ರಾಜಕೀಯ

ಮೈತ್ರಿಗೆ ಹಳೆ ಮೈಸೂರು ಹುಳಿ:ಸೀಟು ಹಂಚಿಕೆ ಬಿಕ್ಕಟ್ಟು, ಹಾಲಿ ಕ್ಷೇತ್ರಗಳಿಗೆ ಕಾಂಗ್ರೆಸ್ ಪಟ್ಟು, ಸಿದ್ದು ಕೈಲಿ ಮೈಸೂರು ಜುಟ್ಟು

ಬೆಂಗಳೂರು/ಹೊಸದಿಲ್ಲಿ: ಹಾಲಿ ಸಂಸದರಿರುವ ಹತ್ತು ಕ್ಷೇತ್ರ ಉಳಿಸಿಕೊಳ್ಳಬೇಕು ಮತ್ತು ಪ್ರತಿಷ್ಠಿತ ಮೈಸೂರು-ಕೊಡಗು ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಮಿತ್ರಪಕ್ಷಕ್ಕೆ ಸಿಗದಂತೆ ನೋಡಿಕೊಳ್ಳಬೇಕೆಂದು ಎಐಸಿಸಿ ಸ್ಕ್ರೀನಿಂಗ್‌ ಕಮಿಟಿ ಸಭೆಯಲ್ಲಿ ರಾಜ್ಯ ಕಾಂಗ್ರೆಸ್‌ ನಾಯಕರು ಬಿಗಿಪಟ್ಟು ಹಾಕಿದ್ದಾರೆ. ಇದರೊಂದಿಗೆ ಹಳೆ  ಮೈಸೂರು ಪ್ರಾಂತ್ಯದಲ್ಲೆ ದೋಸ್ತಿಗಳಿಗೆ ಕಗ್ಗಂಟು ಎದುರಾದಂತಾಗಿದೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ನೇತೃತ್ವದ ಸ್ಕ್ರೀನಿಂಗ್‌ ಕಮಿಟಿ ಸಭೆ ದಿಲ್ಲಿಯಲ್ಲಿ ಸೋಮವಾರ ನಡೆಯಿತು. ಕಾಂಗ್ರೆಸ್‌ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಜಿ. ಪರಮೇಶ್ವರ್‌, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಸಚಿವರಾದ ಎಂ.ಬಿ.ಪಾಟೀಲ್‌, ಡಿ.ಕೆ.ಶಿವಕುಮಾರ್‌, ಸಂಸದರಾದ ಎಂ.ವೀರಪ್ಪ ಮೊಯ್ಲಿ, ಕೆ.ಎಚ್‌.ಮುನಿಯಪ್ಪ ಭಾಗಿಯಾಗಿದ್ದರು.

