ರಾಜ್ಯ ಸುದ್ದಿ

ಮುಲಾಜಿಲ್ಲದೆ ಶೂಟ್​ ಮಾಡಿ ಎಂದು ಭಾವೋದ್ವೇಗದಲ್ಲಿ ಹೇಳಿದ್ದೇನೆ, ಅದು ಆದೇಶವಲ್ಲ: ಸಿಎಂ ಸ್ಪಷ್ಟನೆ

ಬೆಂಗಳೂರು: ಮಂಡ್ಯ ಜಿಲ್ಲೆ ಜೆಡಿಎಸ್ ಮುಖಂಡ ಪ್ರಕಾಶ್ ಕೊಲೆ ಪ್ರಕರಣದಲ್ಲಿ ಭಾಗಿಯಾದವರನ್ನು ಮುಲಾಜಿಲ್ಲದೆ ಶೂಟ್​ ಮಾಡಿ ಎಂದು ಭಾವೋದ್ವೇಗದಲ್ಲಿ ಹೇಳಿದ್ದೇನೆ. ಅದು ಆದೇಶವಲ್ಲ ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮಂಗಳವಾರ ಸ್ಪಷ್ಟಪಡಿಸಿದ್ದಾರೆ.
ಜೆಡಿಎಸ್ ಮುಖಂಡನ ಹತ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ಮೊಬೈಲ್ ನಲ್ಲಿ ಮಾತನಾಡುತ್ತ ಭಾವೋದ್ವೇಗಕ್ಕೆ ಒಳಗಾದ ಸಿಎಂ, “ಹಂತಕರ ವಿರುದ್ಧ ಕ್ರಮ ಕೈಗೊಳ್ಳುವುದು ಪೊಲೀಸ್​ ಅಧಿಕಾರಿಗಳಾದ ನಿಮ್ಮ ಕರ್ತವ್ಯ. ಅವರನ್ನು ಯಾವುದೇ ಮುಲಾಜಿಲ್ಲದೆ ಶೂಟ್​ ಮಾಡಿ” ಎಂದು ತಾಕೀತು ಮಾಡಿದರು. ಕುಮಾರಸ್ವಾಮಿ ಅವರ ಈ ಹೇಳಿಕೆಯ ವಿಡಿಯೋ ವೈರಲ್​ ಆಗುತ್ತಿದ್ದಂತೆ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಿಎಂ ಬೇಜಾವ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದಿದೆ.
ಪ್ರಕಾಶ್​ ಅವರು ಉತ್ತಮ ಕಾರ್ಯಕರ್ತರಾಗಿದ್ದರು. ಇಂಥ ಒಳ್ಳೆಯ ವ್ಯಕ್ತಿಯ  ಹತ್ಯೆ ಮಾಡಲಾಗಿದೆ ಎನ್ನುವ ವಿಚಾರ ನನಗೆ ಆಘಾತ ಉಂಟುಮಾಡಿದೆ. ಈ ಮೊದಲು ಕೂಡ 3 ಕೊಲೆಗಳು ನಡೆದಿವೆ. ನಡು ರಸ್ತೆಯಲ್ಲಿ, ಹಾಡ ಹಗಲೇ ಈ ರೀತಿ ಕೊಲೆಗಳು ನಡೆಯುತ್ತಿವೆ. ಇಲ್ಲಿರುವ ಪೊಲೀಸ್​ ಅಧಿಕಾರಿಗಳು ಯಾವ ರೀತಿ ಕ್ರಮ ಕೈಗೊಳ್ಳುತ್ತಿದ್ದಾರೋ ನನಗಂತೂ ತಿಳಿಯುತ್ತಿಲ್ಲ. ಈ ಬಗ್ಗೆ ನನಗೆ ಅಸಮಾಧಾನವಿದೆ ಎಂದು ಸಿಎಂ ತಿಳಿಸಿದ್ದಾರೆ.
ನಿನ್ನೆ ಮದ್ದೂರಿನ ಟಿಬಿ ಸರ್ಕಲ್​ ಬಳಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಾಕಾಸ್ತ್ರದಿಂದ ಪ್ರಕಾಶ್​ ಅವರನ್ನು ಕೊಚ್ಚಿ ಕೊಲೆ ಗೈದಿದ್ದರು. ಹಳೆ ವೈಷಮ್ಯವೇ ಈ ಹತ್ಯೆಗೆ ಕಾರಣ ಎನ್ನಲಾಗುತ್ತಿದೆ.

About the author

ಕನ್ನಡ ಟುಡೆ

Leave a Comment