ರಾಜ್ಯ ಸುದ್ದಿ

ಮೇಕೆದಾಟು ಯೋಜನೆ: ಪಿಎಂ ಎಂಟ್ರಿಗೆ ಸಿಎಂ ಮನವಿ

ಬೆಂಗಳೂರು: ಮೇಕೆದಾಟು ಯೋಜನೆಗೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮಧ್ಯಪ್ರವೇಶ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯ ಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಬುಧವಾರ ಹಾಗೂ ಗುರುವಾರ ಕೇಂದ್ರದ ಹಲವು ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಕುಮಾರಸ್ವಾಮಿ, ಪ್ರಧಾನಿಯವರನ್ನು ಭೇಟಿಯಾಗಿ ರಾಜ್ಯದಲ್ಲಿ ಬರ ನಿರ್ವಹಣೆ, ನೀರಾವರಿ, ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಅಗತ್ಯ ನೆರವು, ಸಹಕಾರ ನೀಡುವಂತೆ ಮನವಿ ಮಾಡಿದರು. ನಂತರ ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಕುಮಾರಸ್ವಾಮಿ, ಪ್ರಧಾನಿ ಜತೆ ಮುಖ್ಯವಾಗಿ ಮೇಕೆದಾಟು ಯೋಜನೆ ಬಗ್ಗೆ ಚರ್ಚಿಸ‌ಲಾಯಿತು ಎಂದು ಹೇಳಿದರು.

ಕಾವೇರಿ ಜಲವಿವಾದ ನ್ಯಾಯಾಧೀಕರಣದ ಆದೇಶ ಹಾಗೂ ನಂತರ ಸುಪ್ರೀಂ ಕೋರ್ಟ್‌ನಲ್ಲಿ ಮಾರ್ಪಡಿಸಿದ ಆದೇಶದಂತೆ ತಮಿಳುನಾಡಿಗೆ ಪ್ರತಿ ತಿಂಗಳು ನೀರು ಹರಿಸುವುದನ್ನು ಕ್ರಮವಾಗಿ ನಿರ್ವಹಿಸಲು ಮೇಕೆದಾಟು ಯೋಜನೆ ನೆರವಾಗಲಿದೆ. ವಿದ್ಯುತ್‌ ಉತ್ಪಾದನೆ ಉದ್ದೇಶದ ಯೋಜನೆಗೆ ತಮಿಳುನಾಡು ಆಕ್ಷೇಪ ತೆಗೆದಿದೆ. ಆ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸುವಂತೆ ಪ್ರಧಾನಿಯವರಿಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಕೃಷ್ಣಾ ನ್ಯಾಯಾಧೀಕರಣ- 2ರಡಿ ರಾಜ್ಯಕ್ಕೆ ನೀರಾವರಿ ಉದ್ದೇಶಕ್ಕಾಗಿ 166 ಟಿಎಂಸಿ ನೀರು ಹಂಚಿಕೆಯಾಗಿದ್ದು, ಈ ನೀರಿನ ಬಳಕೆಗೆ ಕೃಷ್ಣಾ ಮೇಲ್ದಂಡೆ ಯೋಜನೆ- ಹಂತ 3 ಸೇರಿದಂತೆ ಮತ್ತಿತರ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಈ ಯೋಜನೆಗಳಿಗೆ ಸಾಕಷ್ಟು ಹಣ ಹೂಡಿಕೆ ಮಾಡಲಾಗಿದ್ದು, ನ್ಯಾಯಾಧಿಕರಣ ತೀರ್ಪು ನೀಡಿ ಐದು ವರ್ಷವಾದರೂ ಅಧಿಸೂಚನೆ ಹೊರಡಿಸದ ಕಾರಣ ರಾಜ್ಯದ ಪಾಲಿನ ನೀರು ಬಳಕೆ ಸಾಧ್ಯವಾಗಿಲ್ಲ. ಹಾಗಾಗಿ ಶೀಘ್ರವಾಗಿ ಅಧಿಸೂಚನೆ ಹೊರಡಿಸುವಂತೆ ಕೋರಲಾಯಿತು ಎಂದರು.

