ಸಿನಿ ಸಮಾಚಾರ

ಮಾತನಾಡಿದ್ರೆ ಸಿನಿಮಾದವರು ಅಂತಾರೆ, ಅವರೇನು ಸತ್ಯ ಹರಿಶ್ಚಂದ್ರನ ತುಂಡುಗಳಾ: ಜೆಡಿಎಸ್ ನಾಯಕರಿಗೆ ಯಶ್ ತಿರುಗೇಟು

ಮಂಡ್ಯ: ಸಕ್ಕರೆ ನಾಡು ಮಂಡ್ಯದಲ್ಲಿ ಲೋಕಸಭಾ ಚುನಾವಣೆ ಸಮರ ತಾರಕ್ಕೇರಿದ್ದು, ಸುಮಲತಾ ಅಂಬರೀಶ್ ಪರ ಪ್ರಚಾರ ಮಾಡುತ್ತಿರುವ ದರ್ಶನ್ ಮತ್ತು ಯಶ್ ವಿರುದ್ದ ಜೆಡಿಎಸ್ ನಾಯಕರ ವಾಗ್ದಾಳಿ ಮುಂದುವರೆದಿರುವಂತೆಯೇ ಇತ್ತ ಯಶ್ ಕೂಡ ತಿರುಗೇಟು ನೀಡಿದ್ದಾರೆ. ಇಂದು ಮಂಡ್ಯದ ಪೂರಿಗಾಲಿಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಪರವಾಗಿ ಪ್ರಚಾರ ನಡೆಸಿದ ಯಶ್,​ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ. ಪ್ರಚಾರದ ನಡುವೆ ಮಾಧ್ಯಮದೊಂದಿಗೆ ಮಾತನಾಡಿದ ಯಶ್​, ‘ನಾವು ಮಾತನಾಡಿದರೆ ಸಿನಿಮಾದವರು ಎಂದು ಹೇಳುತ್ತಾರೆ. ಅವರು ಕೂಡ ಮಾತನಾಡುತ್ತಿದ್ದಾರೆ ಅವರೇನು ಸತ್ಯ ಹರಿಶ್ಚಂದ್ರನ ತುಂಡುಗಳಾ? ಟೀಕಾ ಪ್ರಹಾರ ನಡೆಸಿದರು. ಇದೇ ವೇಳೆ ‘ನಾವು ಒಮ್ಮೆ ದುಶ್ಮನಿ ಮಾಡಿದರೆ ಜೀವನಪೂರ್ತಿ​ ದುಶ್ಮನಿ‌ ಮಾಡುತ್ತೇವೆ. ಇವತ್ತು ದುಶ್ಮನಿ ಮಾಡಿ ನಾಳೆ ಬೆಳಗ್ಗೆ ಸ್ನೇಹಿತರಾಗಲ್ಲ. ನಾನು‌ ಬಂದಿರುವುದು ಅಂಬರೀಷಣ್ಣನ ಅಭಿಮಾನದಿಂದ. ಅಂಬರೀಷಣ್ಣ ಇದ್ದಾಗ ಕೈಕಟ್ಟಿ ನಿಲ್ಲುತ್ತಿದ್ದವರು, ಈಗ ಅವರಿಲ್ಲ ಎಂದು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ. ನೀವು ಎಷ್ಟು ಬಾರಿ ಮಂಡ್ಯ ಜನರನ್ನು ದಡ್ಡರು ಮಾಡ್ತೀರಾ? ಅವರು ನಿಮ್ಮನ್ನು ದಡ್ಡರು ಎಂದುಕೊಂಡಿದ್ದಾರೆ. ನೀವು ದಡ್ಡರಲ್ಲ. ಸ್ವಾಭಿಮಾನಿಗಳು ಎಂದು ತಿಳಿಯಬೇಕು. ಈ ಬಾರಿ ಸುಮಲತಾ ಅವರನ್ನು ಗೆಲ್ಲಿಸುವ ಮೂಲಕ ಅವರಿಗೆ ಸರಿಯಾಗಿ ತಿರುಗೇಟು ನೀಡಬೇಕು ಎಂದು ಕುಟುಕಿದರು.’