ರಾಜಕೀಯ

ಮುಸ್ಲಿಂ ಹೆಂಗಸಿನ ಹಿಂದೆ ಓಡಿಹೋಗಿದ್ದೇ ನಿಮ್ಮ ಸಾಧನೆ; ದಿನೇಶ್ ಗುಂಡೂರಾವ್ ಗೆ ಅನಂತ್ ಕುಮಾರ್ ಹೆಗಡೆ ತಿರುಗೇಟು

ಬೆಂಗಳೂರು: ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಪದೇ ಪದೇ ಸುದ್ದಿಯಾಗುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಈಗ ಅಂಥಹದ್ದೇ ಒಂದು ಹೇಳಿಕೆ ನೀಡಿ ಮತ್ತೆ ಸುದ್ದಿಯಾಗಿದ್ದಾರೆ. ಕೊಡಗು ಜಿಲ್ಲೆಯಲ್ಲಿ ಹಿಂದೂ ಜಾಗರಣ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿಂದೂ ಹುಡುಗಿಯರ ಮೈ ಮುಟ್ಟಿದವರ ಕೈ ಕತ್ತರಿಸುತ್ತೇನೆ ಎಂದಿದ್ದ ಅನಂತ್ ಕುಮಾರ್ ಹೆಗಡೆ ಇದೀಗ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನನ್ನ ಸಾಧನೆ ಬಗ್ಗೆ ಮಾತನಾಡುವ ದಿನೇಶ್ ಗುಂಡೂರಾವ್ ಅವರದ್ದು ಮುಸ್ಲಿಂ ಹೆಂಗಸಿನ ಹಿಂದೆ ಓಡಿಹೋಗಿದ್ದೇ ದೊಡ್ಡ ಸಾಧನೆ ಎಂದು ತಿರುಗೇಟು ನೀಡಿದ್ದಾರೆ. ಹಿಂದೂ ಹುಡುಗಿಯನ್ನು ಮುಟ್ಟಿದರೆ ಅವರ ಕೈಯನ್ನೇ ಇಲ್ಲದಂತೆ ಮಾಡಿ ಎಂದು ಹಿಂದೂ ಜಾಗರಣ ವೇದಿಕೆಯಲ್ಲಿ ಮಾತನಾಡಿದ್ದ ಅನಂತ್ ಕುಮಾರ್ ಗೆ ಟ್ವಿಟ್ಟರ್ ನಲ್ಲಿ ತಿರುಗೇಟು ನೀಡಿದ್ದ ದಿನೇಶ್ ಗುಂಡೂರಾವ್ ಕೇಂದ್ರ ಸಚಿವರಾಗಿ ಅಥವಾ ಸಂಸದರಾಗಿ ನಿಮ್ಮ ಸಾಧನೆ ಏನು, ಕರ್ನಾಟಕ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಇಂಥವರು ಸಂಸದರಾಗಿ ಆಯ್ಕೆಯಾಗುತ್ತಿರುವುದು ಶೋಚನೀಯ ಎಂದು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಹೆಗಡೆ, “ಈ ವ್ಯಕ್ತಿ ಕೇಳಿದ ಪ್ರಶ್ನೆಗೆ ನಾನು ಉತ್ತರಿಸುತ್ತಿದ್ದೇನೆ. ನಿಮ್ಮ ಸಾಧನೆಯ ಹಿಂದೆ ಯಾರಿದ್ದಾರೆ ಎಂಬುದನ್ನು ಬಹಿರಂಗಪಡಿಸಿ. ನೀವು ಓರ್ವ ಮುಸ್ಲಿಂ ಮಹಿಳೆ ಹಿಂದೆ ಓಡಿ ಹೋದ ವ್ಯಕ್ತಿ ಎಂಬುದಷ್ಟೇ ನನಗೆ ಗೊತ್ತು ಎಂದಿದ್ದಾರೆ.
ಇನ್ನು ಕಾಂಗ್ರೆಸ್ ಕೂಡ, ಅನಂತ್​ ಕುಮಾರ್​ ಒಬ್ಬ ಮಂತ್ರಿಯಾಗಿರಲು, ಸಂಸದನಾಗಿರಲು ನಾಲಾಯಕ್ಕು. ಬಿಜೆಪಿ ಇಂಥವರ ಮೇಲೆ ಕಡಿವಾಣ ಹಾಕದೆ ಇವರನ್ನು ಹೆಚ್ಚೆಚ್ಚು ಪ್ರೋತ್ಸಾಹಿಸುತ್ತಿದೆ. ಧರ್ಮಗಳ ಮಧ್ಯೆ ಸಾಮರಸ್ಯವನ್ನು ಹಾಳು ಮಾಡುವ, ಸಂವಿಧಾನವನ್ನು, ಅನ್ಯ ಕೋಮಿನವರನ್ನು, ದಲಿತರನ್ನು ಅವಮಾನಿಸುವ ಇಂತಹ ಬಿಜೆಪಿಯವರಿಗೆ ಜನರೇ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕುಎಂದಿದ್ದಾರೆ. ಅದಕ್ಕೆ ಅನಂತ್ ಕುಮಾರ್ ಹೆಗಡೆ, ದೇಶವನ್ನು ಲೂಟಿ ಹೊಡೆದ ನಾಯಕತ್ವ ಮತ್ತು ಇವರಿಗೆ ಶರಣಾಗಿರುವ ಗುಲಾಮರಿಂದಲೇ ತುಂಬಿರುವ ಪಕ್ಷದಿಂದ ಇನ್ನೇನನ್ನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ್ದಾರೆ.

About the author

ಕನ್ನಡ ಟುಡೆ

Leave a Comment