ಮೂರು ಗಂಟೆಗೂ ಹೆಚ್ಚು ಹೊತ್ತು ನಡೆದ ಸಭೆಯಲ್ಲಿ ಕಾಂಗ್ರೆಸ್‌-ಜೆಡಿಎಸ್‌ನ ಹಾಲಿ ಸಂಸದರಿರುವ ಕ್ಷೇತ್ರ ಹೊರತುಪಡಿಸಿ ಇತರ ಕ್ಷೇತ್ರಗಳ ಸಂಭಾವ್ಯರ ಬಗ್ಗೆ ಸುದೀರ್ಘ ಸಮಾಲೋಚನೆ ನಡೆಸಲಾಯಿತು. ಜಾತಿ, ಪ್ರಾದೇಶಿಕತೆ, ಟಿಕೆಟ್‌ ಆಕಾಂಕ್ಷಿಗಳ ಗೆಲುವಿನ ಸಾಮರ್ಥ್ಯ‌ ಆಧರಿಸಿ ಸಾಧಕ ಬಾಧಕಗಳ ಅವಲೋಕನ ಮಾಡಲಾಯಿತು. ನಂತರ ಮಾರ್ಚ್‌ 16ರಂದು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದ ಕೇಂದ್ರೀಯ ಚುನಾವಣಾ ಸಮಿತಿ ಸಭೆಯಲ್ಲಿ ಅಂತಿಮ ನಿರ್ಧಾರ ಕೈಗೊಳ್ಳುವ ನಿಲುವಿಗೆ ಬರಲಾಯಿತು. ಮಾರ್ಚ್‌ 17ರಂದು ಮೊದಲ ಹಂತದ ಪಟ್ಟಿ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಮಂಡ್ಯ, ಹಾಸನ ಸೇರಿ ಜೆಡಿಎಸ್‌ಗೆ 6 ಕ್ಷೇತ್ರ ಬಿಟ್ಟುಕೊಡಲು ಕಾಂಗ್ರೆಸ್‌ ಮುಕ್ತ ಮನಸ್ಸು ಹೊಂದಿದೆ. ಆದರೆ ಕಾಂಗ್ರೆಸ್‌ ಸಂಸದರಿರುವ ತುಮಕೂರು, ಚಿಕ್ಕಬಳ್ಳಾಪುರ ಮೇಲೆ ಜೆಡಿಎಸ್‌ ಕಣ್ಣಿಟ್ಟಿದೆ. ಮೈಸೂರು ಕ್ಷೇತ್ರವನ್ನೂ ಜೆಡಿಎಸ್‌ ಕೇಳಿದ್ದು, ಈ ಪ್ರಸ್ತಾವವನ್ನು ಸಿದ್ದರಾಮಯ್ಯ ಬಲವಾಗಿ ವಿರೋಧಿಸಿದ್ದಾರೆ. ಇದರಿಂದಾಗಿ ಸೀಟು ಹೊಂದಾಣಿಕೆಯಲ್ಲಿ ಹಗ್ಗಜಗ್ಗಾಟ ಶುರುವಾಗಿದೆ. ಈ ಬಿಕ್ಕಟ್ಟನ್ನು ರಾಹುಲ್‌ ಗಾಂಧಿ ಅವರೇ ಇತ್ಯರ್ಥಪಡಿಸಬೇಕಾಗಿ ಬಂದಿದೆ. ಈ ಸಂಬಂಧ ಅವರು ಜೆಡಿಎಸ್‌ ವರಿಷ್ಠರೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಸುವ ಸಾಧ್ಯತೆಯಿದೆ.

ಬೀದರ್‌ನಿಂದ ಖಂಡ್ರೆ: ಕಾಂಗ್ರೆಸ್‌ ಶಾಸಕರೊಬ್ಬರು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಬೀದರ್‌ ಜಿಲ್ಲೆ ಬಾಲ್ಕಿ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಈ ಬಾರಿ ಬೀದರ್‌ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಬೇಕೆಂಬ ಒಮ್ಮತದ ಅಭಿಪ್ರಾಯ ಸಭೆಯಲ್ಲಿ ಮೂಡಿ ಬಂದಿದೆ. ಈ ಮೊದಲು ಅವರ ಪತ್ನಿ ಗೀತಾ ಈಶ್ವರ ಖಂಡ್ರೆ ಅವರ ಹೆಸರು ಮುಂಚೂಣಿಯಲ್ಲಿತ್ತು. ಸ್ವತಃ ಈಶ್ವರ ಖಂಡ್ರೆ ಅವರು ಪತ್ನಿಗೆ ಟಿಕೆಟ್‌ ಕೊಡಿಸಲು ಹೈಕಮಾಂಡ್‌ ಮುಂದೆ ಪ್ರಸ್ತಾಪ ಇಟ್ಟಿದ್ದರು ಎನ್ನಲಾಗಿದೆ. ಆದರೆ ನೀವೇ ಸ್ಪರ್ಧಿಸಬೇಕು ಎಂದು ಹೈಕಮಾಂಡ್‌ ಈಶ್ವರ ಖಂಡ್ರೆ ಅವರಿಗೆ ಸೂಚಿಸಿದೆ ಎಂದು ನಿಖರ ಮೂಲಗಳು ‘ವಿಕ’ಕ್ಕೆ ತಿಳಿಸಿವೆ.

ಜೆಡಿಎಸ್‌ಗೆ ನೀಡಲು ಒಮ್ಮತ ಮೂಡಿರುವ ಕ್ಷೇತ್ರಗಳು : ಮಂಡ್ಯ, ಹಾಸನ, ಶಿವಮೊಗ್ಗ, ಬೆಂಗಳೂರು ಉತ್ತರ, ಉತ್ತರ ಕನ್ನಡ, ವಿಜಯಪುರ/ಉಡುಪಿ-ಚಿಕ್ಕಮಗಳೂರು.

