ರಾಜಕೀಯ

ಮೈತ್ರಿ ಸರ್ಕಾರ ಅಸ್ಥಿರಗೊಳಿಸುವಲ್ಲಿ ಮೋದಿ ಪಾತ್ರವಿಲ್ಲ: ದೇವೇಗೌಡ

ಬೆಂಗಳೂರು: ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಪಾತ್ರವಿಲ್ಲ. ಸರ್ಕಾರವನ್ನು ಬೀಳಿಸುವುದಕ್ಕೆ ರಾಜ್ಯ ಬಿಜೆಪಿ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ ಎಂದು  ದೇವೇಗೌಡ ಅವರು ಹೇಳುವ ಮೂಲಕ ಪ್ರಧಾನ ಮೋದಿ ಬಗ್ಗೆ ಮೃದು ಧೋರಣೆ ತೋರಿದ್ದಾರೆ.
ಫೆ.8 ರಂದು ಮುಖ್ಯಮಂತ್ರಿ ಕುಮಾರಸ್ವಾಮಿ ಆಯವ್ಯಯ ಮಂಡನೆ ಮಾಡುತ್ತಿದ್ದು, ಕುಮಾರಸ್ವಾಮಿ ಮುಂಗಡಪತ್ರ ಮಂಡಿಸದಂತೆ ಮಾಡಲು ಒಂದೆಡೆ ಬಿಜೆಪಿ ತಂತ್ರ ರೂಪಿಸುತ್ತಿದ್ದು, ಮತ್ತೊಂದೆಡೆ ಅಧಿವೇಶನ ಸಂದರ್ಭದಲ್ಲಿ ಅತೃಪ್ತ ಶಾಸಕರು ಸದನಕ್ಕೆ ಗೈರಾಗುವ ಸಾಧ್ಯತೆಯಿದೆ. ಈ ಬಗ್ಗೆ ಏನು ಕ್ರಮಕೈಗೊಳ್ಳಬಹುದು, ಪ್ರತಿತಂತ್ರ ರೂಪಿಸುವ ಕುರಿತು ಕುಮಾರಸ್ವಾಮಿ ದೇವೇಗೌಡರೊಂದಿಗೆ ಚರ್ಚೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ದೇವೇಗೌಡ ಅವರು, ಕೇವಲ 3 ದಿನ ಮಾತ್ರ ಮುಖ್ಯಮಂತ್ರಿಯಾಗಿದ್ದಕ್ಕೆ ಯಡಿಯೂರಪ್ಪ ಅವರ ಮನಸಿಗೆ ನೋವಾಗಿದೆ. ಹಾಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಅಲುಗಾಡಿಸಲು ಅವರು ಸ್ವಲ್ಪ ಪ್ರಯತ್ನ ನಡೆಸಿದ್ದಾರಷ್ಟೆ. ಇದರಲ್ಲಿ ಪ್ರಧಾನಿ ಮೋದಿ ಅವರ ಪಾತ್ರವಿದೆ ಎಂಬ ಬಗ್ಗೆ ತಮಗೆ ನಂಬಿಕೆಯಿಲ್ಲ ಎಂದರು. ಲೋಕಸಭೆಗೆ ಪಕ್ಷ ಸಂಘಟನೆ ಮಾಡಲಾಗುತ್ತಿದ್ದು, ವಿಜಯಪುರದಲ್ಲಿ ಫೆ.10 ರಂದು ಪರಿಶಿಷ್ಟ ಜಾತಿ/ವರ್ಗ ಸಮಾವೇಶ, ಹುಬ್ಬಳ್ಳಿಯಲ್ಲಿ 12 ರಂದು ರೈತ ಸಮಾವೇಶ ನಡೆಸಲಾಗುವುದು ಎಂದು ದೇವೇಗೌಡ ಅವರು ತಿಳಿಸಿದರು.

About the author

ಕನ್ನಡ ಟುಡೆ

Leave a Comment