ರಾಜಕೀಯ

ಮೈಸೂರಲ್ಲಿ ಹೊಟೇಲ್ ನಿಂದ ಹಣ ಹಂಚುತ್ತಿದ್ದಾರೆ, ಸಚಿವ ಪುಟ್ಟರಾಜು ಆರೋಪಕ್ಕೆ ಸುಮಲತಾ ಹೇಳಿದ್ದೇನು

ಮಂಡ್ಯ: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿಗೆ ಎದುರಾಳಿಯಾಗಿ ನಿಂತಿರುವ ಪಕ್ಷೇತರ ಅಭ್ಯರ್ಥಿ ಸುಮಲತಾ ಮೈಸೂರಿನಲ್ಲಿ ಹೊಟೇಲ್ ನಲ್ಲಿ ಉಳಿದುಕೊಂಡು ಪ್ರಚಾರಕ್ಕೆ ಬರುವವರಿಗೆ ಮತ್ತು ಪ್ರಚಾರದ ವೇಳೆ ಜನರನ್ನು ಸೇರಿಸಲು ಹಣ ಹಂಚುತಿದ್ದಾರೆ ಎಂಬ ಸಚಿವ ಸಿ ಎಸ್ ಪುಟ್ಟರಾಜು ಹೇಳಿಕೆಗೆ ಸುಮಲತಾ ತಿರುಗೇಟು ನೀಡಿದ್ದಾರೆ. ನಿನ್ನೆ ಮಂಡ್ಯ ಜಿಲ್ಲೆಯ ದೊಡ್ಡರಸಿನಕೆರೆಯಲ್ಲಿ ಪ್ರಚಾರದ ವೇಳೆ ಪ್ರತಿಕ್ರಿಯಿಸಿದ ಸುಮಲತಾ, ಪುಟ್ಟರಾಜು ಅವರು ನಾನು ಹಣ ಹಂಚುತ್ತಿದ್ದೇನೆ ಎಂದು ಗೊತ್ತಿದ್ದರೆ ಕೇಸ್ ಹಾಕಬಹುದು. ಬೆಲೆ ಇರೋರ ಮಾತಿಗೆ ಮಾತ್ರ ನಾನು ಬೆಲೆ ಕೊಡೋದು. ಇಂಥವರ ಮಾತಿಗೆಲ್ಲ ನಾನು ತಲೆ ಕೆಡಿಸಿಕೊಳ್ಳಲ್ಲ ಎಂದು ಖಾರವಾಗಿ ಪ್ರತಿಕ್ರಿಯಿಸಿದರು. ಇದೇ ವೇಳೆ ಐಟಿ ಇಲಾಖೆ ಅಧಿಕಾರಿಗಳು ದೂರವಾಣಿ ಕದ್ದಾಲಿಸಿ ಸುಮಲತಾಗೆ ನೀಡಿದ್ದಾರೆ ಅನ್ನುವ ಸಚಿವ ಪುಟ್ಟರಾಜು ಹೇಳಿಕೆಗೆ ಸಹ ತಿರುಗೇಟು ಕೊಟ್ಟ ಸುಮಲತಾ, ಅವರಿಗೆ ತಾವು ತಪ್ಪು ಮಾಡುತ್ತಿದ್ದೇವೆ, ಸರಿದಾರಿಯಲ್ಲಿ ಹೋಗುತ್ತಿಲ್ಲ ಎನ್ನುವ ಅಪರಾಧ ಪ್ರಜ್ಞೆ ಕಾಡುತ್ತಿದೆ. ತಪ್ಪು ಮಾಡದವರು ಭಯಪಡುವುದಿಲ್ಲ. ಐಟಿಯವರಾದ್ರು ಮಾಡಿಕೊಳ್ಳಲಿ, ಸಿಬಿಐನವರಾದ್ರು ಯಾರು ಏನೇ ಮಾಡಿಕೊಳ್ಳಲಿ ಎಂಬ ಭಾವನೆ ತಪ್ಪು ಮಾಡಿಲ್ಲದಿದ್ದರೆ ಇರುತ್ತದೆ. ಇವರಲ್ಲಿ ಹುಳುಕು ಇಟ್ಟುಕೊಂಡು ಹೀಗೆಲ್ಲ ಮಾಡುತ್ತಿರುವುದು ಎಂದು ಆಪಾದಿಸಿದರು. ಇದಕ್ಕೂ ಮುನ್ನ ಸಚಿವ ಸಿ ಎಸ್ ಪುಟ್ಟರಾಜು, ಸುಮಲತಾ ಅವರು ರಾತ್ರಿ ಮೈಸೂರಿನಲ್ಲಿ ತಂಗಿದ ಬಳಿಕ ತಮ್ಮ ಬೆಂಬಲಿಗರಿಗೆ ಹಣ ಹಂಚಿಕೆ ಮಾಡುತ್ತಿದ್ದಾರೆ. ಅವರು ಏನೇನು ಮಾಡ್ತಿದ್ದಾರೆ ಎಂಬ ಮಾಹಿತಿ ನಮ್ಮ ಬಳಿ ಇದೆ. ಕೆಲವೇ ದಿನಗಳಲ್ಲಿ ಮಾಹಿತಿ ಕೊಡುತ್ತೇವೆ ಎಂದು ಹೇಳಿದ್ದರು.

About the author

ಕನ್ನಡ ಟುಡೆ

Leave a Comment