ರಾಜಕೀಯ

ಮುಂಬೈನಲ್ಲಿರುವ ಕಾಂಗ್ರೆಸ್ ಶಾಸಕರು ನನ್ನ ಜೊತೆ ಸಂಪರ್ಕದಲ್ಲಿದ್ದಾರೆ: ಸಿಎಂ

ಬೆಂಗಳೂರು: ಮುಂಬೈಯಲ್ಲಿರುವ ಕಾಂಗ್ರೆಸ್ ನ ಅತೃಪ್ತ ಶಾಸಕರು ನಿರಂತರವಾಗಿ ತಮ್ಮ ಸಂಪರ್ಕದಲ್ಲಿದ್ದು ಮೂವರು ಶಾಸಕರು ಬೆಂಗಳೂರಿಗೆ ವಾಪಸ್ಸಾಗುತ್ತೇವೆ ಎಂದು ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಇಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು, ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಮೈತ್ರಿ ಸರ್ಕಾರ ಸುಗಮವಾಗಿ ಸಾಗುತ್ತಿದೆ, ಯಾವುದೇ ಅಡ್ಡಿ-ಆತಂಕಗಳಿಲ್ಲ ಎಂದಿದ್ದಾರೆ. ಮುಂಬೈಯ ಹೊಟೇಲ್ ನಲ್ಲಿರುವ ಕಾಂಗ್ರೆಸ್ ಶಾಸಕರು ಮಾಧ್ಯಮಗಳ ಸಂಪರ್ಕಕ್ಕೆ ಸಿಗುತ್ತಿಲ್ಲ ಹೊರತು ನನಗಲ್ಲ, ನಾನು ಎಲ್ಲಾ ಶಾಸಕರ ಜೊತೆ ಸಂಪರ್ಕದಲ್ಲಿದ್ದು ಎಲ್ಲರ ಜೊತೆಯೂ ಮಾತುಕತೆ ನಡೆಸುತ್ತಿದ್ದೇನೆ.

ಅವರೆಲ್ಲರೂ ರಾಜ್ಯಕ್ಕೆ ಹಿಂತಿರುಗಲಿದ್ದಾರೆ. ಸಮ್ಮಿಶ್ರ ಸರ್ಕಾರ ಸುಗಮವಾಗಿ ಸಾಗುತ್ತಿದೆ. ನಿನ್ನೆಯೂ ನಾನು ನಿರಾಳವಾಗಿದ್ದೆ, ಇಂದು ಕೂಡ ಹಾಗೆಯೇ ಇದ್ದೇನೆ. ಗಾಬರಿಪಡಬೇಡಿ ಖುಷಿಯಾಗಿರಿ ಎಂದು ಹೇಳಿದರು.ಮೈತ್ರಿ ಮುರಿಯಲು ತಮ್ಮ ಮೂವರು ಶಾಸಕರನ್ನು ಬಿಜೆಪಿಯವರು ಕರೆದುಕೊಂಡು ಹೋಗಿ ಮುಂಬೈಯಲ್ಲಿ ಹೊಟೇಲೊಂದರಲ್ಲಿ ಕೂಡಿ ಹಾಕಿದ್ದಾರೆ ಎಂದು ಕಾಂಗ್ರೆಸ್ ಮೊನ್ನೆ ಆರೋಪಿಸಿತ್ತು.

ಆದರೆ ಇದನ್ನು ಬಿಜೆಪಿ ನಿರಾಕರಿಸಿದ್ದು ತಮ್ಮ ಶಾಸಕರನ್ನು ಸೆಳೆಯುವ ಯತ್ನದಲ್ಲಿ ಕಾಂಗ್ರೆಸ್ ನಿರತವಾಗಿದೆ. ಹೀಗಾಗಿ ಗುರುಗ್ರಾಮದ ಹೊಟೇಲ್ ನಲ್ಲಿ ಎಲ್ಲಾ 104 ಬಿಜೆಪಿ ಶಾಸಕರನ್ನು ಕೂಡಿಹಾಕಿದ್ದೇವೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ನಿನ್ನೆ ಮಕರ ಸಂಕ್ರಾಂತಿ ಹಬ್ಬದ ದಿನ ರಾಜ್ಯದ ಇಬ್ಬರು ಸ್ವತಂತ್ರ ಶಾಸಕರಾದ ಎಚ್ ನಾಗೇಶ್ ಮತ್ತು ಆರ್ ಶಂಕರ್ ಅವರು ರಾಜೀನಾಮೆ ನೀಡಿದ ನಂತರ ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು.ಈ ಮಧ್ಯೆ ಇಂದು ಬೆಂಗಳೂರಿನ ಕುಮಾರ ಕೃಪಾ ಅತಿಥಿಗೃಹದಲ್ಲಿ ಕಾಂಗ್ರೆಸ್ ನಾಯಕರಾದ ಕೆ ಸಿ ವೇಣುಗೋಪಾಲ್, ಸಿದ್ದರಾಮಯ್ಯ ಮತ್ತು ದಿನೇಶ್ ಗುಂಡೂರಾವ್ ರಹಸ್ಯ ಸಭೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

About the author

ಕನ್ನಡ ಟುಡೆ

Leave a Comment