ರಾಷ್ಟ್ರ ಸುದ್ದಿ

ಮಧ್ಯ ಪ್ರದೇಶ: ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಮಹಿಳೆಯರ ಸುರಕ್ಷತೆ, ಉದ್ಯೋಗ, ಪಾರದರ್ಶಕ ಆಡಳಿತದ ಭರವಸೆ

ಭೂಪಾಲ್ : ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಬಿಜೆಪಿ ಇಂದು ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಕೇಂದ್ರ ಸಚಿವರಾದ ಅರುಣ್ ಜೇಟ್ಲಿ, ಧರ್ಮೇಂದ್ರ ಪ್ರಧಾನ್ ಸಮ್ಮುಖದಲ್ಲಿ ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್  ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದರು.

ಪಾರದರ್ಶಕ ಆಡಳಿತ, ಮಹಿಳೆಯರಿಗೆ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು, ಉದ್ಯೋಗ, ಉತ್ತಮ ಶಿಕ್ಷಣ ಸೌಕರ್ಯ ಕಲ್ಪಿಸಲಾಗುವುದು, ಮೂಲಸೌಕರ್ಯ ಅಭಿವೃದ್ದಿಗೊಳಿಸಿ ರೈತರ ಆದಾಯವನ್ನು ಉತ್ತಮಗೊಳಿಸಲಾಗುವುದು, ಆರೋಗ್ಯ ಸೌಕರ್ಯ ಆಧುನೀಕರಣ, ಬಡ ಮಕ್ಕಳ ವ್ಯಾಸಂಗಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಭರವಸೆ ನೀಡಲಾಗಿದೆ. ಭಾರತೀಯ ತಳಿಯ ಗೋವುಗಳಿಗೆ ಪ್ರೋತ್ಸಾಹಿಸುವುದಾಗಿ ಭರವಸೆ ನೀಡಿರುವ ಬಿಜೆಪಿ ಆಧುನಿಕ ರೀತಿಯಲ್ಲಿ ಗೋಶಾಲೆಯನ್ನು ಮಾರ್ಪಡಿಸಲಾಗುವುದು, ಸಿಪ್ರಾ ನದಿ ಬಳಿ ಧಾರ್ಮಿಕ ಕೇಂದ್ರಗಳನ್ನು ಅಭಿವೃದ್ದಿಗೊಳಿಸಿ  ಪಾರಂಪರಿಕ  ತಾಣವನ್ನಾಗಿ ಮಾಡಲಾಗುವುದು ಎಂದು ಹೇಳಲಾಗಿದೆ.

ಸಮಾಜದ ಎಲ್ಲಾ ವರ್ಗದ ಕಲ್ಯಾಣದ ನಿಟ್ಟಿನಲ್ಲಿ   ಪ್ರಣಾಳಿಕೆ ರೂಪಿಸಲಾಗಿದೆ. ಮುಂದಿನ ಐದು ವರ್ಷಗಳ ಕಾಲ ಬಿಜೆಪಿ ಆಡಳಿತಕ್ಕೆ ಇದು ನೀಲಿನಕ್ಷೆಯಾಗಿದೆ. ಮುಂದಿನ ಬಾರಿ ಇನ್ನೂ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಜಾರಿಗೊಳಿಸಲಿದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ಹಾಣ್ ಹೇಳಿದರು.ಬಡ ಜನರಿಗೆ ಆಹಾರ, ಬಟ್ಟೆ, ವಸತಿ, ಶಿಕ್ಷಣ, ವಿದ್ಯುತ್ ಸೌಕರ್ಯ ಹಾಗೂ ಚಿಕಿತ್ಸಾ ಸೌಲಭ್ಯ ನೀಡುವುದು ನಮ್ಮ ಗುರಿಯಾಗಿದೆ. ಕಳೆದ ಎರಡು ಮೂರು ತಿಂಗಳಿನಿಂದ ಜಾರಿಯಾಗಿರುವ ಸಾಂಬಲ್ ಯೋಜನೆ ಅತ್ಯುತ್ತಮ ಯೋಜನೆಯಾಗಿದೆ. ಅದನ್ನು ಎಚ್ಚರಿಕೆಯಿಂದ ಮುಂದುವರೆಸಲಾಗುವುದು ಎಂದು ತಿಳಿಸಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ವಿತ್ತ ಸಚಿವ ಅರುಣ್ ಜೇಟ್ಲಿ ಮಾತನಾಡಿ,  ರಾಜಕೀಯ ಕಾರಣಕ್ಕಾಗಿ ನೋಟ್ ಅಮಾನ್ಯೀಕರಣಗೊಳಿಸಿಲ್ಲ, ಇದು ಅತ್ಯಂತ ಹೆಚ್ಚಿನ  ನೈತಿಕತೆಯಿಂದ ಕೂಡಿದ್ದಾಗಿದೆ ಎಂದು ಸಮರ್ಥಿಸಿಕೊಂಡರು. ನೋಟು ಅಮಾನ್ಯತೆಯಿಂದ  ತೆರಿಗೆ ಪಾವತಿ ಹೆಚ್ಚಾಗಿದೆ. ಅಲ್ಲದೇ ಕೇಂದ್ರ ಹಾಗೂ ರಾಜ್ಯದ ಆದಾಯ ಸಂಗ್ರಹ ಪ್ರಮಾಣದಲ್ಲಿ ತೀವ್ರ ರೀತಿಯಲ್ಲಿ ಹೆಚ್ಚಾಗಿದೆ  ಎಂದು ಅರುಣ್  ಜೇಟ್ಲಿ ಹೇಳಿದರು.

About the author

ಕನ್ನಡ ಟುಡೆ

Leave a Comment