ರಾಜ್ಯ ಸುದ್ದಿ

ಮಂಡ್ಯದ ಗಂಡು ಅಂಬಿ ಗಾಗಿ ಸಮಾಧಿ ಬಳಿ ರಾಗಿ ಮುದ್ದೆ, ಸಾರು ತಂದ ಅಭಿಮಾನಿ

ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಇಹಲೋಕ ತ್ಯಜಿಸಿ ಹಲವು ದಿನಗಳೇ ಕಳೆದರೂ ಅಭಿಮಾನಿಗಳ ದುಃಖ ಮಾತ್ರ ಈಗಲೂ ಕಡಿಮೆಯಾಗಿಲ್ಲ. ತಮ್ಮ ನೆಚ್ಚಿನ ನಟನನ್ನು ನೋಡಲು ಪ್ರತೀನಿತ್ಯ ಅಭಿಮಾನಿಗಳ ದಂಡು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನೆಚ್ಚಿನ ನಟನಿಗಾಗಿ ಪೂಜಾ ಸಾಮಾಗ್ರಿಗಳು, ಬಾಳೆಹಣ್ಣು, ಹೂವು ಹಣ್ಣುಗಳು ಹಾಗೂ ಅಂಬಿಗೆ ಇಷ್ಟವಾದ ರಾಗಿ ಮುದ್ದೆ, ಮಟನ್ ಸಾರನ್ನು ತೆಗೆದುಕೊಂಡು ಬರುತ್ತಿದ್ದಾರೆ.
ಮಂಡ್ಯ ನಿವಾಸಿ, ಆಟೋ ಚಾಲಕನಾಗಿರುವ ರಾಮಕೃಷ್ಣಯ್ಯ ಎಂಬುವವರು ಕಂಠೀವ ಸ್ಟೇಡಿಯಂನಲ್ಲಿರುವ ಅಂಬರೀಷ್ ಅವರ ಸಮಾಧಿ ಬಳಿ ರಾಗಿ ಮುದ್ದೆ ಹಾಗೂ ಮಟನ್ ಸಾರು ತಂದಿದ್ದರು. ಅಂಬರೀಷ್ ಅವರು ನನಗೆ ದೇವರಿದ್ದಂತೆ. 6 ವರ್ಷಗಳ ಹಿಂದೆ ನನ್ನ ಮಗನಿಗೆ ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿಸಬೇಕಿತ್ತು. ಆದರೆ, ನನ್ನ ಬಳಿ ಹಣವಿರಲಿಲ್ಲ. ಈ ವೇಳೆ ನನಗೆ ಅಂಬಿ ಅಣ್ಣ ಸಹಾಯ ಮಾಡಿದ್ದರು. ಅಣ್ಣನನ್ನು ನೋಡಬೇಕೆಂದು ಎನಿಸಿದಾಗಲೆಲ್ಲಾ ಸಮಾಧಿ ಬಳಿ ನಾನು ತಿನ್ನುವುದಕ್ಕೂ ಮುನ್ನ ಅಣ್ಣನಿಗೆ ಇಷ್ಟವಾರ ರಾಗಿ ಮುದ್ದೆ ಹಾಗೂ ಮಟನ್ ಸಾರನ್ನು ತೆಗೆದುಕೊಂಡು ಬರುತ್ತೇನೆಂದು ರಾಮಕೃಷ್ಣಯ್ಯ ಅವರು ಹೇಳಿದ್ದಾರೆ. ಇದೇ ರೀತಿ ಹಲವಾರು ಜನರು ಪ್ರತೀನಿತ್ಯ ಅಂಬರೀಷ್ ಅವರ ಸಮಾಧಿ ಬಳಿ ಬರುತ್ತಲೇ
