ರಾಜ್ಯ ಸುದ್ದಿ

ಮಾಜಿ ಶಾಸಕ ಎಂ.ಪಿ.ರವೀಂದ್ರ ವಿಧಿವಶ

ಬೆಂಗಳೂರು: ಮಾಜಿ ಶಾಸಕ ಎಂ.ಪಿ. ರವೀಂದ್ರ ವಿಧಿವಶರಾಗಿದ್ದು, ಅವರು ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದರು. ಇಂದು ಬೆಳಗಿನ ಜಾವ 3.30ರ ಸಂದರ್ಭದಲ್ಲಿ ರವೀಂದ್ರ ಅವರು ತಮ್ಮ ಕೊನೆಯುಸಿರೆಳೆದಿದ್ದು, ಅವರ ಸಾವಿಗೆ ರಾಜಕೀಯ ಗಣ್ಯರು ಕಂಬನಿ ಮಿಡಿದಿದ್ದಾರೆ. ಮೂರು ದಿನಗಳ ಹಿಂದೆ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ರವೀಂದ್ರ ಅವರನ್ನು ನಗರದ ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರ ಪುತ್ರರಾಗಿದ್ದ ರವೀಂದ್ರ ದಾವಣಗೆರೆಯ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದರು. ಸಜ್ಜನ ರಾಜಕಾರಣಿ ಎಂ ಪಿ ಪ್ರಕಾಶ್ ಅವರ ಪುತ್ರ ಎಂಪಿ ರವೀಂದ್ರ ಅವರ ನಿಧನಕ್ಕೆ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ. 2013 ರ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಿದ್ದ ಅವರು, 2018 ರ ವಿಧಾನಸಭೆಯಲ್ಲಿ ಹರಪನಹಳ್ಳಿಯಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋಲುಂಡಿದ್ದರು. ಅಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತ ವಲಯದಲ್ಲಿ ರವೀಂದ್ರ ಗುರುತಿಸಿಕೊಂಡಿದ್ದರು.
ಶಾಸಕರಾಗಿದ್ದಲೇ ರವೀಂದ್ರ ಅವರ ಆರೋಗ್ಯದ ಹದಗೆಟ್ಟಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೇ ವಿಕ್ರಮ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಎಂ.ಪಿ.ರವೀಂದ್ರರ ಅಂತ್ಯಕ್ರಿಯೆ ಭಾನುವಾರ ಮಧ್ಯಾಹ್ನ 12 ಗಂಟೆಗೆ ಹೂವಿನಹಡಗಲಿಯಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

About the author

ಕನ್ನಡ ಟುಡೆ

Leave a Comment