ಸಿನಿ ಸಮಾಚಾರ

ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್‌ ಸ್ಮಾರಕ: ಹೈಕೋರ್ಟ್‌ ಹಸಿರು ನಿಶಾನೆ

ಬೆಂಗಳೂರು: ಮೈಸೂರಿನಲ್ಲಿ ಡಾ.ವಿಷ್ಣುವರ್ಧನ್‌ ಸ್ಮಾರಕ ಭವನ ನಿರ್ಮಾಣಕ್ಕಿದ್ದ ಕಾನೂನಿನ ತೊಡಕು ನಿವಾರಣೆಯಾಗಿದ್ದು, ಹೈಕೋರ್ಟ್‌ ಸ್ಮಾರಕ ಭವನದ ಕಾಮಗಾರಿ ಮುಂದುವರಿಸಲು ಸರಕಾರಕ್ಕೆ ಹಸಿರು ನಿಶಾನೆ ತೋರಿದೆ. ಸ್ಮಾರಕ ನಿರ್ಮಾಣಕ್ಕೆ ಮೈಸೂರಿನ 2ನೇ ಹೆಚ್ಚುವರಿ ಸಿವಿಲ್‌ ನ್ಯಾಯಾಲಯ ನೀಡಿದ್ದ ತಡೆಯಾಜ್ಞೆ ಪ್ರಶ್ನಿಸಿ ರಾಜ್ಯ ಸರಕಾರ ಸಲ್ಲಿಸಿದ್ದ ಅರ್ಜಿಯನ್ನು ಈ ಹಿಂದೆ ವಿಚಾರಣೆ ನಡೆಸಿದ್ದ ಹೈಕೋರ್ಟ್‌, ಪ್ರಕರಣದ ಸಂಬಂಧ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತ್ತು.

ನ್ಯಾ. ಜಿ. ನರೇಂದರ್‌ ಅವರಿದ್ದ ಏಕಸದಸ್ಯಪೀಠ,”ಶುಕ್ರವಾರ ಅರ್ಜಿ ವಿಚಾರಣೆ ನಡೆಸಿ ಯಥಾಸ್ಥಿತಿ ಕಾಪಾಡುವಂತೆ ಈ ಹಿಂದೆ ನೀಡಿದ್ದ ಆದೇಶದ ಅವಧಿ ಮೀರಿರುವ ಕಾರಣ, ಸರಕಾರ ಸ್ಮಾರಕ ಭವನ ನಿರ್ಮಾಣ ಕಾಮಗಾರಿ ಮುಂದುವರಿಸಬಹುದು,”ಎಂದು ಆದೇಶಿಸಿದೆ. ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಮಹದೇವಮ್ಮ ಮತ್ತಿತರರ ಪರ ವಕೀಲರು ಸತತ ಮೂರು ಬಾರಿ ವಿಚಾರಣೆಗೆ ಗೈರು ಹಾಜರಾದ ಹಿನ್ನೆಲೆಯಲ್ಲಿ ನ್ಯಾಯಪೀಠ ಈ ಆದೇಶ ನೀಡಿದೆ. ಮೈಸೂರು ತಾಲೂಕಿನ ಹಾಲಾಳು ಗ್ರಾಮದಲ್ಲಿ ಸರ್ವೇ ನಂಬರ್‌ 8ರಲ್ಲಿನ 5 ಎಕರೆ ಜಮೀನನ್ನು ಸರಕಾರ ವಿಷ್ಣುವರ್ಧನ್‌ ಸ್ಮಾರಕ ನಿರ್ಮಾಣಕ್ಕಾಗಿ ಮೀಸಲಿರಿಸಿ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಗ್ರಾಮದ ಮಹದೇವಮ್ಮ ಸೇರಿ ರೈತರು ಅಧೀನ ನ್ಯಾಯಾಲಯದ ಮೊರೆ ಹೋಗಿದ್ದರು.

 

About the author

ಕನ್ನಡ ಟುಡೆ

Leave a Comment