ರಾಷ್ಟ್ರ ಸುದ್ದಿ

ಮಗನ ಮದುವೆಗೆ ರಾಜ್ ಠಾಕ್ರೆಯಿಂದ ರಾಹುಲ್ ಗಾಂಧಿಗೆ ಅಹ್ವಾನ, ಪ್ರಧಾನಿ ಮೋದಿಗಿಲ್ಲ ಆಹ್ವಾನ

ಮುಂಬೈ: ಮಹಾರಾಷ್ಟ್ರ ನವನಿರ್ಮಾಣ ಸೇನೆ ಅಧ್ಯಕ್ಷ ರಾಜ್​ ಠಾಕ್ರೆ ತಮ್ಮ ಮಗನ ಮದುವೆಗೆ ರಾಹುಲ್ ಗಾಂಧಿ, ಶರದ್​ ಪವಾರ್​, ಸುಶೀಲ್​ ಕುಮಾರ್​ ಶಿಂಧೆ ಮುಂತಾದ ನಾಯಕರಿಗೆ ಆಹ್ವಾನ ನೀಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿಲ್ಲ ಎಂದು ತಿಳಿದುಬಂದಿದೆ.
ಹೌದು.. ಲೋಕಸಭಾ ಚುನಾವಣೆಯಲ್ಲಿ ಎನ್​ಸಿಪಿ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮುಂದಾಗಿರುವ ಎಂಎನ್ ಎಸ್ ಮುಖ್ಯಸ್ಥ ರಾಜ್ ಠಾಕ್ರೆ ತಮ್ಮ ಮಗನ ಮದುವೆಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಹ್ವಾನ ನೀಡಿಲ್ಲ. ಕನಿಷ್ಠ ಪಕ್ಷ ವಿವಾಹ ಆಮಂತ್ರಿತರ ಪಟ್ಟಿಯಲ್ಲೂ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರಿಲ್ಲ ಎಂದು ಹೇಳಲಾಗುತ್ತಿದೆ. ಎಂಎನ್ ಎಸ್ ಪಕ್ಷದ ಮೂಲಗಳ ಪ್ರಕಾರ ಮುಂಬರವು ಲೋಕಸಭಾ ಚುನಾವಣೆಯಲ್ಲಿ ಎಂಎನ್ಎಸ್ ಪಕ್ಷ ಕಾಂಗ್ರೆಸ್ ಬೆಂಬಲಿತ ಪಕ್ಷಗಳೊಂದಿಗೆ ಮೈತ್ರಿಗೆ ಮುಂದಾಗಿದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಸೇರಿದಂತೆ ಸುಶೀಲ್​ ಕುಮಾರ್​ ಶಿಂಧೆ, ಪೃಥ್ವಿರಾಜ್​ ಚೌಹಾಣ್, ಮಿಲಿಂದ್​ ಡಿಯೋರ ಅವರನ್ನು ಆಹ್ವಾನಿಸಲು ಠಾಕ್ರೆ ನಿರ್ಧರಿಸಿದ್ದಾರೆ. ಜೊತೆಗೆ, ಎನ್​ಸಿಪಿ ನಾಯಕರಾದ ಶರದ್ ಪವಾರ್, ಅಜಿತ್​ ಪವಾರ್, ಸುನೀಲ್​ ತತ್ಕರೆ, ಜಯಂತ್​ ಪಾಟೀಲ್ ಮುಂತಾದ ನಾಯಕರನ್ನು ಆಹ್ವಾನಿಸಿದ್ದಾರೆ. ಆದರೆ, ಈ ವಿವಾಹದ ಆಹ್ವಾನಿತರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರೇ ಇಲ್ಲ.
ಇತ್ತೀಚೆಗಷ್ಟೇ ಉದ್ಧವ್​ ಠಾಕ್ರೆ ಅವರನ್ನು ಭೇಟಿಯಾಗಿದ್ದ ರಾಜ್​ ಠಾಕ್ರೆ ಅವರ ಕುಟುಂಬದವರನ್ನು ಮದುವೆಗೆ ಆಹ್ವಾನಿಸಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್​ ಹಾಗೂ ಬಿಜೆಪಿ ನಾಯಕ ನಿತಿನ್​ ಗಡ್ಕರಿ ಅವರಿಗೂ ಆಹ್ವಾನ ನೀಡಲಾಗಿತ್ತು.
2009ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಕಿಂಗ್​ ಮೇಕರ್​ ಆಗಿದ್ದ ಎಂಎನ್​ಎಸ್​ 2014ರ ಲೋಕಸಭಾ ಚುನಾವಣೆಯಲ್ಲಿ ತೀವ್ರ ಮುಖಭಂಗವನ್ನು ಅನುಭವಿಸಿತ್ತು. ಇದೀಗ 2019ರಲ್ಲಿ ಮೈತ್ರಿ ಮಾಡಿಕೊಂಡು ಚುನಾವಣೆಗೆ ಸ್ಪರ್ಧಿಸುವ ಮೂಲಕ ಪಕ್ಷಕ್ಕೆ ಮತ್ತೊಮ್ಮೆ ಜೀವ ತುಂಬುವ ಪ್ರಯತ್ನದಲ್ಲಿದ್ದಾರೆ.

About the author

ಕನ್ನಡ ಟುಡೆ

Leave a Comment