ರಾಜಕೀಯ

ಮಂಡ್ಯ ಲೋಕ ಸಮರ : ಮಂಡ್ಯಕ್ಕೆ ನಿಖಿಲ್‌ ಕುಮಾರಸ್ವಾಮಿ ಫೈನಲ್‌

ಮಂಡ್ಯ: ಭಾರೀ ಕುತೂಹಲ ಮೂಡಿಸಿದ್ದ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ – ಜೆಡಿಎಸ್‌ ಮೈತ್ರಿ ಸರಕಾರದ ಉಮೇದುವಾರಿಕೆಗೆ ತೆರೆ ಬಿದ್ದಿದೆ. ನಿನ್ನೆಯಷ್ಟೇ ದೋಸ್ತಿಗಳ ನಡುವೆ 20-8 ಮಾದರಿಯಲ್ಲಿ ಸೀಟು ಹಂಚಿಕೆ ಫೈನಲ್‌ ಆಗಿತ್ತು. ಮತ್ತು ಈ ಸಮನ್ವಯದಂತೆ ಭಾರೀ ನಿರೀಕ್ಷೆಗೆ ಕಾರಣವಾಗಿದ್ದ ಮಂಡ್ಯ ಲೋಕಸಭಾ ಕ್ಷೇತ್ರವನ್ನು ಕಾಂಗ್ರೆಸ್‌ ಜೆಡಿಎಸ್‌ ಗೆ ಬಿಟ್ಟುಕೊಟ್ಟಿತ್ತು. ಇಂದು ಮಂಡ್ಯದಲ್ಲಿ ಜೆಡಿಎಸ್‌ ನ ಬೃಹತ್‌ ಸಾರ್ವಜನಿಕ ಸಮಾರಂಭದಲ್ಲಿ ಈ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ನಿಖಿಲ್‌ ಕುಮಾರಸ್ವಾಮಿಯವರನ್ನು ಅಧಿಕೃತವಾಗಿ ಘೋಷಿಸುವುದೆಂದು ನಿರ್ಧಾರವಾಗಿತ್ತು. ಈ ಪ್ರಕಾರವಾಗಿ ಇಂದು ವೇದಿಕೆಯಲ್ಲಿ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್‌ ಶಾಸಕರ ಸಮ್ಮುಖದಲ್ಲಿ ನಿಖಿಲ್‌ ಕುಮಾರಸ್ವಾಮಿ ಅವರ ಹೆಸರನ್ನು ಘೋಷಿಸಿದರು.

ಅಪ್ಪ – ಅಜ್ಜನ ಅನುಪಸ್ಥಿತಿಯಲ್ಲೇ ನಿಖಿಲ್‌ ಅಭ್ಯರ್ಥಿತನ ಘೋಷಣೆ
ಮಂಡ್ಯದಲ್ಲಿ ಇಂದು ಜೆಡಿಎಸ್‌ ಬೃಹತ್‌ ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದು ಈ ಸಭೆಯಲ್ಲಿ ಮಾಜೀ ಪ್ರಧಾನಿ ದೇವೇಗೌಡರು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭಾಗವಹಿಸಲಿದ್ದಾರೆ. ಈ ಕಾರಣದಿಂದ ನಿನ್ನೆ ಹಾಸನದಲ್ಲಿ ನಡೆದಂತೆ ಇಂದೂ ಸಹ ದೇವೇಗೌಡರೇ ಮಂಡ್ಯ ಕ್ಷೇತ್ರಕ್ಕೆ ಮೈತ್ರಿ ಸರಕಾರದ ಸರ್ವಾನುಮತದ ಅಭ್ಯರ್ಥಿಯಾಗಿ ನಿಖಿಲ್‌ ಹೆಸರನ್ನು ಘೋಷಿಸುತ್ತಾರೆಂದೇ ನಿರೀಕ್ಷಿಸಲಾಗಿತ್ತು. ಆದರೆ ಹನ್ನೆರಡು ಗಂಟೆಯೊಳಗೆ ಅಭ್ಯರ್ಥಿಯ ಹೆಸರನ್ನು ಘೋಷಿಸಬೇಕಾಗಿದ್ದ ಅನಿವಾರ್ಯತೆ ಇದ್ದುದರಿಂದ ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ಅವರೇ ವೇದಿಕೆಯಲ್ಲಿ ನಿಖಿಲ್‌ ಹೆಸರನ್ನು ಘೋಷಿಸಿದರು, ಮತ್ತು ಇದಕ್ಕೆ ದೇವೇಗೌಡರೇ ಸಮ್ಮತಿಯನ್ನು ಸೂಚಿಸಿದ್ದಾರೆ ಎಂದೂ ಸಹ ತಮ್ಮಣ್ಣ ಅವರು ಈ ಸಂದರ್ಭದಲ್ಲಿ ತಿಳಿಸಿದರು. ಜ್ಯೋತಿಷಿಗಳ ಸೂಚನೆಯಂತೆ ಹನ್ನೆರಡು ಗಂಟೆಯೊಳಗೆ ನಿಖಿಲ್‌ ಅಭ್ಯರ್ಥಿತನವನ್ನು ಘೋಸಿಸಬೇಕಾದ ಅನಿವಾರ್ಯತೆ ಇದ್ದಿರಬಹದೆಂದು ಇದೀಗ ಊಹಿಸಲಾಗುತ್ತಿದೆ. ಹೀಗಾಗಿ ತಮ್ಮ ಬರುವಿಕೆಗೆ ಕಾಯದೇ ನಿಖೀಲ್‌ ಹೆಸರನ್ನು ಘೋಷಿಸುವಂತೆ ದೇವೇಗೌಡರು ಮತ್ತು ಕುಮಾರಸ್ವಾಮಿ ಸೂಚಿಸಿರುವ ಸಾಧ್ಯತೆಗಳಿವೆ.

About the author

ಕನ್ನಡ ಟುಡೆ

Leave a Comment