ಇರುತ್ತಾರೆ. ಪ್ರತೀನಿತ್ಯ ಸಮಾಧಿ ಬಳಿ ಛಾಯಾಗ್ರಾಹಕರು ಕೂಡ ಭೇಟಿ ನೀಡುತ್ತಿದ್ದು, ಅಭಿಮಾನಿಗಳ ಫೋಟೋಗಳನ್ನು ಕ್ಲಿಕ್ಕಿಸುತ್ತಲೇ ಇರುತ್ತಾರೆ. ವಾರಾಂತ್ಯ ದಿನಗಳಲ್ಲಂತೂ ಸಮಾಧಿ ಬಳಿ ಭೇಟಿ ನೀಡುವ ಅಭಿಮಾನಿಗಳ ಸಂಖ್ಯೆಯಂತೂ ಹೆಚ್ಚಾಗಿಯೇ ಇರುತ್ತದೆ. ಕೆಲವರು ಆಹಾರವನ್ನು ತಂದರೆ, ಇನ್ನು ಕೆಲವರು ಹೂವು, ಹಣ್ಣು, ಪೂಜಾ ಸಾಮಾಗ್ರಿಗಳನ್ನು ತರುತ್ತಿರುತ್ತಿರುತ್ತಾರೆಂದು ಛಾಯಾಗ್ರಾಹಕರೊಬ್ಬರು ಹೇಳಿದ್ದಾರೆ.
ಸಾಮಾಧಿ ಬಳಿ ಪ್ರತೀನಿತ್ಯ ಬರುವ ಮತ್ತೊಬ್ಬರು ಅಭಿಮಾನಿ ತಮ್ಮ ಗೆಳೆಯರನ್ನೂ ತಮ್ಮೊಂದಿಗೆ ಕರೆ ತರುತ್ತಾರೆ. ಕೃಷ್ಣವೇಣಿ ಎಂಬ ಅಂಬಿಯವರ ಅಭಿಮಾನಿ ತನ್ನ ಗೆಳತಿಯರನ್ನೂ ಸಮಾಧಿ ಬಳಿ ಕರೆತಂದು ಸೆಲ್ಫೀಗಳನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ಬೆಂಗಳೂರಿನ ಎಸ್’ಜೆಪಿ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ಇವರು ಪ್ರತೀ ಬಾರಿ ಇತರೆ ರಾಜ್ಯಗಳ ತಮ್ಮ ಗೆಳೆಯರನ್ನು ಕರೆದುಕೊಂಡು ಬರುತ್ತಾರೆಂದು ಹೇಳಿದ್ದಾರೆ.
ಮೊದಲು ನನ್ನ ಸ್ನೇಹಿತರಿಗೆ ಡಾ.ರಾಜ್ ಕುಮಾರ್ ಹಾಗೂ ಅಂಬರೀಷ್ ಅವರ ಸಿನಿಮಾಗಳನ್ನು ನೋಡುವಂತೆ ಮಾಡುತ್ತೇನೆ. ನಂತರ ಅವರ ಸಾವಿನ ಬಳಿಕವೂ ಅವರ ಮೇಲಿರುವ ಪ್ರೀತಿ ಹಾಗೂ ಗೌರವ ಹೇಗಿದೆ ಎಂಬುದನ್ನು ತೋರಿಸಲು ಇಲ್ಲಿಗೆ ಕರೆತರುತ್ತೇನೆಂದು ಕೃಷ್ಣವೇಣಿಯವರು ಹೇಳಿದ್ದಾರೆ.

ಸಮಾಧಿ ಬಳಿಯಿರುವ ಭದ್ರತಾ ಸಿಬ್ಬಂದಿ ಮಾತನಾಡಿ, ಪ್ರತೀನಿತ್ಯ ಸಾಕಷ್ಟು ಅಭಿಮಾನಿಗಳು ಆಗಮಿಸುತ್ತಾರೆ. ಕೆಲವರು ಮದ್ಯವನ್ನು ತೆಗೆದುಕೊಂಡು ಬರಬಹುದೇ ಎಂದು ಕೇಳುತ್ತಾರೆ. ಆದರೆ, ಅದಕ್ಕೆ ನಾವು ಅವಕಾಶ ಮಾಡಿಕೊಟ್ಟಿಲ್ಲ. ಕುಡಿದು ಬರುವ ಅಭಿಮಾನಿಗಳನ್ನೂ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.

About the author

ಕನ್ನಡ ಟುಡೆ

Leave a Comment