ಇಷ್ಟು ದಿನ ಒಳ್ಳೆಯವರಾಗಿದ್ದ ನಾವು ಈಗ ಪ್ರಚಾರಕ್ಕೆ ಬಂದಿರುವ ಕಾರಣಕ್ಕೆ ಕೆಟ್ಟವರಾಗಿದ್ದೇವೆ. ಈ ಚುನಾವಣೆ ಮಂಡ್ಯದ ಸ್ವಾಭಿಮಾನದ ಪ್ರಶ್ನೆ. ಸುಮಲತಾ ಸ್ಪರ್ಧಿಸಿದ ತಕ್ಷಣ ಕೆಟ್ಟೋರಾಗೋದ್ರಾ? ಇದ್ಯಾವ ನ್ಯಾಯ? ನೀವು ಕೆಲಸ ಮಾಡಿದರೆ ಜನ ಆಶೀರ್ವದಿಸುತ್ತಾರೆ. ಅದು ಬಿಟ್ಟು ಕೆಟ್ಟ ಮಾತಾಡಿದರೆ ತಪ್ಪಾಗುತ್ತದೆ. ಗಂಡ ಸತ್ತೋರು ಮನೆ ಸೇರಿಕೊಳ್ಳಬೇಕು, ಯಾವುದೋ ಊರು, ಜಾತಿಗೆ ಸೇರಿದವರೆಂಬ ಟೀಕೆ ಮಾಡುವುದು ಎಷ್ಟು ಸರಿ? ಸುಮಲತಾ ಅವರಿಗೆ ನೆರವಾಗಿದ್ದಕ್ಕೆ ಕಳ್ಳೆತ್ತು ಆಗ್ತೀವಾ? ಎಂದು ಜೆಡಿಎಸ್ ನಾಯಕರನ್ನು ನಟ ಯಶ್ ಪ್ರಶ್ನಿಸಿದ್ದಾರೆ. ನಾವು ನಮ್ಮತನ, ಸ್ವಾಭಿಮಾನ ಬಿಟ್ಟು ಬದುಕಿದರೆ ಸತ್ತಂತೆಯೇ ಅರ್ಥ. ಸಿನಿಮಾ ನಟರು ನೋಡೋಕೆ ಬರ್ತಾರೆ. ಅದರಿಂದ ಏನಾಗುತ್ತೆ ಅಂತಾರೆ. ಕೆಲವರು ನಮ್ಮ ಬಗ್ಗೆ ಮಾಡುವ ಪ್ರತಿಯೊಂದು ಟೀಕೆಯೂ ನಮ್ಮ ಹಠವನ್ನು ಹೆಚ್ಚಿಸುತ್ತದೆ. ನಿಮ್ಮ ಪ್ರೀತಿಯನ್ನು ಯಾವತ್ತೂ ನನ್ನ ಸ್ವಾರ್ಥಕ್ಕೆ ಬಳಸಿಕೊಂಡಿಲ್ಲ. ಅಂತೆಯೇ ‘ಈ ಬಾರಿ ಸುಮಲತಾರನ್ನು ಗೆಲ್ಲಿಸದಿದ್ದರೆ ನಾವು ತಲೆ ಎತ್ತುಕೊಂಡು ಓಡಾಡೋಕೆ ಆಗಲ್ಲ. ಹೀಗಾಗಿ ನೀವು ಈ ಬಾರಿ ಸುಮಲತಾರನ್ನು ಗೆಲ್ಲಿಸಿ. ಇದು ಕೇಂದ್ರದಲ್ಲಿ ಸರ್ಕಾರ ರಚನೆಗೆ ನಡೆಯುತ್ತಿರುವ ಚುನಾವಣೆಯೇ ಹೊರತು ರಾಜ್ಯದ ಚುನಾವಣೆ ಅಲ್ಲ. ನಾನು ರೈತನಿಗಾಗಿ ಏನು ಮಾಡಿದ್ದೀನಿ ಎಂದು ಇವರಿಗೆ ಸಾಕ್ಷಿ ತೋರಿಸಬೇಕಿಲ್ಲ. ರೈತರೇ ತೋರಿಸುತ್ತಾರೆ ಎಂದು ಸಿಎಂ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು. ಇದೇ ವೇಳೆ ಅತ್ತ ಯಶ್ ಸುಮಲತಾ ಅವರ ಕ್ರಮ ಸಂಖ್ಯೆ ಕುರಿತು ಹೇಳುತ್ತಿದ್ದಂತೆಯೇ ಅತ್ತ ಅಲ್ಲಿ ನೆರೆದಿದ್ದ ಜನರು ಕ್ರಮ ಸಂಖ್ಯೆ ಇಪ್ಪತ್ತು.. ನಿಖಿಲ್ ಗೆ ಆಪತ್ತು ಎಂದು ಕೂಗುತ್ತಿದ್ದರು.

About the author

ಕನ್ನಡ ಟುಡೆ

Leave a Comment