ರಾಜ್ಯ ಸುದ್ದಿ

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಅಚ್ಚುಮೆಚ್ಚಿನ ರೈತ ಬೆಳಕು ಯೋಜನೆಗೆ ಎಳ್ಳುನೀರು

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ “ರೈತ ಬೆಳಕು”ಯೋಜನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಳ್ಳು ನೀರು ಬಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ್ದ ತಮ್ಮ ಕೊನೆ ಬಜೆಟ್ ನಲ್ಲಿ, ಒಣಭೂಮಿ ರೈತರಿಗೆ ನೆರವು ನೀಡುವ ಉದ್ದೇಶದಿಂದ ರೈತ ಬೆಳಕು ಯೋಜನೆಯನ್ನು ಘೋಷಿಸಿದ್ದರು. ಆದರೆ ವಿಧಾನಸಭೆ ಚುನಾವಣೆ ಬಳಿಕ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬಂತು. ಮುಖ್ಯಮಂತ್ರಿಯಾದ ಎಚ್.ಡಿ.ಕುಮಾರಸ್ವಾಮಿ 5 ಜುಲೈ 2018 ನೇ ಸಾಲಿನಲ್ಲಿ ಮಂಡಿಸಿದ ಬಜೆಟ್ ನಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದ ಎಲ್ಲಾ ಯೋಜನೆಗಳನ್ನು ಮುಂದುವರೆಸುವುದಾಗಿ ಪ್ರಕಟಿಸಿದ್ದರು.
ಎಚ್.ಡಿ.ಕುಮಾರಸ್ವಾಮಿ ಸಾಲಮನ್ನಾ ಯೋಜನೆಗಾಗಿ ಸಿದ್ದರಾಮಯ್ಯ ಸರ್ಕಾರದ ‘ರೈತ ಬೆಳಕು’ ಯೋಜನೆಯನ್ನು ಕೈಬಿಟ್ಟಿದ್ದರು. ಸಿದ್ದರಾಮಯ್ಯ ಅವರು ತಾವು ಮಂಡಿಸಿದ ಬಜೆಟ್ ನಲ್ಲಿ ‘ರೈತ ಬೆಳಕು’ ಯೋಜನೆಗೆ 1000 ಕೋಟಿ ರೂ ಅನುದಾನ ಒದಗಿಸಿದ್ದರು. ಯೋಜನೆ ಅನುಷ್ಟಾನಕ್ಕೆ 3500 ಕೋಟಿ ರೂ ಅನುದಾನ  ಮೀಸಲಿಟ್ಟಿದ್ದರು. ಆದರೆ ಸಾಲಮನ್ನಾ ಯೋಜನೆ ಜಾರಿಯಿಂದಾಗಿ  ರೈತಬೆಳಕು ಯೋಜನೆಗೆ ಅನುದಾನ ಕೊರತೆ ಎದುರಾಗಿತ್ತು. ಹೀಗಾಗಿ ಈ ಯೋಜನೆಯನ್ನು ಕೈಬಿಡಲು ಕುಮಾರಸ್ವಾಮಿ ತೀರ್ಮಾನಿಸಿದರು.
ರೈತ ಬೆಳಕು ಯೋಜನೆ ಪ್ರಯೋಜನಗಳು: ಮಳೆಯಾಶ್ರಿತ ಬೆಳೆ ಬೆಳೆಯುವ ಒಣಭೂಮಿ ಪ್ರದೇಶದ ರೈತರಿಗೆ 5 ಸಾವಿರ ರೂ ನಿಂದ 10 ಸಾವಿರ ರೂ ಹಣವನ್ನು ರೈತರ ಖಾತೆಗೆ ನೇರ ವರ್ಗಾವಣೆ ಮಾಡುವ ಯೋಜನೆ ‘ರೈತ ಬೆಳಕು’ ಕಾರ್ಯಕ್ರಮವಾಗಿದೆ. ಬರ ಮತ್ತು ಆರ್ಥಿಕ ಸಂಕಷ್ಟದಿಂದ ತೊಂದರೆಗೀಡಾದ ಸಣ್ಣ ರೈತರಿಗೆ ನಿರ್ದಿಷ್ಟ ಆದಾಯ ಒದಗಿಸುವ ‘ರೈತ ಬೆಳಕು’ ಯೋಜನೆಯನ್ನು ಕುಮಾರಸ್ವಾಮಿ ಸರ್ಕಾರ ಕೈಬಿಟ್ಟಿದೆ. ಈ ಯೋಜನೆಗೆ ಪ್ರತಿ ವರ್ಷ 3500 ಕೋಟಿ ರೂ ವೆಚ್ಚವಾಗಲಿದ್ದು ,70 ಲಕ್ಷ ರೈತರಿಗೆ ಯೋಜನೆಯ ಸೌಲಭ್ಯ ಸಿಗುತ್ತಿತ್ತು.
ಕಳೆದ ಬಜೆಟ್ ನಲ್ಲಿ ಅನುದಾನದ ಕೊರತೆಯಿಂದ ಯೋಜನೆ ಕೈಬಿಡಲಾಗಿತ್ತು. ಈ ಬಾರಿ ಬಜೆಟ್ ನಲ್ಲಿ ರೈತ ಬೆಳಕು ಯೋಜನೆ ಪ್ರಕಟಿಸುವಂತೆ ಮುಖ್ಯಮಂತ್ರಿ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಕೃಷಿ ಸಚಿವ ಶಿವಶಂಕರ ರೆಡ್ಡಿ ಹೇಳಿದ್ದಾರೆ. ರೈತರ ಹಿತಸಾಕ್ತಿ ದೃಷ್ಟಿಯಿಂದಾಗಿ ರೈತಬೆಳಕು ಯೋಜನೆ ಘೋಷಿಸಲಾಗಿತ್ತು, ಈ ವರ್ಷ ರಾಜ್ಯದ 176 ತಾಲೂಕುಗಳ ಪೈಕಿ 156 ಬರಪೀಡಿತಎಂದು ಘೋಷಿಸಲ್ಪಟ್ಟಿವೆ, ಈ ಯೋಜನೆಯಿಂದ ರೈತರಿಗೆ ಆದಾಯದ ಭದ್ರತೆಯಿರುತ್ತದೆ, ಹೀಗಾಗಿ ನಾವು ಸಿಎಂ ಕುಮಾರಸ್ವಾಮಿ ಅವರ ಜೊತೆ ಮಾತನಾಡಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment