ರಾಷ್ಟ್ರ ಸುದ್ದಿ

ಮುಂದಿನ ಬಾರಿ ಮುನ್ಸೂಚನೆ ನೀಡದೆ, ಗೆರಿಲ್ಲಾ ತಂತ್ರ ಅನುಸರಿಸಿ ಶಬರಿಮಲೆಗೆ ಹೋಗುತ್ತೇವೆ: ತೃಪ್ತಿ ದೇಸಾಯಿ

ಪುಣೆ: ಮುಂದಿನ ಬಾರಿ ಯಾವುದೇ ರೀತಿಯ ಮುನ್ಸೂಚನೆ ನೀಡದೇ ಗೆರಿಲ್ಲಾ ತಂತ್ರ ಅನುಸರಿಸಿ ಶಬರಿಮಲೆಗೆ ಹೋಗಿ ಅಯ್ಯಪ್ಪನ ದರ್ಶನ ಪಡೆಯುತ್ತೇವೆ ಎಂದು ಮಹಿಳಾ ಕಾರ್ಯಕರ್ತೆ ತೃಪ್ತಿ ದೇಸಾಯಿ ಹೇಳಿದ್ದಾರೆ.
ಅಯ್ಯಪ್ಪ ದರ್ಶನಕ್ಕಾಗಿ ಕೇರಳಕ್ಕೆ ತೆರಳಿದ್ದ ತೃಪ್ತಿ ದೇಸಾಯಿ, ಅಯ್ಯಪ್ಪ ಭಕ್ತರ ಪ್ರತಿಭಟನೆಯಿಂದಾಗಿ ದರ್ಶನ ಮಾಡದೇ ಕೊಚ್ಚಿ ವಿಮಾನ ನಿಲ್ದಾಣದಿಂದ ಪುಣೆಗೆ ವಾಪಸ್ ಆಗಿದ್ದಾರೆ. ಈ ವೇಳೆ ಮಾತನಾಡಿದ ಅವರು, ಈ ಬಾರಿ ನಾವು ಶಬರಿಮಲೆಗೆ ಹೋಗುವುದಕ್ಕೂ ಮೊದಲು ಘೋಷಣೆ ಮಾಡಿಕೊಂಡಿದ್ದೆವು. ಆದರೆ, ಮುಂದಿನ ಬಾರಿ ಹೋಗುವಾಗ ಸದ್ದಿಲ್ಲದೆ ಹೋಗುತ್ತೇವೆ. ಗೆರಿಲ್ಲಾ ತಂತ್ರ ಅನುಸರಿಸುತ್ತೇವೆ. ಪೊಲೀಸರೂ ನಮಗೆ ಬೆಂಬಲ ನೀಡಲಿದ್ದಾರೆ ಎಂದು ಹೇಳಿದ್ದಾರೆ.’ಕೇರಳ ಪೊಲೀಸರು ಸಂಪೂರ್ಣ ರಕ್ಷಣೆ ನೀಡುವ ಭರವಸೆ ನೀಡಿದ್ದಾರೆ. ಮುಂದಿನ ಬಾರಿ ಬಂದಾಗ ಭದ್ರತೆ ಒದಗಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಅಲ್ಲದೆ, ನಮ್ಮಿಂದ ಅಲ್ಲಿ ಅಶಾಂತಿ ಉಂಟಾಗದಿರಲೆಂದು ನಾವು ಹಿಂದಿರುಗಿದ್ದೇವೆ. ನಾವು ದೇವರ ದರ್ಶನಕ್ಕೆ ಆಗಮಿಸುತ್ತಿರುವುದಾಗಿ ಘೋಷಣೆ ಮಾಡಿ ಕೇರಳಕ್ಕೆ ಹೊರಟಿದ್ದರಿಂದಲೇ ನಮ್ಮ ವಿರುದ್ಧ ಪ್ರತಿಭಟನೆಗಳು ನಡೆದಿವೆ. ಮುಂದಿನ ಬಾರಿ ನಾವು ಘೋಷಣೆಯನ್ನೇ ಮಾಡುವುದಿಲ್ಲ. ಗೆರಿಲ್ಲಾ ತಂತ್ರ ಬಳಸಿಕೊಂಡು ದರ್ಶನಕ್ಕೆ ಹೋಗುತ್ತೇವೆ’.
‘ಅಲ್ಲಿನ ಪ್ರತಿಭಟನಾಕಾರರು ಸಂಘರ್ಷಕ್ಕಿಳಿದಿದ್ದರು. ಗೂಂಡಾಗಳಂತೆ ವರ್ತಿಸುತ್ತಿದ್ದರು. ಅವರು ತಮ್ಮನ್ನು ಅಯ್ಯಪ್ಪನ ಭಕ್ತರು ಎಂದು ಹೇಳಿಕೊಳ್ಳುತ್ತಾರೆ. ಆದರೆ, ಅಸಹ್ಯ ನಿಂದನೆ, ಬೆದರಿಕೆ ಹಾಕುವ ಅವರು ಅಯ್ಯಪ್ಪನ ಭಕ್ತರು ಎನಿಸಲಿಲ್ಲ. ಒಂದು ವೇಳೆ ನಾವು, ಶಬರಿಮಲೆಯ ತಪ್ಪಲಿನ ನಿಳಕ್ಕಲ್​ಗೆ ತಲುಪಿದ್ದೇ ಆದರೆ, ನಾವು ದರ್ಶನ ಪಡೆದೇ ಬರುತ್ತೇವೆ ಎಂಬ ಭಯದಿಂದ ಪ್ರತಿಭಟನಾಕಾರರು ನಮ್ಮನ್ನು ವಿಮಾನ ನಿಲ್ದಾಣದಲ್ಲೇ ತಡೆದರು’.

About the author

ಕನ್ನಡ ಟುಡೆ

Leave a Comment