ರಾಜಕೀಯ

ಮೈತ್ರಿ ಪರೀಕ್ಷೆಯಲ್ಲಿ ಗೆದ್ದ ದೋಸ್ತಿ; ಮತಗಳಿಕೆಯಲ್ಲಿ ಬಿಜೆಪಿಗೂ ಮುನ್ನಡೆ

ಬೆಂಗಳೂರು: ಮುಂದಿನ ಲೋಕಸಭೆಗೆ ದಿಕ್ಸೂಚಿ ಎಂದೇ ಹೇಳಲಾಗಿದ್ದ, ದೋಸ್ತಿ ಸರ್ಕಾರಕ್ಕೆ ಅಗ್ನಿ ಪರೀಕ್ಷೆ ಎಂದೇ ಬಿಂಬಿಸಲ್ಪಟ್ಟಿದ್ದ ಐದು ಕ್ಷೇತ್ರಗಳ ಉಪ ಸಮರದಲ್ಲಿ ಮೈತ್ರಿಕೂಟಕ್ಕೆ ಭರ್ಜರಿ ಜಯ ಸಿಕ್ಕಿದೆ.

ಒಂದು ಕ್ಷೇತ್ರವನ್ನು ಬಿಜೆಪಿ ಗೆಲ್ಲುವ ಮೂಲಕ ಸಂಭಾವ್ಯ ಮುಖಭಂಗದಿಂದ ಪಾರಾಗಿದೆ. ಈ ಮೂಲಕ ರಾಜ್ಯದಲ್ಲಿ ಮುಂದಿನ ಲೋಕಸಭೆ ಚುನಾವಣೆಗೆ ಜೆಡಿಎಸ್​-ಕಾಂಗ್ರೆಸ್​ ನಡುವೆ ಆಗಬಹುದಾದ ಮೈತ್ರಿಗೆ ಬಲ ಬಂದಿದೆ. ಅಲ್ಲದೆ, ಮೈತ್ರಿ ಸರ್ಕಾರದ ನಾಯಕರೇ ಹೇಳಿದಂತೆ ಮಹಾಘಟಬಂಧನಕ್ಕೆ ಮುನ್ನುಡಿಯೂ ಆಗಿದೆ.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿದ್ದ ರಾಮನಗರ ವಿಧಾನಸಭೆ ಕ್ಷೇತ್ರ, ಮಾಜಿ ಶಾಸಕ ಸಿದ್ದು ನ್ಯಾಮಗೌಡ ಅವರ ನಿಧನದಿಂದ ತೆರವಾಗಿದ್ದ ಜಮಖಂಡಿ ವಿಧಾನಸಭೆ ಕ್ಷೇತ್ರ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ, ಶಾಸಕ ಶ್ರೀರಾಮುಲು ಹಾಗೂ ಸಚಿವ ಸಿ.ಎಸ್. ಪುಟ್ಟರಾಜು ಅವರ ರಾಜೀನಾಮೆಯಿಂದ ತೆರವಾಗಿದ್ದ ಶಿವಮೊಗ್ಗ, ಬಳ್ಳಾರಿ, ಮಂಡ್ಯದ ಲೋಕಸಭೆ ಸ್ಥಾನಗಳಿಗೆ ನ. 3ರಂದು ಮತದಾನ ನಡೆದಿತ್ತು. ಮಂಗಳವಾರ (ನ.6) ಪ್ರಕಟವಾದ ಫಲಿತಾಂಶದಲ್ಲಿ ಜೆಡಿಎಸ್​ ಮತ್ತು ಕಾಂಗ್ರೆಸ್​ನ ಮೈತ್ರಿಕೂಟ 4 ಮತ್ತು ಬಿಜೆಪಿ ಕೇವಲ ಒಂದು ಕ್ಷೇತ್ರವನ್ನು ಗೆದ್ದಿದೆ. ಮೈತ್ರಿಕೂಟ ಸಿಂಹಪಾಲನ್ನು ತನ್ನದಾಗಿಸಿಕೊಂಡಿದೆ.

