ರಾಜ್ಯ ಸುದ್ದಿ

ಮಾಜಿ ಪ್ರಧಾನಿ-ಹಾಲಿ ಸಚಿವರ ಕಂಚಿನ‌ ಪ್ರತಿಮೆಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು

ವಿಜಯಪುರ: ಮಾಜಿ ಪ್ರಧಾನಿ, ಜೆಡಿಎಸ್​ನ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ ಹಾಗೂ ತೋಟಗಾರಿಕೆ ಸಚಿವ ಎಂ.ಸಿ. ಮನಗೂಳಿ ಅವರ ಕಂಚಿನ ಪ್ರತಿಮೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿ ವಿಕೃತ ಭಾವ ಮೆರೆದಿದ್ದಾರೆ. ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಿರ್ಮಿಸಿದ ಕಂಚಿನ ಪುತ್ಥಳಿಗೆ ಬುಧವಾರ ತಡರಾತ್ರಿ ಬೆಂಕಿ ಹಚ್ಚಿದ್ದಾರೆ. ಇದರಿಂದ ಕಂಚಿನ ಪುತ್ಥಳಿಗಳು ಕಪ್ಪಗಾಗಿವೆ.

ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ ಅನುಷ್ಠಾನ ಹಿನ್ನೆಲೆ ಈ ದ್ವಿನಾಯಕರ ಪುತ್ಥಳಿ ಅನಾವರಣಗೊಳಿಸಲಾಗಿತ್ತು. ಸದರಿ ಯೋಜನೆಗಾಗಿ ಸಚಿವ ಎಂ.ಸಿ‌. ಮನಗೂಳಿ ಅವರು ಎರಡು ವರ್ಷ ಚಪ್ಪಲಿ ಧರಿಸದೇ ಬರಿಗಾಲ ಫಕೀರನಂತೆ ಹೋರಾಟ ನಡೆಸಿದ್ದರು. ಅಂದಿನ ಪ್ರಧಾನಿ ನೀರಾವರಿ ಹರಿಕಾರನೆಂದೇ ಖ್ಯಾತಿ ಪಡೆದ ಎಚ್.ಡಿ. ದೇವೇಗೌಡ ಅವರು ಯೋಜನೆ ಅನುಷ್ಠಾನಗೊಳಿಸಿ ಈ ಭಾಗದ ನೀರಾವರಿಗೆ ಆದ್ಯತೆ ಕಲ್ಪಿಸಿದ್ದರು.

ಆ ಸವಿ ನೆನಪಿಗಾಗಿ ಎಂ.ಸಿ. ಮನಗೂಳಿ ಮತ್ತು ದೇವೇಗೌಡರ ಅತೀ ಆತ್ಮೀಯತೆ ತೋರುವಂತೆ ಮನಗೂಳಿ ಹೆಗಲ‌ ಮೇಲೆ ಕೈ ಹಾಕಿ ನಿಂತ ದೇವೇಗೌಡರ ಜೋಡಿ ಪ್ರತಿಮೆ ಪ್ರತಿಷ್ಠಾಪಿಸಲಾಗಿತ್ತು. 2014, ಫೆ.12 ರಂದು ಇಂದಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಉದ್ಘಾಟಿಸಿದ್ದರು.

ಇಂಥ ಅಪರೂಪದ ಐತಿಹಾಸಿಕ ಪ್ರತಿಮೆಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದು ಖೇದಕರ. ಘಟನಾ ಸ್ಥಳಕ್ಕೆ ಗ್ರಾಮಸ್ಥರು ತಂಡೋಪ ತಂಡವಾಗಿ ಸಾಗುತ್ತಿದ್ದು, ಪೊಲೀಸ್ ಇಲಾಖೆ ಕೂಡ ತೆರಳಿದೆ.

About the author

ಕನ್ನಡ ಟುಡೆ

Leave a Comment