ದೇಶ ವಿದೇಶ

ಮೊಬೈಲ್ ಉತ್ಪಾದನೆಯಲ್ಲಿ ಭಾರತ ವಿಶ್ವದಲ್ಲಿ ನಂಬರ್ 1 ಆಗುವ ಭರವಸೆಯಿದೆ: ಪ್ರಧಾನಿ ನರೇಂದ್ರ ಮೋದಿ

ಟೊಕ್ಯೊ: ಭಾರತ ಬೃಹತ್ ರೂಪಾಂತರ ಹಂತದಲ್ಲಿ ಸಾಗುತ್ತಿದ್ದು ಮುಂದಿನ ದಶಕದಲ್ಲಿ ಜಾಗತಿಕ ಆರ್ಥಿಕತೆಯ ಬೆಳವಣಿಗೆಯಲ್ಲಿ ಭಾರತ ಪಯಣ ಮುಂದುವರಿದಿದೆ. ಇಂತಹ ಸಂದರ್ಭದಲ್ಲಿ ಜಪಾನ್ ನಲ್ಲಿರುವ ಭಾರತೀಯ ಸಮುದಾಯದವರು ನವ ಭಾರತ ನಿರ್ಮಾಣಕ್ಕೆ ಸಕ್ರಿಯವಾಗಿ ಕೊಡುಗೆ ನೀಡುವಂತೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೋರಿದ್ದಾರೆ. ಭಾರತ-ಜಪಾನ್ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ಜಪಾನ್ ರಾಜಧಾನಿ ಟೊಕ್ಯೊಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ತಮ್ಮ ನಾಲ್ಕೂವರೆ ವರ್ಷಗಳ ಆಡಳಿತದಲ್ಲಿ ಭಾರತದ ಆರ್ಥಿಕ ಮತ್ತು ತಾಂತ್ರಿಕ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿದರು.

ಇಂದು ಭಾರತ ಬೃಹತ್ ರೂಪಾಂತರ ಹಂತದಲ್ಲಿ ಸಾಗುತ್ತಿದೆ. ಮಾನವೀಯತೆಗೆ ಭಾರತದ ಕೊಡುಗೆಯನ್ನು ವಿಶ್ವವೇ ಸ್ಮರಿಸುತ್ತಿದೆ. ತನ್ನ ನೀತಿಗಳು ಮತ್ತು ಸಾರ್ವಜನಿಕ ಕಲ್ಯಾಣಕ್ಕೆ ಮಾಡುತ್ತಿರುವ ಕೆಲಸಗಳಿಗೆ ರಾಷ್ಟ್ರವನ್ನು ಇಂದು ವಿಶ್ವದ ಬೇರೆ ದೇಶಗಳು ಗೌರವಿಸಿ ಕೊಂಡಾಡುತ್ತಿವೆ ಎಂದರು.ಅಗತ್ಯ ಮತ್ತು ಸಮಸ್ಯೆಗಳಿಗೆ ಭಾರತೀಯ ಪರಿಹಾರಗಳು ಮತ್ತು ಜಾಗತಿಕ ಅನ್ವಯಿಕೆಗಳ ಉತ್ಸಾಹದೊಂದಿಗೆ ಭಾರತ ಸತತವಾಗಿ ಕೆಲಸ ಮಾಡುತ್ತಿದೆ. ಹಣಕಾಸಿನ ಒಳಹರಿವಿಕೆಗೆ ಭಾರತದ ಮಾದರಿಗಳಾದ ಜನ ಧನ ಯೋಜನೆ, ಮೊಬೈಲ್, ಆಧಾರ್, ಪಾವಿತ್ರ್ಯತೆ ಮತ್ತು ಡಿಜಿಟಲ್ ಮಾದರಿ ವಹಿವಾಟು ಇತ್ಯಾದಿಗಳನ್ನು ಇಂದು ವಿಶ್ವವೇ ಕೊಂಡಾಡುತ್ತಿದೆ.