ಗೆಲುವಿನಲ್ಲಿ ದಾಖಲೆಯ ಅಂತರ: ನಾಲ್ಕು ಕ್ಷೇತ್ರಗಳಲ್ಲಿ ಮೈತ್ರಿಕೂಟದ ಅಭ್ಯರ್ಥಿಗಳು ಭಾರಿ ದೊಡ್ಡ ಗೆಲುವನ್ನೇ ದಾಖಲಿಸಿರುವುದು ಗಮನಾರ್ಹ ಸಂಗತಿ. ರಾಮನಗರದಲ್ಲಿ ಅನಿತಾ ಕುಮಾರಸ್ವಾಮಿ ಅವರು 1 ಲಕ್ಷ ಮತಗಳ ಅಂತರದ ದಾಖಲೆಯ ವಿಜಯ ಸಾಧಿಸಿದ್ದರೆ, ಮಂಡ್ಯದಲ್ಲಿ ಜೆಡಿಎಸ್​ ಅಭ್ಯರ್ಥಿ ಶಿವರಾಮೇಗೌಡ ಅವರು ಬರೋಬ್ಬರಿ 2.40 ಲಕ್ಷ ಮತಗಳ ಅಂತರದ ವಿಜಯ ಸಾಧಿಸಿದ್ದಾರೆ. ಕಾಂಗ್ರೆಸ್​ಗೆ ಗೆಲುವು ಕಷ್ಟ ಎಂದೇ ಬಿಂಬಿಸಲಾಗಿದ್ದ ಬಳ್ಳಾರಿಯಲ್ಲಿ ವಿ.ಎಸ್​ ಉಗ್ರಪ್ಪ ಅವರು 2.28 ಲಕ್ಷದಷ್ಟು ದೊಡ್ಡ ಅಂತರದ ಮತಗಳ ಗೆಲುವು ಸಾಧಿಸಿದ್ದಾರೆ. ಇನ್ನು ಜಮಖಂಡಿಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಎರಡೂವರೆ ಸಾವಿರಗಳ ಮತಗಳ ಅಂತರದಲ್ಲಷ್ಟೇ. ಆದರೆ, ಈ ಬಾರಿ 39 ಸಾವಿರ ಮತಗಳ ದೊಡ್ಡ ಗೆಲುವು ಸಿಕ್ಕಿದೆ.

ಬಿಜೆಪಿ ಕೋಟೆಗೆ ಲಗ್ಗೆ: ಈ ಉಪಚುನಾವಣೆಗಳ ಪೈಕಿ ದೊಡ್ಡ ಕುತೂಹಲ ಉಳಿಸಿಕೊಂಡಿದ್ದ ಕ್ಷೇತ್ರ ಶಿವಮೊಗ್ಗ. ಬಿಜೆಪಿಯ ಭದ್ರ ಕೋಟೆ ಎನಿಸಿಕೊಂಡಿದ್ದ ಶಿವಮೊಗ್ಗದಲ್ಲಿ ಒಂದು ಹಂತಕ್ಕೆ ಜೆಡಿಎಸ್​-ಕಾಂಗ್ರೆಸ್​ಗೆ ಮೈತ್ರಿ ಗಿಟ್ಟಿದೆ. ಕಳೆದ ಬಾರಿ ಯಡಿಯೂರಪ್ಪ ಅವರು 3 ಲಕ್ಷದಷ್ಟು ಬೃಹತ್​ ವಿಜಯ ಸಾಧಿಸಿದ್ದರು. ಆದರೆ, ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದ ಬಿ.ವೈ.ರಾಘವೇಂದ್ರ ಆರಂಭಿಕ ಹಿನ್ನಡೆಯೊಂದಿಗೆ, ಜೆಡಿಎಸ್​ನಿಂದ ಸ್ಪರ್ಧಿಸಿದ್ದ ಮಧು ಬಂಗಾರಪ್ಪ ಅವರ ವಿರುದ್ಧ ಕೇವಲ 52 ಸಾವಿರ ಮತಗಳ ಅಂತರದಲ್ಲಿ ಗೆದ್ದಿದ್ದಾರೆ. ಬಿಜೆಪಿಯ ಕೇಂದ್ರ ಬಿಂದುವಿನಂತೆ ಕಾಣುವ ಶಿವಮೊಗ್ಗಕ್ಕೆ ಮೈತ್ರಿ ಲಗ್ಗೆ ಇಟ್ಟಿರುವುದು ಈ ಫಲಿತಾಂಶ ಸಾಬೀತು ಮಾಡುತ್ತಿದೆ. ಅದರಂತೇ, ಈ ಫಲಿತಾಂಶ ಬಿಜೆಪಿ ಮಟ್ಟಿಗೆ ಎಚ್ಚರಿಕೆಯ ಗಂಟೆಯಾಗಿರಲಿಕ್ಕೂ ಸಾಕು.

