ರಾಷ್ಟ್ರ ಸುದ್ದಿ

ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನ: ಗಣ್ಯರ ಸಂತಾಪ

ನವದೆಹಲಿ: ಮಾಜಿ ಕೇಂದ್ರ ಸಚಿವ, ಹಿರಿಯ ರಾಜಕಾರಣಿ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಹಲವು ಸಚಿವ ಸ್ಥಾನಗಳನ್ನು ಅಲಂಕರಿಸಿದ್ದ ಜಾರ್ಜ್ ಅವರದ್ದು ಸರಳ ವ್ಯಕ್ತಿತ್ವ ಉನ್ನತ ಮಟ್ಟದ ಚಿಂತನೆ ಹೊಂದಿದವರಾಗಿದ್ದರು. ದೇಶದ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಪ್ರಜಾಪ್ರಭುತ್ವವನ್ನು ಎತ್ತಿಹಿಡಿದಿದ್ದರು ಎಂದು ರಾಷ್ಟ್ರಪತಿ ಸ್ಮರಿಸಿದ್ದಾರೆ.

ಭಾರತದ ರಾಜಕೀಯ ವ್ಯವಸ್ಥೆಯಲ್ಲಿ ನಿರ್ಭೀತಿಯಿಂದ, ಪ್ರಾಮಾಣಿಕವಾಗಿ, ದೂರದೃಷ್ಟಿಯನ್ನು ಹೊಂದಿದ್ದ ವ್ಯಕ್ತಿ ಜಾರ್ಜ್ ಫರ್ನಾಂಡಿಸ್. ಒಬ್ಬ ಪ್ರಬಲ ವ್ಯಾಪಾರ ಸಂಘಟನೆಯ ನಾಯಕನಾಗಿಯೂ ಅವರು ನಿಲ್ಲುತ್ತಾರೆ. ಅವರ ರಾಜಕೀಯ ತತ್ವಗಳು ಅನುಕರಣೀಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೂಡ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಸೇರಿ ಹಲವರು ಸಂತಾಪ ಸೂಚಿಸಿದ್ದಾರೆ.

ಯಡಿಯೂರಪ್ಪ: ಮಾಜಿ ಕೇಂದ್ರ ಸಚಿವರಾಗಿದ್ದ ಜಾರ್ಜ್ ಫರ್ನಾಂಡೀಸ್ ಅವರ ನಿಧನ ತೀವ್ರ ದುಃಖವನ್ನುಂಟು ಮಾಡಿದೆ. ಕಾರ್ಮಿಕರು, ಶೋಷಿತರ ಧ್ವನಿಯಾಗಿದ್ದ ಇವರು, ಸರಳತೆಯಿಂದಲೇ ಜನಮನ ಗೆದ್ದಿದ್ದರು. ದೇಶ ಒಬ್ಬ ಆದರ್ಶ ರಾಜಕಾರಣಿಯನ್ನು ಕಳೆದುಕೊಂಡಿದೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ. ಇವರ ಕುಟುಂಬ ಮತ್ತು ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ.

ಸಿದ್ದರಾಮಯ್ಯ: ಜಾರ್ಜ್ ಫರ್ನಾಂಡಿಸ್ ನಿಧನದಿಂದ ಆಘಾತಕೀಡಾಗಿದ್ದೇನೆ. ಸಮಾಜವಾದಿ ಚಳುವಳಿಯ ನೇತಾರರಾಗಿದ್ದ ಜಾರ್ಜ್ ನನಗೆ ರಾಜಕೀಯ ಸಂಗಾತಿಯಾಗಿದ್ದದ್ದು ಮಾತ್ರವಲ್ಲ ಹಿರಿಯಣ್ಣನಂತೆ ಮಾರ್ಗದರ್ಶಕರಾಗಿದ್ದರು. ಅವರನ್ನು ಕಳೆದುಕೊಂಡ ದು:ಖ ಮಾಯುವಂತಹದ್ದಲ್ಲ. ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ಶೋಕದಲ್ಲಿ ನಾನೂ ಭಾಗಿಯಾಗಿದ್ದೇನೆ.

 

About the author

ಕನ್ನಡ ಟುಡೆ

Leave a Comment