ಭಾರತದಲ್ಲಿ ಇಂದು ಟೆಲಿ ಕಮ್ಯುನಿಕೇಶನ್ ಮತ್ತು ಅಂತರ್ಜಾಲ ಸಂಪರ್ಕ ವ್ಯವಸ್ಥೆ ಕೂಡ ವಿಸ್ತಾರವಾಗಿದೆ ಎಂದು ಶ್ಲಾಘಿಸಿದರು.ಡಿಜಿಟಲ್ ಮೂಲಭೂತ ಸೌಕರ್ಯಗಳಲ್ಲಿ ಇಂದು ಭಾರತ ಮಹತ್ವಪೂರ್ಣ ಬೆಳವಣಿಗೆಗಳನ್ನು ಕಾಣುತ್ತಿದೆ. ಅಂತರ್ಜಾಲ ಸಂಪರ್ಕ ಭಾರತದಲ್ಲಿ ಇಂದು ಹಳ್ಳಿ ಹಳ್ಳಿಗೆ ತಲುಪುತ್ತಿದೆ. 100 ಕೋಟಿಗೂ ಅಧಿಕ ಮೊಬೈಲ್ ಫೋನ್ ಭಾರತದಲ್ಲಿ ಸಕ್ರಿಯವಾಗಿದೆ. ಇಂದು ಭಾರತದಲ್ಲಿ ಕೂಲ್ ಡ್ರಿಂಕ್ಸ್ ನ ಸಣ್ಣ ಬಾಟಲ್ ಗಿಂತ 1ಜಿಬಿ ನೀರು ಅಗ್ಗವಾಗಿದೆ.ಸೇವಾ ಪೂರೈಕೆಗೆ ಈ ದತ್ತಾಂಶಗಳು ಸಾಧನವಾಗಿವೆ ಎಂದು ಮೋದಿ ಹೇಳಿದರು.ಇಂದು ಮೇಕ್ ಇನ್ ಇಂಡಿಯಾ ಅಭಿಯಾನ ಜಾಗತಿಕ ವ್ಯಾಪಾರದ ಗುರುತಾಗಿ ಸೃಷ್ಟಿಯಾಗಿದ್ದು ನಾವು ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುತ್ತಿದ್ದೇವೆ.

ಭಾರತ ಜಾಗತಿಕ ಕೇಂದ್ರವಾಗಿ ಮಾರ್ಪಾಡಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಆಟೊಮೊಬೈಲ್ ಉತ್ಪನ್ನ ಕ್ಷೇತ್ರಗಳಲ್ಲಿ ನಾವು ಸಾಧನೆ ಮಾಡುತ್ತಿದ್ದೇವೆ. ಮೊಬೈಲ್ ಫೋನ್ ಉತ್ಪಾದನೆಯಲ್ಲಿ ನಾವು ವಿಶ್ವಕ್ಕೆ ನಂಬರ್ 1 ಸ್ಥಾನಕ್ಕೆ ತಲುಪಲು ನಾವು ಮುನ್ನುಗ್ಗುತ್ತಿದ್ದೇವೆ ಎಂದರು.ಭಾರತದಲ್ಲಿ ನಡೆಯುವ ಸಂಶೋಧನೆ ಮತ್ತು ಪರಿಹಾರಗಳಿಂದ ವೆಚ್ಚ ಕಡಿಮೆಯಾಗುವುದಲ್ಲದೆ ಅವುಗಳ ಗುಣಮಟ್ಟ ಕೂಡ ಉತ್ತಮವಾಗಿರುತ್ತದೆ ಭಾರತದ ಅಂತರಿಕ್ಷ ಕಾರ್ಯಕ್ರಮಗಳು ಜಗತ್ತಿಗೆ ಮಾದರಿಯಾಗಿವೆ ಎಂದರು.ಕಳೆದ ವರ್ಷ ನಮ್ಮ ವಿಜ್ಞಾನಿಗಳು ಅಂತರಿಕ್ಷಕ್ಕೆ 100 ಉಪಗ್ರಹಗಳನ್ನು ಒಟ್ಟಿಗೆ ಕಳುಹಿಸಿ ದಾಖಲೆ ನಿರ್ಮಿಸಿದ್ದರು. ಕಡಿಮೆ ವೆಚ್ಚದಲ್ಲಿ ಚಂದ್ರಯಾನ ಮತ್ತು ಮಂಗಳಯಾನಗಳನ್ನು ಕಳುಹಿಸಲಾಯಿತು. 2022ಕ್ಕೆ ಗಗನಯಾನವನ್ನು ಕಳುಹಿಸಲು ಭಾರತ ಸಿದ್ದತೆ ಮಾಡಿಕೊಳ್ಳುತ್ತಿದೆ. ಗಗನಯಾನ ಸಂಪೂರ್ಣ ಸ್ವದೇಶಿ ನಿರ್ಮಿತವಾಗಿದ್ದು ಅವುಗಳಲ್ಲಿ ಪ್ರಯಾಣಿಸುವವರು ಕೂಡ ಭಾರತೀಯರೇ ಆಗಿರುತ್ತಾರೆ ಎಂದು ಪ್ರಧಾನಿ ಹೇಳಿದರು.