ಸರ್ಕಾರದ ಅಸ್ತಿತ್ವಕ್ಕೆ ಧಕ್ಕೆ ಇಲ್ಲ: ಫಲಿತಾಂಶ ಕಾಂಗ್ರೆಸ್​-ಜೆಡಿಎಸ್​ಗೆ ಬಲ ತುಂಬಿರುವ ಹೊತ್ತಿನಲ್ಲೇ, ರಾಜ್ಯದಲ್ಲಿ ಮೈತ್ರಿ ಸರ್ಕಾರವನ್ನು ಉರುಳಿಸಿ ತನ್ನದೇ ಸರ್ಕಾರ ರಚಿಸುವ ಬಿಜೆಪಿಯ ಉಮೇದಿಗೆ ಪೆಟ್ಟನ್ನೂ ನೀಡಿದೆ. ಉಪಚುನಾವಣೆಯ ಫಲಿತಾಂಶದ ನಂತರ ರಾಜ್ಯದ ಜೆಡಿಎಸ್​-ಕಾಂಗ್ರೆಸ್​ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿಯ ಮುಖಂಡರ ಮಾತಿಗೆ ಮತದಾರರಿಂದ ಸ್ಪಂದನೆ ದೊರೆತಂತೆ ಕಾಣುತ್ತಿಲ್ಲ. ಮತ್ತು ಈ ಚುನಾವಣೆಯಿಂದ ಬಿಜೆಪಿಗೆ ಅಂಥ ಶಕ್ತಿ ಸಿಗುವ ಸಾಧ್ಯತೆಗಳೂ ಇಲ್ಲ. ಹೀಗಾಗಿ ಸರ್ಕಾರ ಪತನವಾಗುವ ತಲೆಬಿಸಿಗೆ ಸಿಲುಕಿದ್ದ ದೋಸ್ತಿ ಅಷ್ಟರ ಮಟ್ಟಿಗಂತೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ.

ಮೈತ್ರಿ ಸೂತ್ರ ಯಶಸ್ವಿ, ಬಿಜೆಪಿಗೂ ಗಳಿಕೆ: ಇನ್ನೊಂದೆಡೆ, ಸರ್ಕಾರದ ಮಟ್ಟದಲ್ಲಿ ಆಗಿದ್ದ ಮೈತ್ರಿ ಚುನಾವಣೆ ಕಣದಲ್ಲಿ ಯಶಸ್ವಿಯಾಗಬಹುದೇ ಎಂಬುದು ಕಾಂಗ್ರೆಸ್​ ಜೆಡಿಎಸ್​ಗೆ ಇದ್ದ ಬಹುದೊಡ್ಡ ಚಿಂತೆಯಾಗಿತ್ತು. ಆದರೆ, ಆ ತಲೆಬೇನೆಯನ್ನು ಈ ಉಪಸಮರದ ಫಲಿತಾಂಶ ನಿವಾರಣೆ ಮಾಡಿದೆ. ಕಾಂಗ್ರೆಸ್​ ಅನುಪಸ್ಥಿತಿಯಲ್ಲಿ ಉಂಟಾಗುವ ನಿರ್ವಾತವನ್ನು ಬಿಜೆಪಿ ಆಕ್ರಮಿಸಿಕೊಳ್ಳುವ ಆತಂಕ ಬಿಟ್ಟರೆ, ಚುನಾವಣಾ ಕಣದ ಮೈತ್ರಿ ಯಶಸ್ವಿಯಾಗಲಿದೆ ಎಂಬುದು ಈಗ ಸಾಬೀತಾಗಿದೆ. ಕಾಂಗ್ರೆಸ್​ ನಿರ್ವಾತವನ್ನು ಬಿಜೆಪಿ ಆಕ್ರಮಿಸಬಹುದಾದ ಸಾಧ್ಯತೆಗಳ ಬಗ್ಗೆ ಮಾತನಾಡಲೂ ಕಾರಣವಿದೆ. ರಾಮನಗರದಲ್ಲಿ ಬಿಜೆಪಿ ಎಂದೂ ಐದು ಸಾವಿರ ಮತಗಳನ್ನು ಪಡೆದ ಉದಾಹರಣೆಗಳಿರಲಿಲ್ಲ. ಆದರೆ, ಈ ಬಾರಿ ಅಭ್ಯರ್ಥಿ ಇರದ ಹೊರತಾಗಿಯೂ 15 ಸಾವಿರಕ್ಕೂ ಹೆಚ್ಚು ಮತ ಪಡೆದಿದೆ. ಹಾಗೆಯೇ ಮಂಡ್ಯದ ಇತಿಹಾಸದಲ್ಲಿ ಎರಡು ಲಕ್ಷ ಮತಗಳ ಮುಖವನ್ನು ಈ ವರೆಗೆ ನೋಡಿರದ ಬಿಜೆಪಿ ಈ ಚುನಾವಣೆಯಲ್ಲಿ ಹತ್ತಿರಹತ್ತಿರ ಎರಡೂವರೆ ಲಕ್ಷದಷ್ಟು ಮತಗಳಿಸಿ ಗಮನ ಸೆಳೆದಿದೆ.

