ಸಿನಿ ಸಮಾಚಾರ

ಮಂಡ್ಯ ಲೋಕಸಭಾ: ಡಿ ಬಾಸ್ ದರ್ಶನ್‌ಗೆ ಗೋ ಬ್ಯಾಕ್‌ ಎಂದ ನಿಖಿಲ್‌ ಫ್ಯಾನ್ಸ್‌

ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್‌ ಪರ ಅಬ್ಬರದ ಪ್ರಚಾರ ಮಾಡಿದ ನಟ ದರ್ಶನ್‌ಗೆ ಶ್ರೀರಂಗಪಟ್ಟಣ ತಾಲೂಕು ಕೊಕ್ಕರೆಹುಂಡಿಯಲ್ಲಿ ‘ಗೋ ಬ್ಯಾಕ್‌’ ಎಂಬ ಘೋಷಣೆ ತೀವ್ರ ಮುಜುಗರ ಅನುಭವಿಸುವಂತೆ ಮಾಡಿತು.

ಪ್ರಚಾರ ನಿರತ ವಾಹನದ ಮುಂದೆ ಜಮಾಯಿಸಿದ ನಿಖಿಲ್‌ ಅಭಿಮಾನಿಗಳು ಹಾಗೂ ಜೆಡಿಎಸ್‌ ಕಾರ್ಯಕರ್ತರು, ಸುಮಲತಾ ಪರ ಪ್ರಚಾರ ಮಾಡದಂತೆ ‘ಗೋ ಬ್ಯಾಕ್‌’ ಎಂದು ಘೋಷಣೆ ಕೂಗಿ ಅಡ್ಡಿಪಡಿಸಿದ್ದಾರೆ. ಈ ವೇಳೆ ‘ದಾರಿ ಬಿಡ್ರೋ’ ಅಂತಾ ದರ್ಶನ್‌ ಜೊತೆಗಿದ್ದ ಕಾಂಗ್ರೆಸ್‌ ಮುಖಂಡರು ಕೇಳಿಕೊಂಡಿದ್ದಾರೆ. ಇಷ್ಟೆಲ್ಲಾ ನಡೆದರೂ ಯಾವುದಕ್ಕೂ ಪ್ರತಿಕ್ರಿಯಿಸದೆ, ನಗುನಗುತ್ತಲೇ ಮೌನವಾಗಿ ದರ್ಶನ್‌ ಮುಂದೆ ಸಾಗಿದ್ದಾರೆ.

ಅಭಿಮಾನಿಗಳ ಧಮ್ಕಿಗೆ ಮಣಿದ ದರ್ಶನ್‌ : ಸಮಯದ ಅಭಾವದಿಂದ ತಾಲೂಕಿನ ಕೊಕ್ಕರೆಹುಂಡಿ ಗ್ರಾಮದ ಒಳಗೆ ತೆರಳಲು ನಿರಾಕರಿಸಿದ ದರ್ಶನ್‌ಗೆ ‘ನೀವು ಗ್ರಾಮಕ್ಕೆ ಬಾರದಿದ್ದರೆ ನಿಖಿಲ್‌ಗೆ ವೋಟ್‌ ಹಾಕುತ್ತೇವೆ’ ಎಂಬ ಗ್ರಾಮಸ್ಥರ ಬೇಡಿಕೆಗೆ ಮಣಿದ ದರ್ಶನ್‌ ನಂತರ ಗ್ರಾಮಕ್ಕೆ ತೆರಳಿ ಪ್ರಚಾರ ನಡೆಸಿದ ಘಟನೆ ಸೋಮವಾರ ನಡೆದಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಸ್ವತಂತ್ರ ಅಭ್ಯರ್ಥಿ ಸುಮಲತಾ ಪರ ನಟ ದರ್ಶನ್‌ ಪ್ರಚಾರದ ವೇಳೆ ಸಮಯದ ಅಭಾವದಿಂದ ತಾಲೂಕಿನ ಕೊಕ್ಕರೆಹುಂಡಿ ಗ್ರಾಮಕ್ಕೆ ತೆರಳಲು ನಿರಾಕರಿಸಿದರು. ಇದರಿಂದ ದರ್ಶನ್‌ ವಿರುದ್ಧವೇ ಗ್ರಾಮದ ಕೆಲ ಯುವಕರು ಘೋಷಣೆ ಕೂಗಿದರು. ನಂತರ ಗ್ರಾಮಕ್ಕೆ ತೆರಳಿ ಪ್ರಚಾರ ನಡೆಸುವ ಮೂಲಕ ಗ್ರಾಮದ ಯುವಕರು, ಅಭಿಮಾನಿಗಳನ್ನು ಸಮಾಧಾನಪಡಿಸಿದರು.

About the author

ಕನ್ನಡ ಟುಡೆ

Leave a Comment