ಹಾಗೆಯೇ ಮಹದಾಯಿ ಜಲ ವಿವಾದ ನ್ಯಾಯಾಧೀಕರಣದ ಅಂತಿಮ ಆದೇಶದಲ್ಲಿ ರಾಜ್ಯಕ್ಕೆ 13.42 ಟಿಎಂಸಿ ನೀರು ಹಂಚಿಕೆಯಾಗಿದ್ದು, ಕಳಸಾ ಬಂಡೂರಿ ನಾಲಾ ಯೋಜನೆ ಮತ್ತು ಇತರ ಯೋಜನೆಗಳನ್ನು  ಕೈಗೆತ್ತಿಕೊಳ್ಳಬೇಕಿದ್ದು, ನೀರು ಹಂಚಿಕೆ ಸಂಬಂಧ ಶೀಘ್ರವೇ ಅಧಿಸೂಚನೆ ಹೊರಡಿಸುವಂತೆ ವಿನಂತಿಸಲಾಯಿತು. ಕೃಷ್ಣಾ ಮೇಲ್ದಂಡೆ ಯೋಜನೆ-3ನೇ ಹಂತವನ್ನು ರಾಷ್ಟ್ರೀಯ ಯೋಜನೆ ಎಂದು ಘೋಷಿಸುವಂತೆಯೂ ಪ್ರಧಾನಿಯವರನ್ನು ಕೋರಲಾಯಿತು. ಈ ಯೋಜನೆಯಿಂದ ಉತ್ತರ ಕರ್ನಾಟಕದಲ್ಲಿ 5.30 ಲಕ್ಷ ಹೆಕ್ಟೇರ್‌ಗೆ ನೀರಾವರಿ ಸೌಲಭ್ಯ ಸಿಗುವ ನಿರೀಕ್ಷೆ ಇದ್ದು, ರಾಷ್ಟ್ರೀಯ ಯೋಜನೆಯ ಮಾನದಂಡಕ್ಕಿಂತ ಹೆಚ್ಚಾಗಿದೆ. ಯೋಜನೆಯ ಅಂದಾಜು ವೆಚ್ಚ 51,148 ಕೋಟಿ ರೂ.ಗಳಾಗಿದ್ದು, ರಾಜ್ಯವೇ ವೆಚ್ಚ ಮಾಡಬೇಕಾದರೆ ವಿಳಂಬವಾಗಬಹುದು. ಹಾಗಾಗಿ ಇದನ್ನು ರಾಷ್ಟ್ರೀಯ ಯೋಜನೆಯೆಂದು ಘೋಷಿಸುವಂತೆ ಜಲಸಂಪನ್ಮೂಲ ಸಚಿವಾಲಯಕ್ಕೆ ಸೂಚನೆ ನೀಡುವಂತೆ ಪ್ರಧಾನಿಯವರನ್ನು ಕೋರಲಾಯಿತು ಎಂದು ಹೇಳಿದರು.

ತ್ವರಿತ ಪರಿಹಾರ ವಿತರಣೆಗೆ ಆಗ್ರಹ: ಬರದ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್ ಮಾನದಂಡದನ್ವಯ ಶೇ. 33ಕ್ಕೂ ಹೆಚ್ಚು ನಷ್ಟ ಅನುಭವಿಸಿದ ರೈತರಿಗೂ ಇನ್‌ಪುಟ್‌ ಸಬ್ಸಿಡಿ ಹಾಗೂ ಎನ್‌ಡಿಆರ್‌ಎಫ್ ಅಡಿ ಮುಂಗಾರು ಹಂಗಾಮಿನ ಬರ ಪರಿಹಾರ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವಂತೆ ಪ್ರಧಾನಿಯವರನ್ನು ಕೋರಲಾಯಿತು. ಮುಂಗಾರು ಹಂಗಾಮಿನಲ್ಲಿ ಕೃಷಿ ಮತ್ತು ತೋಟಗಾರಿಕಾ ವಲಯಗಳಲ್ಲಿ 16,662 ಕೋಟಿ ರೂ. ನಷ್ಟವಾಗಿದ್ದು,, ಎಸ್‌ಡಿಆರ್‌ಎಫ್ ಮಾನದಂಡಗಳ ಪ್ರಕಾರ ಕೇಂದ್ರದಿಂದ 2434 ಕೋಟಿ ರೂ. ಪರಿಹಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.

 

About the author

ಕನ್ನಡ ಟುಡೆ

Leave a Comment