ರಾಜ್ಯ ಸುದ್ದಿ

ಮಾವಿನಕಾಯಿ ಕೀಳಲು ಹೋದ 13 ವರ್ಷದ ಬಾಲಕ ವಿದ್ಯುತ್‌ ಪ್ರವಹಿಸಿ ಸಾವು

ಬೆಂಗಳೂರು : ಮಾವಿನಕಾಯಿ ಉದುರಿಸಲು ಹೋದ 13 ವರ್ಷದ ಬಾಲಕ ವಿದ್ಯುತ್‌ ಪ್ರವಹಿಸಿ ಮೃತಪಟ್ಟ ಘಟನೆ ನಡೆದಿದೆ. ಜೀವನ್‌ಬಿಮಾನಗರ ಸಮೀಪದ ಸುಧಾಮನಗರ ಕೊಳೆಗೇರಿ ನಿವಾಸಿ ಎ.ಭರತ್‌(13) ಮೃತ ಬಾಲಕ.  ಮರಳಮ್ಮ ದಂಪತಿಯ ಇಬ್ಬರು ಪುತ್ರರಲ್ಲಿ ಮೃತ ಭರತ್‌ ಕಿರಿಯವನಾಗಿದ್ದು, ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಜೀವನ್‌ಬಿಮಾನಗರದ ಬಸ್‌ ನಿಲ್ದಾಣದ ಸಮೀಪವಿರುವ ಪಿಡಬ್ಲ್ಯೂಡಿ ವಸತಿ ಗೃಹದ ಆವರಣದಲ್ಲಿರುವ ಮಾವಿನ ಮರದಿಂದ ಕಾಯಿ ಕೀಳಲು ಹೋದಾಗ ದುರ್ಘಟನೆ ಸಂಭವಿಸಿದೆ. ಮಾವಿನಮರಕ್ಕೆ ತಾಗುವಂತೆ ವಿದ್ಯುತ್‌ ಹೈಟೆನ್ಷನ್‌ ವೈರ್‌ ಹಾದು ಹೋಗಿತ್ತು. ಭಾನುವಾರ ಶಾಲೆಗೆ ರಜೆಯಿದ್ದ ಹಿನ್ನೆಲೆಯಲ್ಲಿ ಸ್ನೇಹಿತರ ಜತೆ ಭರತ್‌ ಮರದ ತುದಿಯಲ್ಲಿ ಮಾವಿನ ಕಾಯಿ ಇರುವುದನ್ನು ಗಮನಿಸಿದ್ದ. ಅವನ್ನು ಕೀಳಲು ಮರಕ್ಕೆ ಹತ್ತಿ ಹಸಿ ಕಟ್ಟಿಗೆಯನ್ನು ಕೈಯಲ್ಲಿ ಹಿಡಿದು ಮಾವಿನಕಾಯಿ ಉದುರಿಸಲು ಯತ್ನಿಸಿದ್ದ. ಆ ವೇಳೆ ಹಸಿ ಕಟ್ಟಿಗೆಗೆ ಹೈಟೆನ್ಷನ್‌ ವಿದ್ಯುತ್‌ ತಂತಿ ತಾಗಿ ಕರೆಂಟ್‌ ಶಾಕ್‌ ಹೊಡೆದು ಭರತ್‌ ಮೃತಪಟ್ಟು ಮರದಲ್ಲೇ ಸಿಲುಕಿಕೊಂಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.

ಭರತ್‌ ಮಾವಿನ ಕಾಯಿ ಕೀಳುವುದನ್ನು ಕೆಳಗೆ ನಿಂತು ನೋಡುತ್ತಿದ್ದ ಸ್ನೇಹಿತ ಕರೆಂಟ್‌ ಹೊಡೆದು ಕಿರುಚಿಕೊಂಡಿದ್ದನ್ನು ಸ್ಥಳೀಯರು ಮತ್ತು ಕುಟುಂಬದವರಿಗೆ ಮಾಹಿತಿ ನೀಡಿದ್ದ. ಸ್ಥಳೀಯರು ಸಮೀಪದಲ್ಲಿದ್ದ ಟ್ರಾನ್ಸ್‌ಫಾರ್ಮರ್‌ ಸ್ವಿಚ್‌ಗೆ ಹೊಡೆದು ವಿದ್ಯುತ್‌ ಸಂಪರ್ಕ ತಪ್ಪಿಸಿದ್ದರು. ಬಳಿಕ ಭರತ್‌ನನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಬಾಲಕನನ್ನು ಪರೀಕ್ಷಿಸಿದ ವೈದ್ಯರು ಆತ ಮೃತಪಟ್ಟಿರುವುದನ್ನು ದೃಢಪಡಿಸಿದ್ದರು. ಜೀವನ್‌ಬಿಮಾನಗರ ಪೊಲೀಸರು ಬೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

About the author

ಕನ್ನಡ ಟುಡೆ

Leave a Comment