ಸಿನಿ ಸಮಾಚಾರ

ಮರೆಯಾದ ಖ್ಯಾತ ನಿರ್ದೇಶಕ ಕಾಶಿನಾಥ್

ಖ್ಯಾತ ಚಲನಚಿತ್ರ ನಿರ್ದೇಶಕ ಹೊಸ ಅಲೆಯ ಮಾಂತ್ರಿಕ ಕಾಶಿನಾಥ್ ನಮ್ಮನ್ನಗಲಿದ್ದಾರೆ.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರನ್ನು ಕೆಲದಿನಗಳಹಿಂದೆ ಬೆಂಗಳೂರಿನ ಶಿವ ಶಂಕರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಕಾಶಿನಾಥ್ ಇಂದು ಕೊನೆಯುಸಿರೆಳೆದಿದ್ದಾರೆ. ೩೬ ಚಿತ್ರಗಳಲ್ಲಿ ಅಭಿನಯಿಸಿರುವ ಕಾಶಿ ತಮಿಳು ತೆಲಗು ಸೇರಿದಂತೆ ೧೩ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ, ಸುನಿಲ್ ಕುಮಾರ್ ದೇಸಾಯಿ, ಎಸ್ ನಾರಾಯಣ, ಮನೋಹರ್ ಸೇರಿದಂತೆ ಅನೇಕ ಕನ್ನಡ ಚಿತ್ರರಂಗದ ದಿಗ್ಗಜರು ಕಾಶಿ ಗರಡಿಯಲ್ಲಿ ಪಳಗಿದವರು. ತಾನು ಬೆಳೆಯುವುದಲ್ಲದೇ ಹೊಸ ಪ್ರತಿಭೆಗಳನ್ನು ತನ್ನೊಟ್ಟಿಗೆ ಬೆಳೆಸಿದ ಕಾಶಿನಾಥ್ ಸರಳ ಸಜ್ಜನರಾಗಿ ಕನ್ನಡ ಚಿತ್ರರಂಗದಲ್ಲಿ ಮನೆಮಾತಾಗಿದ್ದರು‌. ‘ಉಷ್ ಚಿತ್ರದಲ್ಲಿನ ನಿರ್ದೇಶಕನ ಪಾತ್ರ ಕಾಶಿಯವರ ನಿಜಬದುಕಿನ ಅನಾವರಣವೇ ಆಗಿದೆ.
ಕೆಲಕಾಲ ಚಿತ್ರರಂಗದಿಂದ ದೂರವಿದ್ದ ಅವರು ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಜೂಮ್ ಚಿತ್ರದ ಮೂಲಕ ಸಿನೆಮಾ‌ ಕ್ಷೇತ್ರಕ್ಕೆ ಮರಳ್ಳಿದ್ದರು. ಈ ಚಿತ್ರ ಸೂಪರ್ ಹಿಟ್ ಆಯಿತು.

ಚೌಕ ಚಿತ್ರದಲ್ಲಿ ತಂದೆಯ ಪಾತ್ರದ ಮೂಲಕ ಪ್ರೇಕ್ಷಕರ ಮನ ಸೂರೆಗೊಲ್ಲುವಂತೆ ಮಾಡಿದ್ದರು

ಮೂಲತ: ಉಡುಪಿ ಜಿಲ್ಲೆಯ ಕುಂದಾಪುರದ ಕೋಟೆಶ್ವರ ಗ್ರಾಮದವರಾದ ಕಾಶಿನಾಥ್ ಬದುಕು ಕಂಡುಕೊಂಡಿದ್ದು ಬೆಂಗಳೂರಿನಲ್ಲಿ.

ವಿಜಯ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದ ಕಾಶಿನಾಥ್ ಮುಂದುವರೆದಿದ್ದು ಚಲನಚಿತ್ರರಂಗದಲ್ಲಿ. ಕಾಲೇಜು ದಿನಗಳಲ್ಲೆ ತಂಡವೊಂದನ್ನು ಕಟ್ಟಿಕೊಂಡು ನಾಟಕಗಳನ್ನು ನಿರ್ದೇಶಿಸುತ್ತ ಕಲಾವಿದನಾಗಿ ಬೆಂಗಳೂರಿನ ರಂಗಭೂಮಿಯಲ್ಲಿ ಗುರುತಿಸಿಕೊಂಡಿದ್ದರು.
ನಂತರ ಸುರೇಶ್ ಹೆಬ್ಳಿಕರ್ ಮುಂತಾದ ಸ್ನೇಹಿತರೊಂದಿಗೆ ಸಿನೆಮಾ ಪ್ರಯತ್ನಕ್ಕಿಳಿದರು.