ಡಿ.ಕೆ.ಶಿವಕುಮಾರ್ ನಡೆ, ಗೆಲುವಿನ ನಗೆ: ಗಮನಿಸಬೇಕಾದ ಮುಖ್ಯ ಸಂಗತಿ ಎಂದರೆ ಬಳ್ಳಾರಿ ಫಲಿತಾಂಶ. ಡಿ.ಕೆ.ಶಿವಕುಮಾರ್​ ಅವರು ಲಿಂಗಾಯಿತರ ಕ್ಷಮೆ ಕೇಳಿದ್ದು ಮತ್ತು ರಾಮುಲು ಅವರು ಪ್ರಯೋಗಿಸಿದ ವಾಲ್ಮೀಕ ಜನಾಂಗದ ಸ್ವಾಭೀಮಾನದ ದಾಳದ ಕಾರಣಕ್ಕೆ ಬಳ್ಳಾರಿ ಕ್ಷೇತ್ರ ಆರಂಭದಲ್ಲಿ ಜಾತಿ ಧ್ರುವೀಕರಣದತ್ತ ಹೊರಳಿತ್ತು. ನಂತರದಲ್ಲಿ ಜನಾರ್ದನ ರೆಡ್ಡಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಸಾವಿನ ವಿಚಾರದಲ್ಲಿ ನೀಡಿದ ಹೇಳಿಕೆ ಚುನಾವಣೆ ಕಣದಲ್ಲಿ ಸಂಸ್ಕಾರ, ಸಂಸ್ಕೃತಿಯ ಪ್ರಶ್ನೆಗಳೇಳುವಂತೆ ಮಾಡಿತ್ತು. ಇದು ಬಿಜೆಪಿಗೆ ದೊಡ್ಡ ಮಟ್ಟದ ಹೊಡೆತ ನೀಡಿರುವ ಸಾಧ್ಯತೆಗಳೂ ಇವೆ. ಇದರ ಜತೆಗೆ, ಗ್ರೌಂಡ್​ ರಿಯಾಲಿಟಿ (ಚುನಾವಣೆ ಕಣ)ಯ ಸೂಕ್ಷ್ಮಗಳನ್ನು ಬಹುಬೇಗ ಅರ್ಥ ಮಾಡಿಕೊಳ್ಳುವ ಡಿ.ಕೆ. ಶಿವಕುಮಾರ್​ ಅವರು ಬಳ್ಳಾರಿಯಲ್ಲಿ ಬೀಡು ಬಿಟ್ಟಿದ್ದು ಕಾಂಗ್ರೆಸ್​ಗೆ ದೊಡ್ಡ ಲಾಭವನ್ನೇ ತಂದುಕೊಟ್ಟಿದೆ.

