ರಾಜಕೀಯ

ಮಹತ್ವದ ಸಭೆಯ ಮಾಹಿತಿಯನ್ನು ನೀಡಿಲ್ಲವೆಂದರೆ ಪಕ್ಷಕ್ಕೆ ನನ್ನ ಅಗತ್ಯವಿಲ್ಲವೇ ಡಿಕೆ ಶಿವಕುಮಾರ್‌ ಕಿಡಿ

ಬೆಂಗಳೂರು: ಮಾಹಿತಿ ಕೊರತೆಯಿಂದ ಕೆಪಿಸಿಸಿ ಚುನಾವಣಾ ಸಮಿತಿ ಸಭೆಗೆ ತಡವಾಗಿ ಆಗಮಿಸಿದ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಗರಂ ಆದ ಘಟನೆ ನಡೆದಿದೆ. ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆದ ಈ ಸಭೆ ಮುಗಿಯುವ ಹೊತ್ತಿಗೆ ಶಿವಕುಮಾರ್‌ ಹಾಜರಾದರು. ತಮಗೆ ಮುಂಚಿತವಾಗಿ ಆಹ್ವಾನ ನೀಡದೆ ಇರುವುದರಿಂದ ವಿಳಂಬವಾಯಿತೆಂದು ಈ ವೇಳೆ ದೂರಿದರು. ಈ ಲೋಪಕ್ಕಾಗಿ ಪಕ್ಷದ ಕಚೇರಿ ಉಸ್ತುವಾರಿ ನೋಡಿಕೊಳ್ಳುತ್ತಿರುವ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯನ್ನು ತರಾಟೆಗೆ ತೆಗೆದುಕೊಂಡರು ಎಂದು ಗೊತ್ತಾಗಿದೆ. ”ಇಷ್ಟೊಂದು ಮಹತ್ವದ ಸಭೆಗೆ ಸರಿಯಾಗಿ ಮಾಹಿತಿ ನೀಡಿಲ್ಲ. ಹಾಗಿದ್ದರೆ ಪಕ್ಷಕ್ಕೆ ನನ್ನ ಅಗತ್ಯವಿಲ್ಲವೇ?,” ಎಂದೂ ಸಿಟ್ಟಿನಿಂದ ಡಿಕೆಶಿ ಕೇಳಿದರು ಎನ್ನಲಾಗಿದೆ.

ಹರಿಪ್ರಸಾದ್‌ ಕೋಪತಾಪ: ಈ ನಡುವೆ ರಾಜ್ಯಸಭೆ ಸದಸ್ಯ ಬಿ.ಕೆ.ಹರಿಪ್ರಸಾದ್‌ ಅವರೂ ಕೋಪತಾಪ ಪ್ರದರ್ಶಿಸಿದರು. ಕ್ಷೇತ್ರವಾರು ಮಾತುಕತೆ ನಡೆಯುವಾಗ ಪ್ರತಿ ಹಂತದಲ್ಲೂ ಹರಿಪ್ರಸಾದ್‌ ಮಧ್ಯೆ ಪ್ರವೇಶಿಸುತ್ತಿದ್ದರು. ಇದಕ್ಕೆ ಆಕ್ಷೇಪಿಸಿದ ಸಚಿವ ಕೆ.ಜೆ.ಜಾರ್ಜ್‌, ”ಎಲ್ಲ ವಿಚಾರಕ್ಕೂ ಏಕೆ ಮಧ್ಯೆ ಬಾಯಿ ಹಾಕುತ್ತೀರಿ,” ಎಂದರು. ಸಿಟ್ಟಾದ ಹರಿಪ್ರಸಾದ್‌, ”ನೀವು ಹೇಳಿದ್ದನ್ನಷ್ಟೆ ಕೇಳಿಕೊಂಡು ಹೋಗಲು ಬಂದಿಲ್ಲ. ನಮ್ಮ ಅಭಿಪ್ರಾಯ ತಿಳಿಸಬೇಕಾಗುತ್ತದೆ,” ಎಂದು ತಿರುಗೇಟು ಕೊಟ್ಟರು. ಹರಿಪ್ರಸಾದ್‌ ಬೆಂಬಲಕ್ಕೆ ನಿಂತ ಮಾರ್ಗರೇಟ್‌ ಆಳ್ವ, ”ಎಲ್ಲರ ಅಭಿಪ್ರಾಯ ಆಲಿಸಬೇಕು,” ಎಂಬ ಸಲಹೆ ಕೊಟ್ಟರು. ಈ ಮಧ್ಯೆ ಜಿಲ್ಲಾ ಕಾಂಗ್ರೆಸ್‌ ಸಮಿತಿಗಳಿಂದ ಸಂಭಾವ್ಯರ ಹೆಸರು ತರಿಸಿಕೊಳ್ಳಲಾಗಿದೆಯೇ? ಪಕ್ಷದ ವೀಕ್ಷಕರು ಪ್ರವಾಸ ಮಾಡಿದ್ದಾರೆಯೇ ಎಂದು ಹರಿಪ್ರಸಾದ್‌ ಪ್ರಶ್ನಿಸಿದರು ಎಂದು ತಿಳಿದು ಬಂದಿದೆ.

About the author

ಕನ್ನಡ ಟುಡೆ

Leave a Comment