ಬೆಂಗಳೂರಿಗೆ ಪಾರ್ಥಿವ ಶರೀರವನ್ನು ಕಳುಹಿಸಿಕೊಡಲಾಯಿತು. ಈ ಸಂದರ್ಭದಲ್ಲಿ ಇಡೀ ಮೈದಾನದಲ್ಲಿ ನೆರೆದಿದ್ದ ಜನರಿಗೆ ಪುತ್ರ ಅಭಿಷೇಕ್‌ ಗೌಡ ನಮನ ಸಲ್ಲಿಸಿದರು. ಶಾಂತ ರೀತಿಯಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಮೈದಾನದುದ್ದಕ್ಕೂ ಒಂದು ಸುತ್ತು ಹಾಕಿ ಎಲ್ಲರಿಗೂ ಧನ್ಯವಾದ ಅರ್ಪಿಸಿದರು. ನಂತರ ಪುತ್ರ ಅಭಿಷೇಕ್‌ ಅಂಬಿ ಪಾರ್ಥಿವ ಶರೀರಕ್ಕೆ ಮಂಡ್ಯ ಮಣ್ಣಿನ ತಿಲಕವನ್ನು ಇಟ್ಟರು.

ಈ ನಡುವೆ ಮಂಡ್ಯದಲ್ಲಿ ಭಾನುವಾರ ಸಂಜೆ 5 ಗಂಟೆಯಿಂದ ಇದುವರೆಗೂ 2.5 ಲಕ್ಷ ಮಂದಿ ಅಂತಿಮ ದರ್ಶನ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಂಬರೀಷ್‌ ಅವರ ಅಂತ್ಯಕ್ರಿಯೆಗೆ ಎಲ್ಲರೂ ಸಹಕರಿಸಬೇಕು. ಒಂದೇ ಒಂದು ಅಹಿತಕರ ಘಟನೆ ಹೊರತುಪಡಿಸಿದರೆ ಅಂತಿಮ ದರ್ಶನ ಕಾರ್ಯಕ್ರಮ, ಬೆಂಗಳೂರು, ಮಂಡ್ಯದಲ್ಲಿ ಶಾಂತ ರೀತಿಯಲ್ಲಿ ಸಾಗಿದೆ ಎಂದು ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಅಂಬರೀಶ್‌ ನೆನಪಿನಲ್ಲಿ ಸ್ಮಾರಕ ನಿರ್ಮಾಣ ಮಾಡಲಾಗುವುದು. ಅಂಬಿ ಹೆಸರಿನಲ್ಲಿ ಹೊಸ ಹೊಸ ಯೋಜನೆಗಳನ್ನು ಕೈಗೊಳ್ಳುವ ಬಗ್ಗೆ ಶೀಘ್ರದಲ್ಲೇ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು. ನನಗಿಂತ ಹಿರಿಯರಾದ ಅಂಬರೀಶ್‌ ಅಣ್ಣನಂತೆ ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದರು, ಕಳೆದ ವಾರವಷ್ಟೇ ದೂರವಾಣಿ ಕರೆ ಮಾಡಿ, ಆರೋಗ್ಯ ನೋಡಿಕೋ ಎಂದು ಸಲಹೆ ನೀಡಿದ್ದರು ಎಂದು ಕುಮಾರಸ್ವಾಮಿ ನೆನಪಿಸಿಕೊಂಡರು.

ಮಂಡ್ಯದಲ್ಲಿ ಸಾರ್ವಜನಿಕರ ಅಂತಿಮ ದರ್ಶನದ ನಂತರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ಸೇನಾ ಹೆಲಿಕಾಪ್ಟರ್‌ ಮೂಲಕ ಕರೆತರಲು ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮಂಡ್ಯದಲ್ಲಿ ಭಾನುವಾರ ಸಂಜೆ 5 ಗಂಟೆಯಿಂದ ಬೆಳಗ್ಗೆ ಎಂಟು ಗಂಟೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಸಾವಿರಾರು ಅಭಿಮಾನಿಗಳು ಹುಟ್ಟೂರಿನಲ್ಲಿ ಮಂಡ್ಯದ ಗಂಡಿಗೆ ಅಂತಿಮ ನಮನ ಸಲ್ಲಿಸಿದರು. ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾವಿರಾರು ಅಭಿಮಾನಿಗಳು ಅಂಬಿ ಅಣ್ಣನ ಅಂತಿಮ ದರ್ಶನ ಪಡೆದರು.ಇನ್ನು ಬೆಂಗಳೂರಿನಲ್ಲಿ ಅಂಬರೀಷ್‌ ಅಂತಿಮಯಾತ್ರೆಗೆ ಸಕಲ ಸಿದ್ಧತೆ ಮಾಡಲಾಗಿದೆ. ಕಂಠೀರವ ಕ್ರೀಡಾಂಗಣಲ್ಲಿ ಅಂತಿಮ ಯಾತ್ರೆ ಆರಂಭವಾಗಲಿದ್ದು, ಅಂತ್ಯಕ್ರಿಯೆ ನಡೆಯಲಿರುವ ಕಂಠೀರವ ಸ್ಟುಡಿಯೋವರೆಗೂ ಮೆರವಣಿಗೆ ಸಾಗಲಿದೆ.

About the author

ಕನ್ನಡ ಟುಡೆ

Leave a Comment