ರಾಜ್ಯ ಸುದ್ದಿ

ಮೇಕೆದಾಟು: ಆಕ್ಷೇಪ ಪರಿಗಣಿಸದಿದ್ದರೆ ಪ್ರತಿಭಟನೆ

ಬೆಂಗಳೂರು/ಪುದುಚೇರಿ: ಮೇಕೆದಾಟುವಿನಲ್ಲಿ ಕರ್ನಾಟಕ ಸರ್ಕಾರ ನಿರ್ಮಿಸಲು ಉದ್ದೇಶಿಸಿರುವ ಅಣೆಕಟ್ಟಿಗೆ ವಿರುದ್ಧವಾಗಿ ಪುದುಚೇರಿ ಹಾಗೂ ತಮಿಳುನಾಡು ಸರ್ಕಾರಗಳು ಸಲ್ಲಿಸಿರುವ ಆಕ್ಷೇಪಗಳಿಗೆ ಕೇಂದ್ರ ಸರ್ಕಾರ ಗಮನ ಹರಿಸದಿದ್ದರೆ ಈ ರಾಜ್ಯಗಳ ರೈತರಿಂದ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾಗುತ್ತದೆ ಎಂದು ಪುದುಚೇರಿ ಮುಖ್ಯಮಂತ್ರಿ ವಿ.ನಾರಾಯಣ ಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಅಣೆಕಟ್ಟು ವಿಚಾರದಲ್ಲಿ ಕಾವೇರಿ ನದಿ ನೀರಿಗೆ ಸಂಬಂಧಪಟ್ಟ ರಾಜ್ಯಗಳಿಗೆ ಅನ್ಯಾಯವಾಗುತ್ತದೆಂಬ ವಿಚಾರವನ್ನು ಕೇಂದ್ರ ಸರ್ಕಾರ ಹಾಗೂ ಕರ್ನಾಟಕ ಸರ್ಕಾರ ಕಡೆಗಣಿಸುತ್ತಿವೆ. ಮೇಕೆದಾಟು ಯೋಜನಾ ವರದಿ ಸಲ್ಲಿಸುವಂತೆ ಕೇಂದ್ರ ಜಲ ಆಯೋಗ ಕರ್ನಾಟಕಕ್ಕೆ ಅನುಮತಿ ನೀಡಿದೆ. ಈ ನಿಟ್ಟಿನಲ್ಲಿ ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಪಟ್ಟ ಎಲ್ಲಾ ರಾಜ್ಯಗಳ ಲೋಕೋಪಯೋಗಿ ಇಲಾಖೆಗಳು ಹಾಗೂ ಕೃಷಿ ಇಲಾಖೆಗಳ ಕಾರ್ಯದರ್ಶಿ ಮಟ್ಟದ ಸಭೆಯೊಂದನ್ನು ನಡೆಸುವಂತೆ ಕೇಂದ್ರ ಜಲ ಆಯೋಗಕ್ಕೆ (ಸಿಡಬ್ಲೂಸಿ) ಆಗ್ರಹಿಸಿದ್ದಾರೆ. ಈ ನಡುವೆ, ಕೊಯಮತ್ತೂರಿನಲ್ಲಿ ಮಾತನಾಡಿದ ತಮಿಳುನಾಡು ಬಿಜೆಪಿ ಅಧ್ಯಕ್ಷೆ ತಮಿಳ್‌ಸಾಯ್‌ ಸೌಂದರರಾಜನ್‌, “”ಮೇಕೆದಾಟು ಯೋಜನೆಯ ಬಗ್ಗೆ ಡಿಎಂಕೆಯ ನಿಲುವೇನು? ಮೇಕೆದಾಟು ವಿವಾದವನ್ನು ಡಿಎಂಕೆ ಕಾರ್ಯಾಧ್ಯಕ್ಷ ಸ್ಟಾಲಿನ್‌ ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರಲ್ಲಿ
ಚರ್ಚಿಸಿದ್ದಾರೆಯೇ? ಹಾಗೊಮ್ಮೆ ಚರ್ಚಿಸಿದ್ದರೆ ಚರ್ಚೆಯ ಫ‌ಲಶ್ರುತಿಯೇನು? ತಮಿಳುನಾಡು ಕಾಂಗ್ರೆಸ್‌ ಅಧ್ಯಕ್ಷರು ಕರ್ನಾಟಕದ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಯೋಜನೆಯ ವಿವಾದದ ಬಗ್ಗೆ ಚರ್ಚಿಸಿದ್ದಾರೆಯೇ?” ಎಂಬ ಪ್ರಶ್ನೆಗಳ ಸುರಿಮಳೆ ಸುರಿಸಿದ್ದಾರೆ. ಜತೆಗೆ, ಯೋಜನೆಯ ಬಗೆಗಿನ ತಮ್ಮ ನಿಲುವಿನ ಬಗ್ಗೆ ಡಿಎಂಕೆ ನಾಯಕ ಸ್ಟಾಲಿನ್‌ ಸ್ಟಷ್ಟನೆ ನೀಡಬೇಕೆಂದು ಒತ್ತಾಯಿಸಿದ್ದಾರೆ.

 

About the author

ಕನ್ನಡ ಟುಡೆ

Leave a Comment