ರಾಜಕೀಯ

ಮೈತ್ರಿ ಸರ್ಕಾರದಿಂದ ಕೇಂದ್ರ ಸರ್ಕಾರದ ಅನುದಾನ ದುರುಪಯೋಗ: ಸಂಸದೆ ಶೋಭಾ

ಬೆಂಗಳೂರು: ಕೇಂದ್ರ ಸರ್ಕಾರ ನೀಡಿದ ಅಮೃತ ಯೋಜನೆ, ಸ್ಮಾರ್ಟ್  ಸಿಟಿ ಯೋಜನೆ ಹಣವನ್ನು ರಾಜ್ಯ ಸರ್ಕಾರ ದುರುಪಯೋಗ ಮಾಡಿಕೊಂಡಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ಸ್ಮಾರ್ಟ್  ಸಿಟಿ ಅನುದಾನ ವನ್ನು ಬೇರೆ ಇಲಾಖೆಗೆ ವರ್ಗಾವಣೆ ಮಾಡಲಾಗಿದೆ. ಬಿಬಿಎಂಪಿಗೆ ನೀಡಿದ ಕಸದ ಹಣವನ್ನು ರಸ್ತೆ ಅಭಿವೃದ್ದಿಗೆ ಬಳಸಿಕೊಳ್ಳುವ ಮೂಲಕ ರಾಜ್ಯ ಸರ್ಕಾರ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದು ಅವರು ದೂರಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರಕ್ಕೆ ರಾಜ್ಯದ ಮೈತ್ರಿ ಸರ್ಕಾರ ಸಹಕಾರ ನೀಡುತ್ತಿಲ್ಲ. ಕೇಂದ್ರದ ವಿವಿಧ ಯೋಜನೆಗಳ ಅಡಿಯಲ್ಲಿ ಬಿಡುಗಡೆ ಮಾಡಿದ ಅನುದಾನವನ್ನು ಸಮರ್ಪಕ ಬಳಸಿಕೊಂಡಿಲ್ಲ. ಬದಲಾಗಿ ಬೇರೆ ಬೇರೆ ಯೋಜನೆಗಳಿಗೆ ಅನುದಾನವನ್ನು ವರ್ಗಾವಣೆ ಮಾಡಿದ್ದಾರೆ ಹೀಗಾಗಿ ಕೇಂದ್ರ ಪುರಸ್ಕೃತ ಯೋಜನೆಗಳು ನೆನೆಗುದಿಗೆ ಬಿದ್ದಿವೆ ಎಂದು ರಾಜ್ಯ ಸರ್ಕಾರದ ವಿರುದ್ದ ಟೀಕಾ ಪ್ರಕಾರ ನಡೆಸಿದರು.ಪ್ರಧಾನ ಮಂತ್ರಿ ಕೃಷಿಕ್ ಸಮ್ಮಾನ್ ಯೋಜನೆ ಅಡಿ ರೈತರಿಗೆ 2000ರೂ ಹಣ ನೇರ ನಗದು ವರ್ಗಾವಣೆ ಮಾಡಲು ರಾಜ್ಯ ಸರ್ಕಾರ ಅಡ್ಡಿಯಾಗಿದೆ. ಕೇಂದ್ರದ ಜೊತೆ ರೈತರ ಬ್ಯಾಂಕ್ ಖಾತೆಗಳ ಮಾಹಿತಿ ಹಂಚಿಕೆ ಮಾಡದೆ ರೈತ ವಿರೋಧಿ ಧೋರಣೆ ಅನುಸರಿಸಿದೆ. ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಹಲವಾರು ಸಮಾರಂಭಗಳಲ್ಲಿ ಬಹಿರಂಗವಾಗಿಯೇ ಸರ್ಕಾರದ ವಿರುದ್ದ ಆರೋಪಿಸಿದ್ದಾರೆ. ಇಷ್ಟಾದರೂ  ರೈತರ ಬ್ಯಾಂಕ್ ಖಾತೆಗಳ ಮಾಹಿತಿ ನೀಡಲು ಹಿಂದೇಟು ಹಾಕಿದೆ ಎಂದರು.ಉದ್ಯೋಗ ಖಾತರಿ ಯೋಜನೆ ಹಣವನ್ನು ಕೇಂದ್ರ ಸರ್ಕಾರ ತಡೆ ಹಿಡಿದಿಲ್ಲ. ಸೂಕ್ತ ದಾಖಲೆಗಳನ್ನು ಸಲ್ಲಿಕೆ ಮಾಡಿರಲಿಲ್ಲ. ಸಾಕಷ್ಟು ನಕಲಿ ಉದ್ಯೋಗಿಗಳ ನೋಂದಣಿ  ಮಾಡಲಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಸ್ಪಷ್ಟೀಕರಣ ನೀಡಿಲ್ಲ. ಸೂಕ್ತ ದಾಖಲೆಗಳನ್ನು ನೀಡಿದ ಬಳಿಕ ಹಣ ಬಿಡುಗಡೆ ಆಗಲಿದೆ ಎಂದರು.ಅತಿವೃಷ್ಟಿ ಮತ್ತು ಬರ ಪೀಡಿತ ಜಿಲ್ಲೆ ಹಾಗೂ ತಾಲೂಕುಗಳಲ್ಲಿ ಪರಿಹಾರ ಕಾರ್ಯಕ್ಕೆ ರಾಜ್ಯ ಸರ್ಕಾರ ಎಷ್ಟು ಹಣ ಖರ್ಚು ಮಾಡಿದೆ. ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾದ ಪ್ರದೇಶದಲ್ಲಿ ಎಷ್ಟು ಕಾಮಗಾರಿ ಕೈಗೆತ್ತಿ ಕೊಳ್ಳಲಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ ಹಣವನ್ನು ಕೊಡಗು ನೆರೆ ಪೀಡಿತರ ಪುನರ್ವಸತಿಗೆ ಬಳಸಿಕೊಳ್ಳದೆ ಬೇರೆ ಉದ್ದೇಶಕ್ಕೆ  ಬಳಸಿಕೊಳ್ಳಲಾಗಿದೆ ಎಂದು ಶೋಭಾ ಕರಂದ್ಲಾಜೆ ಮುಖ್ಯಮಂತ್ರಿ ವಿರುದ್ದ ಆರೋಪಿಸಿದರು.

About the author

ಕನ್ನಡ ಟುಡೆ

Leave a Comment