ರಾಜ್ಯ ಸುದ್ದಿ

ಮೆತ್ತಗಾದ ಪ್ರತಿಪಕ್ಷ: ನಿಟ್ಟುಸಿರಿಟ್ಟ ಸಮ್ಮಿಶ್ರ ಸರ್ಕಾರ

ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಅಧಿವೇಶನ ಆರಂಭವಾಗುತ್ತದೆ ಎಂದ ತಕ್ಷಣ ಆಡಳಿತ ಪಕ್ಷಕ್ಕೆ ಪ್ರಮುಖವಾಗಿ ಕಾಡುವ ಸಮಸ್ಯೆ ಎಂದರೆ ಕಬ್ಬಿನ ಬಾಕಿ ಪಾವತಿ ಮಾಡದೇ ಇರುವುದು. ಈ ವರ್ಷವೂ ಬೆಳಗಾವಿ ಅಧಿವೇಶನದ ಆರಂಭದಲ್ಲಿ ಆಡಳಿತ ಪಕ್ಷಕ್ಕೆ ಕಬ್ಬು ಬೆಳೆಯುವ ರೈತರ ಸಮಸ್ಯೆಯೇ ಅಧಿವೇಶನದಲ್ಲಿ ಕಂಟಕವಾಗುವ ಆತಂಕ ಇತ್ತು. ಪ್ರತಿಪಕ್ಷ ಬಿಜೆಪಿ ಕೂಡ ಅದನ್ನೇ ಪ್ರಮುಖ ಅಸ್ತ್ರವನ್ನಾಗಿ ಇಟ್ಟುಕೊಂಡು ಅಧಿವೇಶನ ಎದುರಿಸಲು ಸಿದ್ಧತೆ ಮಾಡಿಕೊಂಡು ಬಂದಿತ್ತು. ಆದರೆ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಅಧಿವೇಶನಕ್ಕೂ ಮೊದಲೇ ಕಬ್ಬು ಬೆಳೆಗಾರರ ಸಮಸ್ಯೆ ಆಲಿಸಲು ರೈತರೊಂದಿಗೆ ಹಲವು ಬಾರಿ ಸಭೆ ನಡೆಸಿ ಕಾರ್ಖಾನೆ ಮಾಲೀಕರ ಸಭೆ ನಡೆಸಿ ಅವರಿಗೂ ಎಚ್ಚರಿಕೆಯ ಸಂದೇಶ ರವಾನೆ ಮಾಡುವ ಪ್ರಯತ್ನ ಮಾಡಿ ಪ್ರತಿಪಕ್ಷ ತಣ್ಣಗಾಗುವಂತೆ ಮಾಡಿದರು.

