ರಾಷ್ಟ್ರ ಸುದ್ದಿ

ಮೇಕೆದಾಟು ಯೋಜನೆ: ರಾಜ್ಯ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

ನವದೆಹಲಿ: ಕಾವೇರಿ ನದಿಗೆ ಅಡ್ಡಲಾಗಿ ಮೇಕೆದಾಟು ಬಳಿ ಜಲಾಶಯ ನಿರ್ಮಾಣ ಮಾಡುವ ಸಂಬಂಧ ಯೋಜನಾ ವರದಿ ತಯಾರಿಸಲು ಕೇಂದ್ರೀಯ ಜಲ ಆಯೋಗ ಕರ್ನಾಟಕ ಸರ್ಕಾರಕ್ಕೆ ಅನುಮತಿ ನೀಡಿದ್ದರಿಂದ ಅಕ್ರೋಶಗೊಂಡಿರುವ ತಮಿಳುನಾಡು ಸರ್ಕಾರ ಶುಕ್ರವಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ.

ಕರ್ನಾಟಕ ಸರ್ಕಾರದ ಮೇಕೆದಾಟು ಅಣೆಕಟ್ಟು ಯೋಜನೆ ಅನಧಿಕೃತವಾಗಿದ್ದು, ಆ ವಿಚಾರದಲ್ಲಿ ಮುನ್ನಡೆಯದಂತೆ ತಡೆಯೊಡ್ಡಬೇಕು. ಕಾವೇರಿ ನೀರಾವರಿ ನಿಗಮ ಮೇಕೆದಾಟು ಅಣೆಕಟ್ಟೆ ಕುರಿತಂತೆ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಸುವುದಕ್ಕೂ ನಿರ್ಬಂಧ ಹೇರಬೇಕು. ತನ್ನ ನೈಜ ಹಾಗೂ ಸಮರ್ಥನೀಯ ಆಕ್ಷೇಪಣೆಗಳು ನಿರ್ಧಾರವಾಗುವವರೆಗೂ ಯಥಾಸ್ಥಿತಿ ಕಾಯ್ದುಕೊಳ್ಳಬೇಕೆಂದು ತಮಿಳುನಾಡು ಮನವಿ ಮಾಡಿಕೊಂಡಿದೆ.

ಮೇಕೆದಾಟು ಯೋಜನೆಗೆ ಸಂಬಂಧಿಸಿದ ಕರ್ನಾಟಕದ ಏಕಪಕ್ಷೀಯ ಕ್ರಮದಿಂದಾಗಿ ತಮಿಳುನಾಡಿನ ಜನರಲ್ಲಿ ಆತಂಕ ವ್ಯಕ್ತವಾಗುತ್ತಿದೆ. ಏಕೆಂದರೆ, ಕಾವೇರಿ ನೀರಿನ ಮೇಲೆ ತಮಿಳುನಾಡಿನ ಲಕ್ಷಾಂತರ ರೈತರ ಜೀವನ ಅವಲಂಬಿಸಿದೆ. ಕರ್ನಾಟಕ ಯೋಜನೆ ಕಾವೇರಿ ಅಂತಿಮ ಐತೀರ್ಪು ಹಾಗೂ ಸುಪ್ರೀಂಕೋರ್ಟ್ ತೀರ್ಪಿಗೆ ತದ್ವಿರುದ್ಧವಾಗಿದೆ ಎಂದು ದೂರಿದೆ. ಮೇಕೆದಾಟು ಅಣೆಕಟ್ಟುವಿನಿಂದ ಕೃಷ್ಣರಾಜ ಸಾಗರ, ಕಬಿನಿ ಜಲಾಶಯ ಹಾಗೂ ಬಿಲಿಗುಂಡ್ಲು ನಡುವಣ ಜಲಾನಯನ ಪ್ರದೇಶದಲ್ಲಿನ ನೀರಿನ ಹರಿವಿಗೆ ತೊಂದರೆಯಾಗುತ್ತದೆ ಎಂದು ತಮಿಳುನಾಡು ಸರ್ಕಾರ ವಾದಿಸಿದೆ. ಕರ್ನಾಟಕ ಸರ್ಕಾರ ಮೇಕೆದಾಟುವಿನಲ್ಲಿ 67.16 ಟಿಎಂಸಿ ಸಾಮರ್ಥ್ಯದ ಅಣೆಕಟ್ಟೆ ಕಟ್ಟುವ ಉದ್ದೇಶವನ್ನು ಹೊಂದಿದೆ. ಅದೇ ಸ್ಥಳದಲ್ಲಿ 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲೂ ಮುಂದಾಗಿದೆ. ಒಟ್ಟಾರೆ ಈ ಯೋಜನೆಗೆ ರೂ. 5912 ಕೋಟಿ ವೆಚ್ಚ ಮಾಡಲು ನಿರ್ಧರಿಸಿದೆ.

About the author

ಕನ್ನಡ ಟುಡೆ

Leave a Comment