ಅ೦ತರಾಷ್ಟ್ರೀಯ

ಮೊದಲ ಭಾರತ-ಸಿಂಗಾಪುರ್ ಹ್ಯಾಕಾಥನ್ ವಿಜೇತ ತಂಡಗಳನ್ನು ಸನ್ಮಾನಿಸಿದ ಪ್ರಧಾನಿ ಮೋದಿ

ಸಿಂಗಾಪುರ್: ಭಾರತ ಮತ್ತು ಸಿಂಗಾಪುರದ ಯುವಜನತೆಗೆ ತಮ್ಮ ಕ್ರಿಯಾಶೀಲ ತಂತ್ರಜ್ಞಾನ ಆವಿಷ್ಕಾರ ಮತ್ತು ಸಂಶೋಧನೆಗಳನ್ನು ಪ್ರದರ್ಶಿಸಲು ಅನುಕೂಲವಾಗುವ ವೇದಿಕೆ, ಭಾರತ-ಸಿಂಗಾಪುರ ಹ್ಯಾಕಾಥನ್ ನ ಮೂರು ಭಾರತೀಯ ತಂಡ ಸೇರಿದಂತೆ ಆರು ಜಯಶಾಲಿ ತಂಡಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸನ್ಮಾನಿಸಿದರು.ಆರು ತಂಡಗಳಲ್ಲಿ ತಲಾ ಮೂರು ಭಾರತೀಯ ಮತ್ತು ತಲಾ ಮೂರು ಸಿಂಗಾಪುರ ತಂಡವನ್ನು ಒಳಗೊಂಡಿದೆ. ಸಿಂಗಾಪುರದಲ್ಲಿ ನಡೆದ 36 ಗಂಟೆಗಳ ಸುದೀರ್ಘ ಹ್ಯಾಕಾಥನ್ ನ ಅಂತಿಮ ಪಂದ್ಯದಲ್ಲಿ ಭಾಗವಹಿಸಿದ್ದವು. ಇಂಡಿಯಾ-ಸಿಂಗಾಪುರ್ ಹ್ಯಾಕಥಾನ್ ನಲ್ಲಿ ಜಯಶಾಲಿ ತಂಡಗಳನ್ನು ಭೇಟಿ ಮಾಡಿದ ಪ್ರಧಾನಿ ಸನ್ಮಾನಿಸಿದರು ಎಂದು ವಿದೇಶಾಂಗ ಸಚಿವ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.

ಮೊದಲ ಭಾರತ-ಸಿಂಗಾಪುರ ಹ್ಯಾಕಥಾನ್ ನ ಪ್ರಶಸ್ತಿ ಗಳಿಸಿದ ಆವಿಷ್ಕಾರರು ಮತ್ತು ಸಂಶೋಧಕರನ್ನು ಭೇಟಿ ಮಾಡಿ ಸಂತೋಷವಾಯಿತು. ಅವರ ಕೆಲಸಗಳ ಬಗ್ಗೆ ಮಾತನಾಡಿದರು. ಇಂದು ವಿಶ್ವ ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಈ ಯುವಜನತೆಯಲ್ಲಿರುವ ಉದ್ವೇಗ ಮತ್ತು ಬದ್ಧತೆಯನ್ನು ಕಂಡು ಪ್ರಭಾವಿತನಾದೆ ಎಂದು ಪ್ರಧಾನಿ ಹೇಳಿದ್ದಾರೆ.ಸಿಂಗಾಪುರದ ಶಿಕ್ಷಣ ಸಚಿವ ಒಂಗ್ ಯೆ ಕುಂಗ್ ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಪ್ರಧಾನಿ ವಿಜೇತ ತಂಡಗಳಿಗೆ ಪ್ರಶಸ್ತಿ ನೀಡಿದರು. ಭಾರತದಿಂದ ಜಯಶಾಲಿಯಾದ ತಂಡಗಳಲ್ಲಿ ಐಐಟಿ ಖಾರಗ್ ಪುರ, ಎನ್ ಐಟಿ ತ್ರಿಚಿ ಮತ್ತು ಪುಣೆಯ ಎಂಐಟಿ ಎಂಜಿನಿಯರಿಂಗ್ ಕಾಲೇಜುಗಳನ್ನು ಒಳಗೊಂಡಿವೆ ಎಂದು ಸಿಂಗಾಪುರದಲ್ಲಿ ಭಾರತೀಯ ಹೈ ಕಮಿಷನರ್ ತಿಳಿಸಿದ್ದಾರೆ. ಕಳೆದ ಜೂನ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಸಿಂಗಾಪುರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಎರಡೂ ದೇಶಗಳ ಯುವಜನತೆಯಲ್ಲಿರುವ ತಂತ್ರಜ್ಞಾನ ಆವಿಷ್ಕಾರ, ಪ್ರತಿಭೆ, ಸಂಶೋಧನೆಗಳನ್ನು ತೋರಿಸಿಕೊಳ್ಳಲು ಜಂಟಿ ಹ್ಯಾಕಥಾನ್ ಸಂಘಟಿಸುವಂತೆ ಸಿಂಗಾಪುರ ಪ್ರಧಾನಿ ಲೀ ಹುಸೈನ್ ಲೂಂಗ್ ಅವರ ಮುಂದೆ ಪ್ರಸ್ತಾವನೆಯಿಟ್ಟಿದ್ದರು. ಅದನ್ನು ಅಲ್ಲಿನ ಪ್ರಧಾನಿ ಕೂಡ ಸ್ವಾಗತಿಸಿದ್ದರು. ಭಾರತ ಮತ್ತು ಸಿಂಗಾಪುರದಿಂದ ತಲಾ 20 ತಂಡಗಳನ್ನು ಆಯ್ಕೆ ಮಾಡಲಾಗಿತ್ತು. ಭಾರತದಿಂದ 60 ವಿದ್ಯಾರ್ಥಿಗಳು, 20 ಮಾರ್ಗದರ್ಶಕರು ಮತ್ತು ಮೂವರು ಅಧಿಕಾರಿಗಳಿದ್ದರು. ಎರಡು ದಿನಗಳ ಸಿಂಗಾಪುರ ಭೇಟಿಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಫಿನ್ ಟೆಕ್ ಉತ್ಸವವನ್ನು ಉದ್ದೇಶಿಸಿ ಮಾತನಾಡಿದರು. ಅಲ್ಲದೆ ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ಥೈಲ್ಯಾಂಡ್ ನ ಪ್ರಧಾನಿಗಳ ಜೊತೆ ವ್ಯಾಪಾರ, ರಕ್ಷಣಾ ಇಲಾಖೆ ಮತ್ತು ಭದ್ರತೆ ಕುರಿತು ಪ್ರತ್ಯೇಕ ಮಾತುಕತೆ ನಡೆಸಿದರು.

About the author

ಕನ್ನಡ ಟುಡೆ

Leave a Comment