ರಾಜಕೀಯ

ಮಹತ್ವದ ಸಮನ್ವಯ ಸಮಿತಿ ಸಭೆ ನಾಳೆ

ಬೆಂಗಳೂರು :ರಾಜ್ಯ ರಾಜಕಾರಣವನ್ನು ಬಿಟ್ಟೂ ಬಿಡದೆ ಕಾಡುತ್ತಿರುವ ಅಸ್ಥಿರತೆ ಮಧ್ಯೆಯೇ ‘ದೋಸ್ತಿ’ ಸರಕಾರದ ಮತ್ತೊಂದು ಬಜೆಟ್‌ ಮಂಡನೆಗೆ ಪೂರ್ವಭಾವಿಯಾಗಿ ಗುರುವಾರ (ಜ.24) ಜೆಡಿಎಸ್‌ -ಕಾಂಗ್ರೆಸ್‌ ಸಮನ್ವಯ ಸಮಿತಿಯ ಮಹತ್ವದ ಸಭೆ ನಡೆಯಲಿದೆ.

ಕಳೆದ 2 ವಾರಗಳಿಂದ ನಡೆದ ರಾಜಕೀಯ ಬೆಳವಣಿಗೆ, ರೆಸಾರ್ಟ್‌ ರಾಜಕಾರಣದಲ್ಲಿ ಮಿತ್ರಪಕ್ಷ ಕಾಂಗ್ರೆಸ್‌ ಮಾಡಿಕೊಂಡ ಯಡವಟ್ಟು, ಫೆಬ್ರವರಿ ಮೊದಲ ವಾರ ಆರಂಭವಾಗಲಿರುವ ವಿಧಾನಮಂಡಲ ಜಂಟಿ ಅಧಿವೇಶನ ಸಂದರ್ಭದಲ್ಲಿ ಮೈತ್ರಿ ಸರಕಾರಕ್ಕೆ ಎದುರಾಗಬಹುದಾದ ಇಕ್ಕಟ್ಟು ಒಳಗೊಂಡಂತೆ ಹಲವು ಪ್ರಮುಖ ವಿಚಾರಗಳು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಗೆ ಬರಲಿವೆ.

ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳಲ್ಲಿ ದಿಢೀರ್‌ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆ ಕರೆದು, ಪಕ್ಷದ ಶಾಸಕರನ್ನು ರೆಸಾರ್ಟ್‌ಗೆ ಸ್ಥಳಾಂತರ, ರೆಸಾರ್ಟ್‌ನಲ್ಲಿ ಶಾಸಕರ ನಡುವೆ ನಡೆದ ಬಡಿದಾಟ ಪ್ರಕರಣದ ಬಗ್ಗೆ ಮಿತ್ರಪಕ್ಷ ಜೆಡಿಎಸ್‌ನಲ್ಲಿ ಅಸಮಾಧಾನವಿದೆ. ಏಕಪಕ್ಷೀಯವಾಗಿ ಕಾಂಗ್ರೆಸ್‌ ತುಳಿದ ಹೆಜ್ಜೆಗಳಿಂದ ಮೈತ್ರಿ ಸರಕಾರದ ವರ್ಚಸ್ಸಿಗೆ ಪೆಟ್ಟುಬಿದ್ದಿದೆ ಎಂಬ ಅತೃಪ್ತಿ ಜೆಡಿಎಸ್‌ನಲ್ಲಿದೆ. ಮತ್ತೊಂದೆಡೆ, ಮೈತ್ರಿ ಸರಕಾರ ಉಳಿಸಿಕೊಳ್ಳಲು ತಾವು ಇಷ್ಟೆಲ್ಲಾ ಪ್ರಯತ್ನ ನಡೆಸಿದರೂ, ಜೆಡಿಎಸ್‌ ಸಂಬಂಧವೇ ಇಲ್ಲದಂತೆ ಅಂತರ ಕಾಯ್ದುಕೊಂಡಿತು ಎಂಬ ಅತೃಪ್ತಿ ಕಾಂಗ್ರೆಸ್‌ ನಾಯಕರಲ್ಲಿದೆ. ಇದು ಪ್ರಸ್ತಾಪವಾಗುವ ಸಾಧ್ಯತೆಗಳಿವೆ.

ಬಜೆಟ್‌ ಪೂರ್ವಭಾವಿ ಇಲಾಖಾವಾರು ಚರ್ಚೆ ವೇಳೆ ಕಾಂಗ್ರೆಸ್‌ ಚುನಾವಣೆಗೆ ಮುನ್ನ ನೀಡಿದ್ದ ಭರವಸೆಗಳನ್ನು ಸೇರ್ಪಡೆ ಮಾಡಲು ಸಂಬಂಧಪಟ್ಟ ಸಚಿವರು ಸಿಎಂ ಮೇಲೆ ಒತ್ತಡ ತರಬೇಕು ಎಂದು ಇತ್ತೀಚೆಗೆ ನಡೆದ ‘ಕೈ’ ನಾಯಕರ ಸಭೆಯಲ್ಲಿ ಸೂಚನೆ ನೀಡಲಾಗಿದೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಜನರಲ್ಲಿ ವಿಶ್ವಾಸ ಮೂಡಿಸುವ ಪ್ರಯತ್ನಗಳನ್ನೂ ಬಜೆಟ್‌ನಲ್ಲಿ ಮಾಡಬೇಕಿದೆ.

ಕಾಂಗ್ರೆಸ್‌ ಶಾಸಕರಿಗೆ ನಿಗಮ -ಮಂಡಳಿ ಅಧ್ಯಕ್ಷಗಾದಿ ಹಂಚಿಕೆಯಲ್ಲಿ ಆದೇಶ ಹೊರಡಿಸಲು ವಿಳಂಬ ಹಾಗೂ ಜೆಡಿಎಸ್‌ ಸಚಿವರ ಖಾತೆಗಳಿಗೆ ಸಂಬಂಧಿಸಿದ ಸಂಸ್ಥೆಗಳಿಗೆ ಕಾಂಗ್ರೆಸ್‌ ಶಾಸಕರನ್ನು ನೇಮಕ ಮಾಡಿರುವ ಗೊಂದಲಗಳು ಚರ್ಚೆಗೆ ಬರುವ ನಿರೀಕ್ಷೆಯಿದೆ. ದೋಸ್ತಿ ಪಕ್ಷಗಳ ಮಧ್ಯೆ ಸಮನ್ವಯ ಸಾಧಿಸುವ ಉದ್ದೇಶದಿಂದ ರಚನೆಯಾಗಿರುವ ಈ ಸಮಿತಿಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಪಕ್ಷಗಳ ರಾಜ್ಯಾಧ್ಯಕ್ಷರಿಗೇ ಇನ್ನೂ ಸ್ಥಾನ ಸಿಕ್ಕಿಲ್ಲ. ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌. ವಿಶ್ವನಾಥ್‌ ಅವರಿಗೆ ಸಮನ್ವಯ ಸಮಿತಿಯಲ್ಲಿ ಅವಕಾಶ ಕಲ್ಪಿಸಬೇಕಿದೆ. ಜ. 24ರ ಸಭೆ ಸಮನ್ವಯ ಸಮಿತಿಯ ವಿಸ್ತರಣೆಗೆ ತೀರ್ಮಾನ ಕೈಗೊಳ್ಳಾಗುತ್ತಾ? ಎಂಬ ಕುತೂಹಲದ ನಿರೀಕ್ಷೆಯೂ ಇದೆ.

About the author

ಕನ್ನಡ ಟುಡೆ

Leave a Comment