ಪ್ರತಿಪಕ್ಷ ಬಿಜೆಪಿ ಸರ್ಕಾರಕ್ಕೆ ಆಪರೇಷನ್‌ ಕಮಲದ ಭೀತಿ ಹುಟ್ಟಿಸುತ್ತಲೇ ಸರ್ಕಾರವನ್ನು ಗೊಂದಲದಲ್ಲಿ ಮುಳುಗಿಸಿ ಅಧಿವೇಶನ ಸುಸೂತ್ರವಾಗಿ ನಡೆಯದಂತೆ ಮಾಡಬೇಕೆಂಬ ಪ್ರಯತ್ನವೂ ಮೊದಲ ವಾರದಲ್ಲಿ ಕೈಗೂಡಲಿಲ್ಲ. ಹಿಂದಿನ ವರ್ಷಗಳಲ್ಲಿ ಕಲಾಪದಲ್ಲಿ ಮೊದಲ ಎರಡು ದಿನ ಪ್ರಶ್ನೋತ್ತರ ಕಲಾಪಕ್ಕಿಂತಲೂ ಮೊದಲೇ ನಿಲುವಳಿ ಸೂಚನೆ ಮಂಡನೆಗೆ ಪಟ್ಟು ಹಿಡಿದು ಪ್ರತಿಪಕ್ಷ ಸರ್ಕಾರದ ವಿರುದ್ಧ ಧರಣಿ ನಡೆಸಿ ಸಭಾತ್ಯಾಗ ಮಾಡಿ ಸದನದ ಸಮಯ ನುಂಗಿಹಾಕುತ್ತಿತ್ತು. ಆದರೆ, ಬಿಜೆಪಿ ನಾಯಕರು ಈ ಬಾರಿ ಆರಂಭದಲ್ಲಿ ಯಾವುದೇ ಗಲಾಟೆ, ಧರಣಿಗೆ ಮುಂದಾಗದೇ ಸುಗಮ ಕಲಾಪ ನಡೆಸಲು ಅವಕಾಶ ಕಲ್ಪಿಸಿರುವುದು ಪ್ರತಿಪಕ್ಷ ಮೆತ್ತಗಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಲೋಕಸಭೆ ಚುನಾವಣೆ ಆತಂಕ: ಈ ವರ್ಷ ಲೋಕಸಭೆಗೆ ಚುನಾವಣೆ ಇರುವುದರಿಂದ ಅಧಿವೇಶನದಲ್ಲಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೇ ಬರೀ ಗಲಾಟೆ ಮಾಡಿದರೆ ಅದು ಕೂಡ ಸಾರ್ವಜನಿಕವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ತಪ್ಪುಸಂದೇಶ ರವಾನೆಯಾಗುತ್ತದೆ ಎಂಬ ಆತಂಕವೂ ಬಿಜೆಪಿ ನಾಯಕರನ್ನು ಕಾಡಿದಂತಿದೆ. ಆಡಳಿತ ಪಕ್ಷದ ಸದಸ್ಯರು ಸರ್ಕಾರ ಸಮಸ್ಯೆಗಳ ಬಗ್ಗೆ ಚರ್ಚೆಗೆ ಸಿದ್ದವಿದ್ದರೂ ಬಿಜೆಪಿಯವರು ಅನಗತ್ಯ ಗೊಂದಲ ಸೃಷ್ಟಿಸಿ ಕಲಾಪದ ಸಮಯ ಹಾಳು ಮಾಡುತ್ತಿದ್ದಾರೆ ಎಂಬ ಸಂದೇಶ ರವಾನಿಸಿದರೆ ಅದು ತಮಗೆ ಮುಳುವಾಗುವ ಸಾಧ್ಯತೆ ಇದೆ ಎಂಬ ಆತಂಕ ಬಿಜೆಪಿ ನಾಯಕರನ್ನು ಕಾಡಿದಂತಿದೆ.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಗೈರು ಹಾಜರಿಯಲ್ಲಿಯೂ ಸಮ್ಮಿಶ್ರ ಸರ್ಕಾರವು ಪ್ರತಿಪಕ್ಷದ ವಿರುದ್ದ ಹಠಕ್ಕೆ ಬಿದ್ದು ಗೊಂದಲ ಸೃಷ್ಟಿಸಿಕೊಳ್ಳದೇ ಹೆಚ್ಚಿನ ಚರ್ಚೆಗೆ ಅವಕಾಶ ಮಾಡಿಕೊಡುವ ಮೂಲಕ ಜಾಣತನ ತೋರಿತು. ಮೊದಲ ವಾರದ ಕಲಾಪದಲ್ಲಿ ತಾನು ಬಯಸಿದ ವಿಧೇಯಕಗಳನ್ನೂ ಪ್ರತಿಪಕ್ಷದ ವಿರೋಧವಿಲ್ಲದೇ ಅಂಗೀಕಾರ ಮಾಡಿಕೊಳ್ಳುವಲ್ಲಿ ಯಶಸ್ವಿಯಾಯಿತು.

 

About the author

ಕನ್ನಡ ಟುಡೆ

Leave a Comment