೧೯೭೮ ರಲ್ಲಿ ಅಪರಿಚಿತ ಚಿತ್ರದ ಮೂಲಕ ಕಾಶಿನಾಥ್ ಕನ್ನಡದ ಚಿತ್ರರಸಿಕರ ಮನಗೆದ್ದರು. ೮೦-೯೦ ರ ದಶಕವಂತು ಕಾಶಿನಾಥ್ ಪಾಲಿಗೆ ಸುವರ್ಣಯುಗ. ಒಂದರ ಹಿಂದೊಂದರಂತೆ ಅನಂತನ ಆವಾಂತರ, ಅಜಗಜಾಂತರ, ಅನುಭವ ಚಿತ್ರಗಳು ಅವರಿಗೆ ದೊಡ್ಡ ಯಶಸ್ಸು ತಂದು ಕೊಟ್ಟವು. ಕನ್ನಡ ಚಿತ್ರರಂಗದಲ್ಲಿದ್ದ ಸಿದ್ಧಮಾದರಿಗಳನ್ನೆಲ್ಲ ಮುರಿದು ಹೊಸಮಾದರಿಯ ವಿನೂತನ ಪ್ರಯೋಗಗಳ ಮೂಲಕ ಕಾಶಿನಾಥ್ ಹೊಸ ಅಲೆಯ ನಿರ್ದೇಶಕರಾಗಿ ಯಶಸ್ಸು ಗಳಿದರು. ಸಾಹಸ, ಚಿತ್ರದ ನಾಯಕನ ವೈಭವೀಕರಣ, ಮರಸುತ್ತುವ ಹಾಡುಗಳು ಇಷ್ಟಕ್ಕೆ ಸೀಮಿತವಾಗಿದ್ದ ಕನ್ನಡ ಚಿತ್ರೋದ್ಯಮದಲ್ಲಿ ಬೇರೆ ಮಾದರಿಯ ಚಿತ್ರಗಳು ಗೆಲ್ಲಬಹುದು ಎಂದು ಅನುಭವ ಚಿತ್ರದ ಮೂಲಕ ಕಾಶಿ ತೋರಿಸಿಕೊಟ್ಟರು.
ನಾಯಕನೆಂದರೆ ಹೀಗೆ ಇರಬೇಕೆನ್ನುವ ಸಿದ್ಧ ಮಾದರಿಯನ್ನ ತೊಡೆದು ಹಾಕಿದ ಖ್ಯಾತಿ ಕಾಶಿನಾಥ್ ಗೆ ಸಲ್ಲುತ್ತದೆ. ಈ ಮೂಲಕ ಪ್ರತಿಭೆಯುಳ್ಳ ಯಾರು ಬೇಕಾದರು ನಟಿಸಬಹುದು ಎಂಬುದನ್ನ ಇವರು ಹೊಸ ಪೀಳಿಗೆಗೆ ಮನವರಿಕೆ ಮಾಡಿಕೊಟ್ಟರು..

ಉಪೇಂದ್ರ ಕನ್ನಡ ಚಿತ್ರರಂಗದ ಗಣ್ಯರು ಕಾಶಿ ಅಗಲಿಕೆಗೆ ಕಂಬನಿ ಸುರಿಸಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಆಡು ಮುಟ್ಟದ ಸೊಪ್ಪಿಲ್ಲ‌ ಕಾಶಿನಾಥ್ ಮಾಡದ ಹೊಸ ಪ್ರಯತ್ನಗಳಿಲ್ಲ ಎಂಬಂತೆ ಪ್ರತೀತವಾಗಿದ್ದ ಕಾಶಿನಾಥ್ ಈಗ ನಮ್ಮೊಂದಿಗಿಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಹಿರಿಯ ನಿರ್ದೇಶಕನಿಗೆ ನುಡಿನಮನ ಸಲ್ಲಿಸ ಬೇಕಾದುದು ನಮ್ಮೆಲ್ಲರ ಕರ್ತವ್ಯ.
ಕಾಶಿನಾಥ್ ಅಗಲಿಕೆಯಿಂದ ಕನ್ನಡ ಚಿತ್ರರಂಗ ಹಿರಿಯ ನಟ ನಿರ್ದೇಶಕರೊಬ್ಬರನ್ನು ಕಳೆದುಕೊಂಡಿದೆ. ಎಷ್ಟೋ ಹೊಸ ನಟರು, ನಿರ್ದೇಶಕರು ಚಿತ್ರರಂಗಕ್ಕೆ ಬಂದಿದ್ದಾರೆ. ಆದರೆ ಅವರ್ಯಾರಿಂದಲೂ ಕಾಶಿನಾಥ್ ಅಗಲಿಕೆಯಿಂದ ತೆರವಾದ ಸ್ಥಾನವನ್ನು ತುಂಬಲು ಸಾಧ್ಯವಿಲ್ಲ. ಕಾಶಿನಾಥ್ ರವರ ಆತ್ಮಕ್ಕೆ ಶಾಂತಿ ಸಿಗಲಿ

About the author

ಕನ್ನಡ ಟುಡೆ

Leave a Comment