ನವ ಭಾರತ ನಿರ್ಮಾಣಕ್ಕೆ ಅತ್ಯಾಧುನಿಕ ಮೂಲಭೂತ ಸೌಕರ್ಯಗಳ ಉತ್ಪಾದನೆಗೆ ಜಪಾನ್ ನ ಕೊಡುಗೆಗಳನ್ನು ಪ್ರಧಾನಿ ಒತ್ತಿ ಹೇಳಿದರು. ಬುಲೆಟ್ ರೈಲಿನಿಂದ ಸ್ಮಾರ್ಟ್ ಸಿಟಿಯವರೆಗೆ, ನವ ಭಾರತ ನಿರ್ಮಾಣದಲ್ಲಿ ಜಪಾನ್ ನ ಕೊಡುಗೆ ಅಪಾರವಾಗಿದೆ ಎಂದರು.ಜಪಾನ್ ನಲ್ಲಿರುವ ಭಾರತೀಯ ಸಮುದಾಯವನ್ನು ರಾಯಭಾರಿಗಳು ಎಂದು ಕರೆದ ಅವರು, ಭಾರತದಲ್ಲಿ ಹೂಡಿಕೆ ಮಾಡಿ ತಾಯ್ನಾಡಿನ ಜೊತೆ ಸಾಂಸ್ಕೃತಿಕ ಬಾಂಧವ್ಯ ಹೊಂದಿ ಎಂದರು. ಭಾರತ ಮತ್ತು ಜಪಾನ್ ಮಧ್ಯೆ ಸಂಬಂಧ ಸುಧಾರಣೆಗೆ ಭಾರತೀಯ ಸಮುದಾಯಗಳು ಸತತ ಪ್ರಯತ್ನ ಮಾಡಬೇಕು ಎಂದರು.ಮಾರ್ಷಲ್ ಆರ್ಟ್ಸ್ ಹೆಚ್ಚಾಗಿರುವ ಜಪಾನ್ ನಲ್ಲಿ ಕಬ್ಬಡ್ಡಿ ಮತ್ತು ಕ್ರಿಕೆಟ್ ನ್ನು ತಂದ ಭಾರತೀಯ ಸಮುದಾಯವನ್ನು ಮೋದಿ ಇದೇ ಸಂದರ್ಭದಲ್ಲಿ ಶ್ಲಾಘಿಸಿದರು.

About the author

ಕನ್ನಡ ಟುಡೆ

Leave a Comment