ರಾಷ್ಟ್ರ ಸುದ್ದಿ

ಮತ್ತೆ ಜೈಶ್ ಉಗ್ರರ ಕುಕೃತ್ಯ: ಕಾಳಿಂದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟ

ಕಾನ್ಪುರ: ಪುಲ್ವಾಮದಲ್ಲಿ ಕಾರ್ ಬಾಂಬ್ ಸ್ಫೋಟದ ಮೂಲಕ 44 ಯೋಧರ ಸಾವಿಗೆ ಕಾರಣವಾಗಿದ್ದ ಜೈಶ್ ಉಗ್ರ ಸಂಘಟನೆ ಇದೀಗ ಮತ್ತೊಂದು ವಿಧ್ವಂಸಕ್ಕ ಕೈ ಹಾಕಿದ್ದು ಉಗ್ರರು ಅಡಗಿಸಿಟ್ಟಿದ್ದ ಬಾಂಬ್ ವೊಂದು ಕಾಳಿಂದಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ಸ್ಫೋಟವಾಗಿದೆ.
ಉತ್ತರ ಪ್ರದೇಶದ ಕಾನ್ಪುರ ಬಳಿ ಕಾನ್ಪುರ ದಿಂದ ಭಿವಾಂಡಿಗೆ ಹೊರಡಲು ಸಿದ್ಧವಾಗಿದ್ದ ರೈಲಿನಲ್ಲಿ ಈ ಸ್ಫೋಟ ಸಂಭವಿಸಿದ್ದು, ಕೂಡಲೇ ಘಟನಾ ಸ್ಥಳಕ್ಕೆ ರೈಲ್ವೇ ಪೊಲೀಸರು ಮತ್ತು ರೈಲ್ವೇ ಅಧಿಕಾರಿಗಳು ದೌಡಾಯಿಸಿದ್ದಾರೆ. ಕಡಿಮೆ ಪ್ರಮಾಣದ ತೀವ್ರತೆ ಸ್ಫೋಟವಾದ್ದರಿಂದ ಅಷ್ಟೇನೂ ಸಾವುನೋವುಗಳಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಘಟನೆಗೆ ಸಂಬಂಧಿಸಿದಂತೆ ತನಿಖೆ ಆದೇಶ ನೀಡಿದ್ದೇವೆ ಎಂದು ಕಾನ್ಪುರ ರೈಲ್ವೇ ನಿರ್ವಹಣಾಧಿಕಾರಿ ಅವಿನಾಶ್ ಚಂದ್ರ ಮಾಹಿತಿ ನೀಡಿದ್ದಾರೆ. ಕಾಳಿಂದಿ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಂದರ ಶೌಚಾಲಯದಲ್ಲಿ ಈ ಸ್ಫೋಟ ಸಂಭವಿಸಿದ್ದು, ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ತೊಂದರೆಯಾಗಿಲ್ಲ ಎಂದು ಮಾಹಿತಿ ನೀಡಿದ್ದಾರೆ. ಭಿವಾಂಡಿಗೆ ತೆರಳುತ್ತಿದ್ದ ರೈಲು ಬರ್ರಾಜ್ ಪುರ್ ಸ್ಟೇಷನ್ ನಲ್ಲಿ ನಿಂತಾಗ ಈ ಸ್ಫೋಟ ಸಂಭವಿಸಿದೆ ಎನ್ನಲಾಗಿದೆ. ಅಲ್ಲದೆ ರೈಲಿನಲ್ಲಿ ಜೈಶ್ ಉಗ್ರ ಸಂಘಟನೆಯ ಕರಪತ್ರಗಳೂ ಕೂಡ ಸಿಕ್ಕಿದ್ದು, ಪತ್ರದಲ್ಲಿ ರೈಲು ಸ್ಫೋಟಿಸುವ ಮತ್ತು ವಿಧ್ವಂಸಕ ಕೃತ್ಯವೆಸಗುವ ಬೆದರಿಕೆ ಹಾಕಲಾಗಿದೆ.
ಇದೀಗ ಈ ಘಟನೆ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ರೈಲ್ವೇ ಪೊಲೀಸರು ರೈಲು ನಿಲ್ದಾಣಗಳಾದ್ಯಂತ ಹೈ ಅಲರ್ಟ್ ಘೋಷಣೆ ಮಾಡಿದ್ದು, ತೀವ್ರ ತಪಾಸಣೆಯಲ್ಲಿ ತೊಡಗಿದ್ದಾರೆ. ಅಂತೆಯೇ ಹೆಚ್ಚುವರಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಿ ಪ್ರಯಾಣಿಕರ ಬ್ಯಾಗ್ ಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಇದೇ ಫೆಬ್ರವರಿ 14ರಂದು ಇದೇ ಜೈಶ್ ಉಗ್ರ ಸಂಘಟನೆ ಪುಲ್ವಾಮ ಬಳಿ ಸಂಚರಿಸುತ್ತಿದ್ದ ಸೇನಾಪಡೆಗಳ ಮೇಲೆ ಸುಮಾರು 350 ಕೆಜಿ ತೂಕದ ಸ್ಫೋಟಕಗಳನ್ನು ನುಗ್ಗಿಸಿ ಬಾಂಬ್ ಸ್ಫೋಟಿಸಿ 44 ಮಂದಿ ಯೋಧರ ಹತ್ಯೆ ಮಾಡಿತ್ತು.

About the author

ಕನ್ನಡ ಟುಡೆ

Leave a Comment