ರಾಷ್ಟ್ರ ಸುದ್ದಿ

ಮಧ್ಯಪ್ರದೇಶದ ಮತ ಎಣಿಕೆ ಕಾರ್ಯ ಕೊನೆಗೂ ಮುಕ್ತಾಯ: ಕೈಗೆ 114 ಸ್ಥಾನ, ಸ್ಪಷ್ಟ ಬಹುಮತಕ್ಕೆ 2 ಸ್ಥಾನದ ಕೊರತೆ

ಭೋಪಾಲ್: ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಪ್ರಕಟವಾಗಿತ್ತಾದರೂ, ಮಧ್ಯ ಪ್ರದೇಶದಲ್ಲಿ ಮಾತ್ರ ಮತಎಣಿಕೆ ಕಾರ್ಯ ಮಾತ್ರ ಇನ್ನೂ ಮುಕ್ತಾಯವಾಗಿರಲಿಲ್ಲ.
ಗೊಂದಲ ಮತ್ತು ಅಧಿಕಾರಿಗಳ ಯಡವಟ್ಟಿನಿಂದಾಗಿ ಇಂದು ಮುಂಜಾನೆಯವರೆಗೂ ಫಲಿತಾಂಶ ಪ್ರಕಟಣೆನೆ ತಡವಾಗಿತ್ತು. ಆದರೀಗ ಕೊನೆಗೂ ಚುನಾವಣಾ ಆಯೋಗ ಮಧ್ಯ ಪ್ರದೇಶದಲ್ಲಿ ಮತಎಣಿಕೆ ಕಾರ್ಯ ಮುಕ್ತಾಯಗೊಳಿಸಿದ್ದು, ಒಟ್ಟು 230 ಸ್ಥಾನಗಳ ಪೈಕಿ ಕಾಂಗ್ರೆಸ್ ಪಕ್ಷಕ್ಕೆ 114 ಸ್ಥಾನ ಲಭಿಸಿದ್ದು, ಬಿಜೆಪಿ 109 ಸ್ಥಾನಗಳನ್ನು ಗಳಿಸಿದೆ. ಇನ್ನು ಮಹಾ ಘಟ್ ಬಂಧನ್ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಎಸ್ ಪಿ 1 ಸ್ಥಾನ ಪಡೆದಿದ್ದರೆ, ಬಿಎಸ್ ಪಿ 2 ಸ್ಥಾನಗಳಿಸಿದೆ.

ಇನ್ನು ನಾಲ್ಕು ಕ್ಷೇತ್ರಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಗೆದ್ದಿದ್ದು, ಸರ್ಕಾರ ರಚನೆಯಲ್ಲಿ ನಿರ್ಣಾಯ ಪಾತ್ರ ವಹಿಸುವ ಸಾಧ್ಯತೆ ಇದೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್​ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆಯಾದರೂ, ಕೇವಲ ಎರಡು ಸ್ಥಾನಗಳಿಂದ ಸರಳ ಬಹುಮತದಿಂದ ವಂಚಿತವಾಗಿದೆ. ಹೀಗಿರುವಾಗಲೇ ಕಾಂಗ್ರೆಸ್​ ಮತ್ತು ಬಿಜೆಪಿ ಪಕ್ಷಗಳೆರಡೂ ಸರ್ಕಾರ ರಚನೆ ಮಾಡಲು ರಾಜ್ಯಪಾಲರ ಬಳಿ ಹಕ್ಕು ಮಂಡಿಸಿವೆ. ಹೀಗಾಗಿ ಇಲ್ಲಿ ಯಾರು ಸರ್ಕಾರ ರಚನೆ ಮಾಡಬಹುದು ಎಂಬುದರ ಬಗ್ಗೆ ಕುತೂಹಲವೂ ಇದೆ.

About the author

ಕನ್ನಡ ಟುಡೆ

Leave a Comment