ಎಲ್ಲೆಲ್ಲಿ ಟ್ರಬಲ್‌? 
ಮೈಸೂರು: ಈ ಕ್ಷೇತ್ರ ಬಿಟ್ಟುಕೊಡಲು ಸಿದ್ದರಾಮಯ್ಯಗೆ ಸುತಾರಾಂ ಇಷ್ಟವಿಲ್ಲ. ಆದರೆ, ಇದೇ ಕ್ಷೇತ್ರಕ್ಕಾಗಿ ಜೆಡಿಎಸ್‌ ಪಟ್ಟು ಹಾಕಿದೆ. ಮೈಸೂರನ್ನು ನೀಡದಿದ್ದರೆ ಹಾಲಿ ಸಂಸದರಿರುವ ಕ್ಷೇತ್ರವೊಂದನ್ನು ಕೊಡಬೇಕಾಗುತ್ತದೆ. ಅದರ ಬದಲು ಮೈಸೂರು ಕ್ಷೇತ್ರ ತ್ಯಾಗವೇ ಉತ್ತಮವೆನ್ನುವುದು ಹೈಕಮಾಂಡ್‌ ನಿಲುವು. ಇದಕ್ಕೆ ಮಾಜಿ ಸಿಎಂ ಸಹಮತ ವ್ಯಕ್ತಪಡಿಸಿಲ್ಲ.

ತುಮಕೂರು, ಚಿಕ್ಕಬಳ್ಳಾಪುರ: ಈ ಎರಡು ಕ್ಷೇತ್ರಗಳನ್ನು ಜೆಡಿಎಸ್‌ ಕೇಳಿದೆ. ಕಡೆಪಕ್ಷ ಒಂದಾದರೂ ದಕ್ಕುತ್ತದೆ ಎನ್ನುವ ಲೆಕ್ಕಾಚಾರ ಜೆಡಿಎಸ್‌ನದ್ದು. ಹಾಲಿ ಸಂಸದರಿರುವ ಈ ಕ್ಷೇತ್ರಗಳನ್ನು ಮಿತ್ರಪಕ್ಷಕ್ಕೆ ನೀಡುವುದು ಹೇಗೆ ಎಂಬ ಸಂದಿಗ್ಧದಲ್ಲಿ ಕಾಂಗ್ರೆಸ್‌ ಇದೆ. ಮೈತ್ರಿ ಉಳಿಸಿಕೊಳ್ಳಲು ಅನಿವಾರ್ಯವೆನಿಸಿದರೆ ಈ ಪೈಕಿ 1 ಕ್ಷೇತ್ರವನ್ನು ಜೆಡಿಎಸ್‌ಗೆ ನೀಡುವ ತೀರ್ಮಾನ ಕಡೆಕ್ಷಣದಲ್ಲಿ ಹೊರಹೊಮ್ಮಬಹುದು. ಅಂತಹ ಕ್ಷೇತ್ರದಲ್ಲಿ ದೇವೇಗೌಡರು ಸ್ಪರ್ಧಿಸುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

ವಿಜಯಪುರ: ಈ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಎದುರಾಳಿಗಳೇ ಹೊರತು ಜೆಡಿಎಸ್‌ಗೆ ಅಂತಹ ನೆಲೆಯಿಲ್ಲ. ಜಿಲ್ಲೆಯಲ್ಲಿ ಇಬ್ಬರು ಶಾಸಕರನ್ನು ಹೊಂದಿರುವುದರಿಂದ ಜೆಡಿಎಸ್‌ ದಾಳವುರುಳಿಸಿದೆ. ಆದರೆ, ಲೋಕಸಭೆ ಚುನಾವಣೆ ಅಖಾಡವೇ ವಿಭಿನ್ನವಾಗಿದ್ದು ಕಾಂಗ್ರೆಸ್‌ ಅಭ್ಯರ್ಥಿಯೇ ಸ್ಪರ್ಧಿಸಬೇಕೆನ್ನುವುದು ಗೃಹ ಸಚಿವ ಎಂ.ಬಿ.ಪಾಟೀಲ್‌ ವರಿಷ್ಠರಿಗೆ ಅಭಿಪ್ರಾಯ ನೀಡಿದ್ದಾರೆ.

