ರಾಜಕೀಯ

ಮುಂಬರುವ ಲೋಕಸಭಾ ತಾಲೀಮಿಗೆ ರಾಜ್ಯ ಬಿಜೆಪಿ ಸಿದ್ಧತೆ

ಬೆಳಗಾವಿ: ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಈಗಲೇ ಸಜ್ಜಾಗುತ್ತಿದ್ದು, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜನವರಿಯಲ್ಲಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಫೆಬ್ರವರಿಯಲ್ಲಿ  ರಾಜ್ಯಕ್ಕೆ  ಆಗಮಿಸಲಿದ್ದಾರೆ. ಡಿ. 31ರೊಳಗೆ ಲೋಕಸಭಾ ತಂಡಗಳನ್ನು ರಚಿಸಲು ಮತ್ತು ಸಾಮಾಜಿಕ ಜಾಲತಾಣ, ಕಾನೂನು ಘಟಕ, ಮಾಧ್ಯಮಗಳ ನಿರ್ವಹಣೆಗೆ ತಂಡ ರಚಿಸಲು ರಾಜ್ಯ ಬಿಜೆಪಿಗೆ ಕೇಂದ್ರದಿಂದ ಬಂದಿರುವ ಸೂಚನೆ ಹಾಗೂ ಕಾರ್ಯತಂತ್ರಗಳ ಬಗ್ಗೆ ಶುಕ್ರವಾರ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಚರ್ಚಿಸಲಾಗಿದೆ. ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಜಗದೀಶ್‌ ಶೆಟ್ಟರ್‌, ಆರ್‌. ಅಶೋಕ್‌, ಕೆ.ಎಸ್‌.ಈಶ್ವರಪ್ಪ ಸಹಿತ ನಾಯಕರು ಉಪಸ್ಥಿತರಿದ್ದರು.

ಲೋಕಸಭಾ ಚುನಾವಣೆಗೆ ಸಂಬಂಧಪಟ್ಟಂತೆ ಯಾವ ರೀತಿಯ ಕಾರ್ಯತಂತ್ರ ರೂಪಿಸಬೇಕು ಮತ್ತು ಕೇಂದ್ರ ನೀಡಿರುವ ಕಾರ್ಯಕ್ರಮಗಳ ಬಗ್ಗೆ ರಾಜ್ಯ ಬಿಜೆಪಿ ಸಂಘಟನ ಕಾರ್ಯದರ್ಶಿ ಅರುಣ್‌ ಕುಮಾರ್‌ ಅವರು ಪ್ರಮುಖರಿಗೆ ಮಾಹಿತಿ ನೀಡಿದರು. ಬಿಜೆಪಿ ಶಕ್ತಿಕೇಂದ್ರಗಳ ಬಲವರ್ಧನೆ ಮಾಡಬೇಕು. 2019ರ ಜನವರಿ 15ರ ಅನಂತರ ಶಕ್ತಿಕೇಂದ್ರಗಳ ಪ್ರಮುಖರೊಂದಿಗೆ ಅಮಿತ್‌ ಶಾ ಅವರು ಸಂವಾದ ನಡೆಸಲಿದ್ದಾರೆ. ಹೀಗಾಗಿ ಶಕ್ತಿ ಕೇಂದ್ರಗಳ ಪ್ರಮುಖರ ನೇಮಕ ಮತ್ತು ತರಬೇತಿ ನೀಡುವ ಕೆಲಸ ತತ್‌ಕ್ಷಣದಿಂದಲೇ ಆಗಬೇಕು. ಮೂರರಿಂದ ಐದು ಲೋಕಸಭಾ ಕ್ಷೇತ್ರಗಳ ಶಕ್ತಿ ಕೇಂದ್ರಗಳ ಪ್ರಮುಖರನ್ನು ಒಗ್ಗೂಡಿಸಿ ಕ್ಲಸ್ಟರ್‌ ಮಾಡಲಾಗುತ್ತದೆ. ಕ್ಲಸ್ಟರ್‌ ವ್ಯಾಪ್ತಿಯಲ್ಲಿ ಶಕ್ತಿ ಕೇಂದ್ರದ ಪ್ರಮುಖರ ಸಭೆ ನಡೆಯಲಿದೆ.

ಫೆಬ್ರವರಿಯಲ್ಲಿ ಮೋದಿ ರ್ಯಾಲಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಫೆಬ್ರವರಿ ಮೊದಲ ವಾರದಿಂದ ಪ್ರಧಾನಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರ ರ್ಯಾಲಿ ಆರಂಭವಾಗಲಿದೆ. ಫೆಬ್ರವರಿಯಲ್ಲೇ ರಾಜ್ಯದಲ್ಲೂ ನರೇಂದ್ರ ಮೋದಿಯವರ ಹಲವು ರ್ಯಾಲಿಗಳನ್ನು ಆಯೋಜಿಸಲಾಗುವುದು. ರಾಜ್ಯದ ಎಷ್ಟು ಕಡೆಗಳಲ್ಲಿ ಮೋದಿ ರ್ಯಾಲಿ ನಡೆಸಲಿದ್ದಾರೆ ಮತ್ತು ಯಾವ ಸ್ಥಳದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂಬುದು ಇನ್ನೂ ನಿರ್ಧಾರವಾಗಿಲ್ಲ ಎಂದು ಹಿರಿಯ ಶಾಸಕರೊಬ್ಬರು ಮಾಹಿತಿ ನೀಡಿದರು.

About the author

ಕನ್ನಡ ಟುಡೆ

Leave a Comment