ರಾಷ್ಟ್ರ ಸುದ್ದಿ

ಲೋಕಸಭೆ ಕಲಾಪ: 24 ಎಐಎಡಿಎಂಕೆ ಸಂಸದರ ಅಮಾನತು

ಹೊಸದಿಲ್ಲಿ: ಚಳಿಗಾಲದ ಸಂಸತ್‌ ಅಧಿವೇಶನ ಆರಂಭಗೊಂಡ ದಿನದಿಂದಲೂ ಕರ್ನಾಟಕದ ಮೇಕೆದಾಟು ಅಣೆಕಟ್ಟು ಯೋಜನೆಗೆ ವಿರೋಧ ವ್ಯಕ್ತಪಡಿಸಿ ಸುಗಮ ಕಲಾಪಕ್ಕೆ ಅಡ್ಡಿಪಡಿಸುತ್ತಾ ಬಂದಿರುವ 24 ಎಐಎಡಿಎಂಕೆ ಸದಸ್ಯರನ್ನು ಐದು ದಿನಗಳವರೆಗೆ ಲೋಕಸಭೆಯಿಂದ ಅಮಾನತುಗೊಳಿಸಲಾಗಿದೆ. ಸಭ್ಯತೆಯ ನಿಯಮ ಮೀರಿ ಸದನದಲ್ಲಿ ಗದ್ದಲ ನಡೆಸಿದ್ದರಿಂದ ಶಿಸ್ತು ಕ್ರಮದ ಭಾಗವಾಗಿ ಸ್ಪೀಕರ್‌ ಸುಮಿತ್ರಾ ಮಹಾಜನ್‌, ಮುಂದಿನ ಐದು ದಿನದ ಕಲಾಪಗಳಿಂದ ಈ ಸಂಸದರನ್ನು ಅಮಾನತುಗೊಳಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಮೇಕೆದಾಟು ಅಣೆಕಟ್ಟು ವಿಚಾರ ಮುಂದಿಟ್ಟುಕೊಂಡು ಎಐಎಡಿಎಂಕೆ ಸದಸ್ಯರು ಗದ್ದಲ ನಡೆಸುತ್ತಲೇ ಬಂದಿದ್ದು, ಬುಧವಾರದ ಲೋಕಸಭೆ ಕಲಾಪದಲ್ಲೂ ಇದು ಪುನರಾವರ್ತನೆಯಾಯಿತು. ಒಂದು ಹಂತದಲ್ಲಿ ಸದಸ್ಯರು ಸ್ಪೀಕರ್‌ ಮುಂಭಾಗದ ಸ್ಥಳಕ್ಕೆ ಬಂದು ಭಿತ್ತಿಪತ್ರಗಳನ್ನು ಹಿಡಿದು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ದಾಖಲೆ ಪತ್ರಗಳನ್ನು ಹರಿದು ಲೋಕಸಭೆ ಸಚಿವಾಲಯದ ಅಧಿಕಾರಿಗಳು ಕುಳಿತಿದ್ದ ಸ್ಥಳದತ್ತ ತೂರಿ ಆಕ್ರೋಶ ವ್ಯಕ್ತಪಡಿಸಿದರು. ಈ ವರ್ತನೆಯಿಂದ ಬೇಸತ್ತ ಸ್ಪೀಕರ್‌ ನಿಯಮ 374(ಎ)ರಡಿ ಪ್ರತಿಭಟನಾ ನಿರತ ಸಂಸದರನ್ನು ಐದು ದಿನಗಳ ಮಟ್ಟಿಗೆ ಅಮಾನತುಗೊಳಿಸಿದರು. ಎಐಎಡಿಎಂಕೆ 37 ಸಂಸದರನ್ನು ಹೊಂದಿದೆ. ಇತ್ತ ರಾಜ್ಯಸಭೆಯಲ್ಲೂ ಎಐಎಡಿಎಂಕೆ ಸದಸ್ಯರಿಂದ ಪ್ರತಿಭಟನೆ ನಡೆಯಿತು.

ನಿರಂತರ ಪುಂಡಾಟ: ಮೇಕೆದಾಟಿನಲ್ಲಿ ಅಣೆಕಟ್ಟು ನಿರ್ಮಾಣ ಸಂಬಂಧ ಡಿಪಿಆರ್‌ ಸಿದ್ಧಪಡಿಸಲು ಕರ್ನಾಟಕಕ್ಕೆ ಅವಕಾಶ ನೀಡಿದ ಕೇಂದ್ರ ಜಲ ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ತಮಿಳುನಾಡಿನ ಸಂಸದರು ಸಂಸತ್ತಿನಲ್ಲಿ ನಿರಂತರ ಪುಂಡಾಟ ನಡೆಸುತ್ತಿದ್ದಾರೆ. ಅವರ ಪ್ರತಿಭಟನೆಯಿಂದಾಗಿ ಯಾವುದೇ ಕಲಾಪಗಳು ಸುಗಮವಾಗಿ ನಡೆಸಲು ಸಾಧ್ಯವಾಗಿಲ್ಲ. ಕರ್ನಾಟಕದ ಸಂಸದರು ವಿವರಣೆ ನೀಡಿದರೂ ಕೇಳಿಸಿಕೊಳ್ಳುವ ತಾಳ್ಮೆ ಇಲ್ಲದ ಎಐಎಡಿಎಂಕೆ ಸದಸ್ಯರು ಗಲಾಟೆ ಎಬ್ಬಿಸುತ್ತಲೇ ಇದ್ದು, ಅಂತಿಮವಾಗಿ ಸ್ಪೀಕರ್‌ ಶಿಕ್ಷೆಗೆ ಒಳಗಾಗಿದ್ದಾರೆ.

About the author

ಕನ್ನಡ ಟುಡೆ

Leave a Comment