ಒಳ ಏಟು, ನೋಟಾದ ಆಟ…

ಇನ್ನು ಮೈತ್ರಿ ಬಗ್ಗೆ ಸಹಮತ ಹೊಂದಿರದ ಮಂಡ್ಯ, ರಾಮನಗರದಲ್ಲಿ ಕಾಂಗ್ರೆಸ್​ನ ಕೆಲ ಮುಖಂಡರು ಬಿಜೆಪಿಗೆ ಕೆಲಸ ಮಾಡಿರುವುದು, ಮಾಜಿ ಮುಖ್ಯಮಂತ್ರಿ ಜೆ.ಎಚ್​. ಪಟೇಲರ ಪುತ್ರ ಮಹಿಮಾ ಪಟೇಲ್​ ಶಿವಮೊಗ್ಗದಲ್ಲಿ ನೋಟಗಿಂತಲೂ ಕಡಿಮೆ ಮತ ಪಡೆದಿದ್ದು, 22 ವರ್ಷಗಳ ನಂತರ ಎಲ್​.ಆರ್​ ಶಿವರಾಮೇಗೌಡ ಅವರಿಗೆ ಅಧಿಕಾರ ಸಿಕ್ಕಿದ್ದು, ಅನಿತಾ ಕುಮಾರಸ್ವಾಮಿ ಅವರು 2018ರ ವಿಧಾನಸಭೆಗೆ ಅತ್ಯಂತ ದೊಡ್ಡ ಅಂತರ ಗೆಲುವು ಸಾಧಿಸಿದ ಅಭ್ಯರ್ಥಿಯಾಗಿ ವಿಧಾನಸೌಧ ಪ್ರವೇಶಿಸುತ್ತಿರುವುದು ಮತ್ತು ರಾಮನಗರಕ್ಕೆ ಮೊದಲ ಮಹಿಳಾ ಶಾಸಕಿಯಾಗಿ ಆಯ್ಕೆಯಾಗಿದ್ದು ಈ ಚುನಾವಣೆಯ ವಿಶೇಷತೆಗಳು.

ರಾಮನಗರ (ವಿಧಾನಸಭೆ)
ಅನಿತಾ ಕುಮಾರಸ್ವಾಮಿ (ಜೆಡಿಎಸ್​) – 1,25,043
ಬಿಜೆಪಿ – 15,906
ಅಂತರ – 10,9137

ಜಮಖಂಡಿ (ವಿಧಾನಸಭೆ)
ಆನಂದ್​ ನ್ಯಾಮಗೌಡ (ಕಾಂಗ್ರೆಸ್​) – 97,017
ಶ್ರೀಕಾಂತ ಕುಲಕರ್ಣಿ (ಬಿಜೆಪಿ) – 57,537
ಅಂತರ – 39,480

ಮಂಡ್ಯ (ಲೋಕಸಭೆ) 
ಶಿವರಾಮೇಗೌಡ (ಜೆಡಿಎಸ್)- 5,69,347
ಸಿದ್ದರಾಮಯ್ಯ (ಬಿಜೆಪಿ )- 2,44,404
ನೋಟಾ-15,478
ಅಂತರ – 324943

ಶಿವಮೊಗ್ಗ (ಲೋಕಸಭೆ)
ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ವಿರುದ್ಧ 52,148 ಮತಗಳಿಂದ ಗೆಲುವು ಸಾಧಿಸಿದ ಬಿ.ವೈ.ರಾಘವೇಂದ್ರ.
ರಾಘವೇಂದ್ರ (ಬಿಜೆಪಿ) – 5,43,306
ಮಧು ಬಂಗಾರಪ್ಪ (ಜೆಡಿಎಸ್) 4,91,158
ಮಹಿಮಾಪಟೇಲ್ (ಜೆಡಿಯು) 8,713
ನೋಟಾ – 10,687
ಅಂತರ- 52,148

ಬಳ್ಳಾರಿ (ಲೋಕಸಭೆ)

ವಿ.ಎಸ್​ ಉಗ್ರಪ್ಪ (ಕಾಂಗ್ರೆಸ್​) – 6,28,365
ಜೆ. ಶಾಂತಾ (ಬಿಜೆಪಿ) – 3,85,204
ಅಂತರ- 2,43,161

 

 

About the author

ಕನ್ನಡ ಟುಡೆ

Leave a Comment