ದೇಶ ವಿದೇಶ

ಮತ್ತೆ ಉದ್ಧಟತನ ತೋರಿದ ಪಾಕ್ ಗೆ ತಕ್ಕಪಾಠ, ವಾಯುಗಡಿ ಉಲ್ಲಂಘಿಸಿದ ಪಾಕ್ ಡ್ರೋಣ್ ಧ್ವಂಸ

ಅಮೃತಸರ: ಗಡಿಯಲ್ಲಿ ಮತ್ತೆ ಪಾಕಿಸ್ತಾನ ಉದ್ಧಟತನ ತೋರಿದ್ದು, ಇದಕ್ಕೆ ಖಡಕ್ ತಿರುಗೇಟು ನೀಡಿರುವ ಭಾರತೀಯ ಸೇನೆ ವಾಯುಗಡಿ ಉಲ್ಲಂಘಿಸಿದ ಪಾಕಿಸ್ತಾನದ ಡ್ರೋಣ್ ಅನ್ನು ಹೊಡೆದುರುಳಿಸಿದೆ. ಭಾರತದ ಗಡಿ ಭದ್ರತಾ ಪಡೆಯ ಸೈನಿಕರು ಪಂಜಾಬಿನ ಹಳ್ಳಿಯೊಂದರಲ್ಲಿ ಹಾರಾಡುತ್ತಿದ್ದ ಪಾಕಿಸ್ತಾನಕ್ಕೆ ಸಂಬಂಧಿಸಿದ ಡ್ರೋನ್ ವೊಂದನ್ನು ಹೊಡೆದುರುಳಿಸಿದ್ದಾರೆ ಎನ್ನಲಾಗಿದೆ. ಡ್ರೋಣ್ ಹಾರಾಟದ ನಂತರ ಈ ಭಾಗದಲ್ಲಿ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಪಂಜಾಬಿನ ತರ್ನ್ ತರಣ್ ಜಿಲ್ಲೆಯ ಖೆಮ್ ಕರಣ್ ಸೆಕ್ಟರ್ ಬಳಿ ಪಾಕಿಸ್ತಾನಕ್ಕೆ ಸೇರಿದ ಡ್ರೋಣ್ ವೊಂದು ಹಾರಾಡುತ್ತಿತ್ತು. ಇದು ಗಡಿ ಭದ್ರತಾ ಪಡೆಯ ಸಿಬ್ಬಂದಿಯ ಗಮನಕ್ಕೆ ಬರುತ್ತಿದ್ದಂತೆಯೇ ಅದನ್ನು ಹೊಡೆದುರುಳಿಸಲಾಗಿದೆ. ಆದರೆ ಹೊಡೆದುರುಳಿಸಲಾದ ಡ್ರೋಣ್ ಪಾಕಿಸ್ತಾನದ ನೆಲಕ್ಕೆ ಬಿದ್ದಿದೆಯೋ, ಭಾರತದ ನೆಲದಲ್ಲೇ ಬಿದ್ದಿದೆಯೋ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ಹಿಂದೆ ಇದೇ ಏಪ್ರಿಲ್ 02 ರಂದು ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನದ ಸೈನಿಕರು ಅಪ್ರಚೋದಿತ ಕದನ ವಿರಾಮ ಉಲ್ಲಂಘನೆ ಮಾಡಿದ್ದರು. ಭಾರತ- ಪಾಕ್ ಗಡಿ ಭಾಗದ ರಜೌರಿ, ಪೂಂಛ್ ಜಿಲ್ಲೆಯಲ್ಲಿ ಪಾಕಿಸ್ತಾನಿ ಸೇನೆಯು ಅಪ್ರಚೋದಿತ ಶೆಲ್ಲಿಂಗ್ ನಡೆಸಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಭಾರತೀಯ ಸೇನೆ, ಪಾಕಿಸ್ತಾನದ ಏಳು ಸೇನಾ ಪೋಸ್ಟ್ ಗಳನ್ನು ಧ್ವಂಸ ಮಾಡಿತ್ತು.

About the author

ಕನ್ನಡ ಟುಡೆ

Leave a Comment