ಯಾರಿಗೂ ಬೇಡವಾದ ಶಿವಮೊಗ್ಗ : ಉತ್ತರ ಕನ್ನಡ, ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳ ಬಗ್ಗೆ ಒಲವಿಲ್ಲದ್ದರಿಂದ ಮಿತ್ರಪಕ್ಷಕ್ಕೆ ದಾಟಿಸಲು ಕಾಂಗ್ರೆಸ್‌ ಮುಂದಾಗಿದೆ. ಆದರೆ, ಈ ಕ್ಷೇತ್ರಗಳಲ್ಲಿ ಹೋರಾಡಲು ಜೆಡಿಎಸ್‌ಗೂ ಮನಸ್ಸಿಲ್ಲ. ಶಿವಮೊಗ್ಗದಲ್ಲಿ ಜೆಡಿಎಸ್‌ನ ಮಧು ಬಂಗಾರಪ್ಪ ಅವರನ್ನು ಬೆಂಬಲಿಸುವ ತೀರ್ಮಾನಕ್ಕೆ ಕಾಂಗ್ರೆಸ್‌ ಬಂದಿದೆ. ಮಧುಗೇ ಅಂತಹ ಆಸಕ್ತಿಯಿಲ್ಲ. ಇದು ಗೊತ್ತಿದ್ದರೂ ಅನಿವಾರ್ಯವಾಗಿ ಮಧು ಅವರನ್ನೇ ಕಣಕ್ಕಿಳಿಸಲು ಜೆಡಿಎಸ್‌ ಸಿದ್ಧತೆ ಮಾಡಿಕೊಂಡಿದೆ.

ಸಿದ್ದರಾಮಯ್ಯ ಪ್ರತಿಷ್ಠೆ : ಮೈಸೂರು ಕ್ಷೇತ್ರ ಜೆಡಿಎಸ್‌ಗೆ ನೀಡಿದರೆ ತಮ್ಮ ಪ್ರತಿಷ್ಠೆಗೆ ಕುಂದುಂಟಾಗುತ್ತದೆ ಎನ್ನುವುದು ಸಿದ್ದರಾಮಯ್ಯ ಆಲೋಚನೆ. ಮೈಸೂರನ್ನು ಉಳಿಸಿಕೊಳ್ಳಲು ತಾವು ಯಶಸ್ವಿಯಾದರೆ ತುಮಕೂರು ಅಥವಾ ಚಿಕ್ಕಬಳ್ಳಾಪುರವನ್ನು ಬಿಟ್ಟುಕೊಡಲೇಬೇಕಾದ ಪ್ರಸಂಗ ಬರುತ್ತದೆ. ತುಮಕೂರು ಕ್ಷೇತ್ರ ನೀಡಲು ಹೈಕಮಾಂಡ್‌ ತೀರ್ಮಾನಿಸುವ ಸಾಧ್ಯತೆಯೇ ಹೆಚ್ಚು. ತುಮಕೂರಿನಲ್ಲಿ ಡಿಸಿಎಂ ಪರಮೇಶ್ವರ್‌ ಆಪ್ತ ಮುದ್ದಹನುಮೇಗೌಡ ಸಂಸದರಾಗಿದ್ದಾರೆ. ಜತೆಗೆ ತುಮಕೂರು ಜೆಡಿಎಸ್‌ಗೆ ಹೋದರೆ ಪರಮೇಶ್ವರ್‌ ತವರು ಜಿಲ್ಲೆಯ ಕ್ಷೇತ್ರವನ್ನೇ ಮಿತ್ರಪಕ್ಷಕ್ಕೆ ಬಿಟ್ಟಂತಾಗುತ್ತದೆ. ಇದರಿಂದ ಡಿಸಿಎಂ ವರ್ಚಸ್ಸಿಗೆ ಹಿನ್ನಡೆಯಾಗುತ್ತದೆ ಎನ್ನುವುದೂ ಸಿದ್ದು ಲೆಕ್ಕಾಚಾರವೆಂದು ಹೇಳಲಾಗುತ್ತಿದೆ. ವರಿಷ್ಠರ ಮಟ್ಟದಲ್ಲಿರುವ ತಮ್ಮ ಪ್ರಭಾವದಿಂದಾಗಿ ಮೊಯ್ಲಿ ಕ್ಷೇತ್ರ ಉಳಿಸಿಕೊಂಡರೆ ತುಮಕೂರು ಕಳೆದುಕೊಳ್ಳುವುದು ನಿಶ್ಚಿತ.

About the author

ಕನ್ನಡ ಟುಡೆ

Leave a Comment