ರಾಜ್ಯ ಸುದ್ದಿ

ಮಂದಿರ ನಿರ್ಮಾಣಕ್ಕೆ ಒತ್ತಾಯ: ಬಿಜೆಪಿ ಸಂಸದರಲ್ಲಿ ಒಡಕು

ಬೆಂಗಳೂರು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಬಿಜೆಪಿಗೆ ವಿವಿಧ ಸಾಧು ಸಂತರು ಒತ್ತಡ ತರುತ್ತಿರುವ ಮಧ್ಯೆಯೇ ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಸುಗ್ರೀವಾಜ್ಞೆ ತರದಿದ್ದರೆ ರಾಜ್ಯದ ಬಿಜೆಪಿ ಸಂಸದರು ರಾಜೀನಾಮೆ ನೀಡಬೇಕು ಎಂಬ ಪೇಜಾವರ ಶ್ರೀಗಳ ಹೇಳಿಕೆ ಸಂಸದರಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಅಯೋಧ್ಯೆಯಲ್ಲಿ ಶಿವಸೇನೆ ಕಳೆದ ಭಾನುವಾರ ಆಯೋಜಿಸಿದ್ದ ಧರ್ಮ ಸಭೆಯ ಜತೆಗೆ ವಿಶ್ವ ಹಿಂದು ಪರಿಷತ್ ಮತ್ತು ಆರ್‌ಎಸ್‌ಎಸ್‌ ಕೂಡ ಸಭೆ ಆಯೋಜಿಸಿ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಅದರ ಪ್ರಯುಕ್ತ ರಾಜ್ಯದಲ್ಲೂ ಧರ್ಮ ಸಂಸದ್ ಆಯೋಜಿಸಲಾಗಿತ್ತು. ಆದರೆ ಅಂಬರೀಶ್ ನಿಧನವಾಗಿದ್ದರಿಂದ ಬೆಂಗಳೂರಿನ ಧರ್ಮ ಸಂಸದ್ ಅನ್ನು ಮುಂದೂಡಲಾಗಿತ್ತು.

ಮಂಗಳೂರಿನಲ್ಲಿ ನಡೆದ ಸಭೆಯಲ್ಲಿ ಪೇಜಾವರ ವಿಶ್ವೇಶತೀರ್ಥ ಶ್ರೀಗಳು ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿದ್ದರು. ಮಂದಿರ ನಿರ್ಮಾಣಕ್ಕೆ ಕೇಂದ್ರ ಸರಕಾರ ಸುಗ್ರೀವಾಜ್ಞೆ ತಾರದಿದ್ದರೆ ಬಿಜೆಪಿ ಸಂಸದರು ರಾಜೀನಾಮೆ ನೀಡಬೇಕು ಎಂದಿದ್ದರು. ಅದರಂತೆ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಪೇಜಾವರ ಸ್ವಾಮಿಗಳ ಮಾತಿಗೆ ಒಲವು ಹೊಂದಿದ್ದರೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಮಾತ್ರ ಅದಕ್ಕೆ ಒಪ್ಪಿಗೆ ಸೂಚಿಸಿಲ್ಲ. ಕೇಂದ್ರ ಮತ್ತು ಪಕ್ಷದ ನಿರ್ಧಾರದಂತೆ ನಡೆದುಕೊಳ್ಳುತ್ತೇನೆ ಹೊರತು ಇತರರ ಅಭಿಪ್ರಾಯಕ್ಕೆ ಸಮ್ಮತಿಯಿಲ್ಲ ಎಂದಿದ್ದಾರೆ. ಹೀಗಾಗಿ ಕರಾವಳಿ ಭಾಗದ ಸಂಸದರಲ್ಲಿ ಮಂದಿರ ನಿರ್ಮಾಣದ ಕುರಿತು ದ್ವಂದ್ವ ನಿಲುವು ಗೋಚರಿಸಿದೆ.

About the author

ಕನ್ನಡ ಟುಡೆ

Leave a Comment