ರಾಜಕೀಯ

ಮೈತ್ರಿ ಸರ್ಕಾರಕ್ಕೆ ಬಜೆಟ್ ಸವಾಲು, ಕಾಂಗ್ರೆಸ್ ಗೆ ನಾಲ್ವರು ಬಂಡಾಯ ಶಾಸಕರದ್ದೇ ಚಿಂತೆ

ಬೆಂಗಳೂರು: ರಾಜ್ಯ ಸರ್ಕಾರದ ಬಜೆಟ್ ಅಧಿವೇಶನ ಆರಂಭವಾಗಲು ಇನ್ನು ಕೇವಲ ಒಂದು ದಿನ ಬಾಕಿ. ಇಂತಹ ಸಂದರ್ಭದಲ್ಲಿ ಕಳೆದ ಹಲವು ದಿನಗಳಿಂದ ನಾಪತ್ತೆಯಾಗಿರುವ ಕಾಂಗ್ರೆಸ್ ನ ನಾಲ್ವರು ಶಾಸಕರು ಇನ್ನೂ ಸಿಕ್ಕಿಲ್ಲ.

ಗೋಕಾಕ ಕ್ಷೇತ್ರದ ರಮೇಶ್ ಜಾರಕಿಹೊಳಿ, ಅಥಣಿಯ ಮಹೇಶ್ ಕುಮತಳ್ಳಿ, ಬಳ್ಳಾರಿ ಗ್ರಾಮಾಂತರ ಕ್ಷೇತ್ರದ ಬಿ ನಾಗೇಂದ್ರ ಮತ್ತು ಚಿಂಚೋಳಿ ಕ್ಷೇತ್ರದ ಶಾಸಕ ಉಮೇಶ್ ಜಾಧವ್ ಇನ್ನೂ ಪಕ್ಷದ ನಾಯಕರ ಕೈಗೆ ಸಿಗದೆ ಓಡಾಡುತ್ತಿದ್ದಾರೆ. ಅಲ್ಲದೆ ಮೈತ್ರಿ ಸರ್ಕಾರ ಸ್ಪಷ್ಟವಾಗಿ ವಿಶ್ವಾಸಮತ ನೀಡುವ ನಿರ್ಣಯವನ್ನು ಕೂಡ ತಿಳಿಸಿಲ್ಲ. ಈ ಶಾಸಕರು ಬಜೆಟ್ ಅಧಿವೇಶನದಲ್ಲಿ ಪಾಲ್ಗೊಳ್ಳುವುದು ಅನುಮಾನ ಎಂದೇ ಹೇಳಲಾಗುತ್ತಿದೆ.

ಬಜೆಟ್ ನ ಜಂಟಿ ಅಧಿವೇಶನದಲ್ಲಿ ಎಲ್ಲಾ ಶಾಸಕರು ಭಾಗವಹಿಸಬೇಕೆಂದು ಇಂದು ಕಾಂಗ್ರೆಸ್ ಪಕ್ಷ ವಿಪ್ ಹೊರಡಿಸಲಿದೆ. ವಿಪ್ ಉಲ್ಲಂಘಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.ನಾಲ್ಕು ಶಾಸಕರು ಯಾವ ನಾಯಕರ ಕೈಗೆ ಸಿಗುತ್ತಿಲ್ಲ, ಸಂಪರ್ಕಕ್ಕೂ ಬರುತ್ತಿಲ್ಲ ಎಂಬ ಪರಿಸ್ಥಿತಿ ನಡುವೆ ಕಾಂಗ್ರೆಸ್ ನ ಮತ್ತೊಬ್ಬ ಶಾಸಕ ಪ್ರತಾಪ್ ಗೌಡ ಪಾಟೀಲ್ ಬಂಡಾಯ ಶಾಸಕ ಬಿ ನಾಗೇಂದ್ರ ಅವರ ಜೊತೆ ಕುಳಿತು ಮಾತನಾಡುವ ಫೋಟೋ ನಿನ್ನೆ ಬಹಿರಂಗವಾಗಿದ್ದು ಹಲವು ಊಹಾಪೋಹಗಳಿಗೆ ಎಡೆ ಮಾಡಿಕೊಟ್ಟಿದೆ. ನಾಲ್ವರು ಶಾಸಕರ ಗೈರಿನಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಗಳ ಶಾಸಕರ ಸಂಖ್ಯೆ 114ಕ್ಕೆ ಇಳಿದಿದೆ.

ವಿಪ್ ಉಲ್ಲಂಘಿಸಿದರೆ ನಾಲ್ವರು ಶಾಸಕರು ಅನರ್ಹತೆಗೊಳ್ಳುವ ಸಾಧ್ಯತೆಯಿದೆ. ಕಾಂಗ್ರೆಸ್ ನಾಯಕರ ಒಂದು ಗುಂಪು ಈ ಶಾಸಕರನ್ನು ಅನರ್ಹಗೊಳಿಸಲು ಉತ್ಸುಕವಾಗಿದ್ದರೆ ಮತ್ತೊಂದು ಬಣ ಅವರನ್ನು ತಮ್ಮ ಬಳಿ ಸೆಳೆದುಕೊಳ್ಳಲು ಯೋಚಿಸುತ್ತಿದೆ.ಇವೆಲ್ಲದರ ಮಧ್ಯೆ ಇಂದು ರಾತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ನಾಳೆ ಉಪ ಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರಿಗೆ ಔತಣಕೂಟ ನೀಡಲಿದ್ದಾರೆ. ಬಿಜೆಪಿಯಲ್ಲಿ ಇದೀಗ 104 ಶಾಸಕರಿದ್ದು ಮತ್ತಿಬ್ಬರು ಸ್ವತಂತ್ರ ಶಾಸಕರ ಬೆಂಬಲದಿಂದ 106 ಶಾಸಕರಾಗುತ್ತಾರೆ. ಮೈತ್ರಿಕೂಟ ಸರ್ಕಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಫೆಬ್ರವರಿ 8ರಂದು ಬಜೆಟ್ ಮಂಡಿಸಬೇಕಾದರೆ 107 ಶಾಸಕರ ಬೆಂಬಲ ಅಗತ್ಯವಿದೆ.

About the author

ಕನ್ನಡ ಟುಡೆ

Leave a Comment