ಕ್ರೀಡೆ

ಮನ್‌ಪ್ರೀತ್‌ ಸಾರಥ್ಯ ಭಾರತ ಹಾಕಿ ತಂಡಕ್ಕೆ

ಬೆಂಗಳೂರು : ಮಿಡ್‌ ಫೀಲ್ಡರ್‌ ಮನ್‌ಪ್ರೀತ್‌ ಸಿಂಗ್‌ ಏ.4ರಂದು ಆರಂಭವಾಗಲಿರುವ ಆಸ್ಪ್ರೇಲಿಯಾದ ಗೋಲ್ಡ್‌ ಕೋಸ್ಟ ಕಾಮನ್‌ವೆಲ್ತ್‌ ಕ್ರೀಡಾ ಕೂಟದಲ್ಲಿ ಭಾರತ ಪುರುಷರ ಹಾಕಿ ತಂಡವನ್ನು ಮುನ್ನಡೆಸಲಿದ್ದಾರೆ.ಹಾಕಿ ಇಂಡಿಯಾ ತಂಡ ಮಂಗಳವಾರ ಪ್ರಕಟಿಸಿದ 18 ಸದಸ್ಯರ ಭಾರತ ತಂಡದಿಂದ ಅನುಭವಿ ಹಾಗೂ ಭಾರತ ತಂಡದ ಮಾಜಿ ನಾಯಕ ಸರ್ದಾರ್‌ ಸಿಂಗ್‌ ಅವರನ್ನು ಕೈಬಿಡಲಾಗಿದೆ.

ಪಾಕಿಸ್ತಾನ, ಮಲೇಷ್ಯಾ, ವೇಲ್ಸ್‌ ಮತ್ತು ಇಂಗ್ಲೆಂಡ್‌ ತಂಡಗಳೊಂದಿಗೆ ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿರುವ ಭಾರತ ತಂಡ ಏ. 7ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಅಭಿಯಾನ ಆರಂಭಿಸಲಿದೆ. ಮತ್ತೊಬ್ಬ ಮಿಡ್‌ ಫೀಲ್ಡರ್‌ ಚಿಂಗ್ಲೆನ್ಸನ ಸಿಂಗ್‌ ತಂಡದ ಉಪನಾಯಕರಾಗಿ ನೇಮಕಗೊಂಡಿದ್ದಾರೆ.ಮನ್‌ಪ್ರೀತ್‌ ನಾಯಕತ್ವದ ಭಾರತ ತಂಡ 2017ರಲ್ಲಿ ಏಷ್ಯಾ ಕಪ್‌ ಪ್ರಶಸ್ತಿ ಎತ್ತಿ ಹಿಡಿದಿತ್ತಲ್ಲದೆ ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಹಾಕಿ ವಿಶ್ವ ಲೀಗ್‌ ಫೈನಲ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿತ್ತು.

ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌, ಕೋಥಾಜಿತ್‌ ಸಿಂಗ್‌, ಗುರಿಂದರ್‌ ಸಿಂಗ್‌ ಮತ್ತು ಅಮಿತ್‌ ರೋಹಿದಾಸ್‌ ಜತೆ ಡ್ರ್ಯಾಗ್‌ ಫ್ಲಿಕ್‌ ತಜ್ಞ ರೂಪಿಂದರ್‌ ಪಾಲ್‌ ಸಿಂಗ್‌ ಭಾರತ ತಂಡದ ರಕ್ಷಣಾ ವಿಭಾಗದ ಪ್ರಮುಖ ಅಸ್ತ್ರಗಳೆನಿಸಿದ್ದಾರೆ. ಈ ಮಧ್ಯೆ, ಅನುಭವಿ ಗೋಲ್‌ ಕೀಪರ್‌ ಪಿ.ಆರ್‌. ಶ್ರೀಜೇಶ್‌ ಅವರ ಉಪಸ್ಥಿತಿ ಭಾರತದ ಗೋಲ್‌ಪೋಸ್ಟ್‌ಗೆ ರಕ್ಷಣೆಯಾಗಿದೆ.

ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಕಳೆದ ವರ್ಷ ಭುವನೇಶ್ವರದಲ್ಲಿ ನಡೆದ ಟೂರ್ನಿಯಲ್ಲಿ ಭಾರತ ತಂಡದ ಪರ ಅದ್ಭುತ ಪ್ರದರ್ಶನ ನೀಡಿದ ಆಟಗಾರರಲ್ಲಿ ಒಬ್ಬರಾಗಿದ್ದ 22 ವರ್ಷದ ಸೂರಜ್‌ ಕರ್ಕೇರಾ ತಂಡಕ್ಕೆ ಮತ್ತೆ ಮರಳಿದ್ದಾರೆ. ಹಿರಿಯ ಆಟಗಾರ ಚಿಂಗ್ಲೆನ್ಸನ ಮತ್ತು ಯುವ ಆಟಗಾರ ಸುಮಿತ್‌ ಹಾಗೂ ವಿವೇಕ್‌ ಸಾಗರ್‌ ಪ್ರಸಾದ್‌ ಬೆಂಬಲದೊಂದಿಗೆ ನಾಯಕ ಮನ್‌ಪ್ರೀತ್‌ ಸಿಂಗ್‌ ಮಿಡ್‌ ಫೀಲ್ಡ್‌ ವಿಭಾಗವನ್ನು ಮುನ್ನಡೆಸಲಿದ್ದಾರೆ.

ಇನ್ನೂ ಫಾರ್ವರ್ಡ್‌ ವಿಭಾಗದಲ್ಲಿ ಕರ್ನಾಟಕದ ಎಸ್‌.ವಿ. ಸುನಿಲ್‌, ಆಕಾಶ್‌ದೀಪ್‌ ಸಿಂಗ್‌, ಮಂದೀಪ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಾಧ್ಯಾಯ, ಗುರ್ಜಂತ್‌ ಸಿಂಗ್‌ ಮತ್ತು ದಿಲ್‌ಪ್ರೀತ್‌ ಸಿಂಗ್‌ ಪ್ರಮುಖರಾಗಿದ್ದಾರೆ. ಕಾಮನ್‌ವೆಲ್ತ್‌ ಕೂಟದ ಹಿಂದಿನ ಎರಡು ಆವೃತ್ತಿಗಳಲ್ಲಿ ಭಾರತ ದ್ವಿತೀಯ ದ್ವಿತೀಯ ಸ್ಥಾನಿಯಾಗಿ ಹೋರಾಟ ಕೊನೆಗೊಳಿಸಿದೆ. ಆದರೆ ಬಾರಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ಹೊಂದಿದೆ.

 

About the author

ಕನ್ನಡ ಟುಡೆ

Leave a Comment