ರಾಷ್ಟ್ರ ಸುದ್ದಿ

ಮಾತುಕತೆ ಮತ್ತು ಭಯೋತ್ಪಾದನೆ ಒಟ್ಟಿಗೆ ಸಾಧ್ಯವಿಲ್ಲ, ಜಮ್ಮು ಕಾಶ್ಮೀರಕ್ಕೂ ಅದು ಅನ್ವಯಿಸುತ್ತದೆ: ಸೇನಾ ಮುಖ್ಯಸ್ಥ ರಾವತ್

ನವದೆಹಲಿ: ಚೀನಾ ಮತ್ತು ಪಾಕಿಸ್ತಾನ ಗಡಿ ಭಾಗಗಳಲ್ಲಿನ ಪರಿಸ್ಥಿತಿಯನ್ನು ಭಾರತೀಯ ಸೇನೆ ಉತ್ತಮವಾಗಿ ನಿಭಾಯಿಸಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ತಿಳಿಸಿದ್ದಾರೆ. ದೆಹಲಿಯಲ್ಲಿ ಇಂದು ವಾರ್ಷಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದಲ್ಲಿನ ಪರಿಸ್ಥಿತಿ ಇನ್ನಷ್ಟು ಸುಧಾರಣೆಯಾಗಬೇಕಿದೆ ಎಂದರು.ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಲು ನಾವು ಬಯಸುತ್ತೇವೆ. ಉತ್ತರ ಮತ್ತು ಪಶ್ಚಿಮ ಗಡಿಭಾಗದಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ನಾವು ಸಮರ್ಥರಾಗಿದ್ದೇವೆ, ಈ ಬಗ್ಗೆ ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದರು. ಆಫ್ಘಾನಿಸ್ತಾನದಲ್ಲಿ ಉಗ್ರಪಡೆ ತಾಲಿಬಾನ್ ಮಟ್ಟಹಾಕಲು ರಷ್ಯಾ ಮತ್ತು ಅಮೆರಿಕಾ ಮುಂದಾಗಿರುವ ಬಗ್ಗೆ ಮಾತನಾಡಿದ ಅವರು, ಆಫ್ಘಾನಿಸ್ತಾನದಲ್ಲಿ ಏನಾಗುತ್ತಿದೆ, ಉಗ್ರಗಾಮಿಗಳ ಚಟುವಟಿಕೆಗಳ ಬಗ್ಗೆ ನಮಗೆ ತಿಳಿದುಕೊಳ್ಳುವ ಕುತೂಹಲ, ಆಸಕ್ತಿಯಿದೆ, ಅದರಿಂದ ವಿಮುಖವಾಗಲು ಸಾಧ್ಯವಿಲ್ಲ. ಆದರೆ ಅದೇ ಹೋಲಿಕೆಯನ್ನು ಜಮ್ಮು-ಕಾಶ್ಮೀರಕ್ಕೆ ಮಾಡಲು ಸಾಧ್ಯವಿಲ್ಲ, ನಮ್ಮದೇ ಆದ ರೀತಿಯಲ್ಲಿ ಇಲ್ಲಿ ಮಾತುಕತೆ ನಡೆಸಬೇಕಾಗುತ್ತದೆ ಎಂದು ಪ್ರತಿಪಾದಿಸಿದರು. ಭಯೋತ್ಪಾದನೆ ಮತ್ತು ಸಂಧಾನ ಮಾತುಕತೆ ಒಟ್ಟೊಟ್ಟಿಗೆ ಹೋಗಲು ಸಾಧ್ಯವಿಲ್ಲ, ಅದು ಜಮ್ಮು-ಕಾಶ್ಮೀರಕ್ಕೆ ಕೂಡ ಅನ್ವಯವಾಗುತ್ತದೆ ಎಂದು ಹೇಳಿದರು.

About the author

ಕನ್ನಡ ಟುಡೆ

Leave a Comment