ರಾಷ್ಟ್ರ

ಮೋದಿಗೆ ಭಯಗೊಂಡು ಶರಣಾಗಲು ದಾವುದ್ ತಯಾರಿ?

ಮುಂಬೈ: ಪಾಕಿಸ್ತಾನದಲ್ಲಿ ತಲೆಮರೆಸಿಕೊಂಡಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂಗೆ ಪ್ರಾಣಭಯ ಶುರುವಾಗಿದ್ದು ಶರಣಾಗುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾನೆ ಎಂದು ರಾಷ್ಟ್ರೀಯ ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿದೆ.
ಉಗ್ರ ಒಸಾಮಾ ಬಿನ್ ಲಾಡೆನ್‍ನನ್ನು ಅಮೆರಿಕ ಹತ್ಯೆ ನಡೆಸಿದ್ದಂತೆ ನನ್ನನ್ನೂ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿ ಹೊಡೆದುರುಳಿಸಬಹುದು ಎನ್ನುವ ಭಯ ದಾವೂದ್‍ಗೆ ಕಾಡುತ್ತಿದ್ದು ಎರಡು ಷರತ್ತುಗಳೊಂದಿಗೆ ನಾನು ಶರಣಾಗುತ್ತೇನೆ ಎಂದು ಹೇಳಿದ್ದಾನೆ.
ನಾನೇ ಭಾರತಕ್ಕೆ ಶರಣಾಗುತ್ತೇನೆ. ಆದರೆ ಸುಪ್ರೀಂ ಕೋರ್ಟ್ ಖ್ಯಾತ ವಕೀಲ ರಾಮ್ ಜೇಠ್ಮಲಾನಿ ಮಧ್ಯವರ್ತಿಯಾಗಬೇಕು. ಮುಂಬೈನ ಆರ್ಥರ್ ಜೈಲಲ್ಲೇ ಇರಿಸಬೇಕು ಎನ್ನುವ ಬೇಡಿಕೆಯಿಟ್ಟಿದ್ದಾನೆ ಎಂದು ಮುಂಬೈ ಪೊಲೀಸರ ವಶದಲ್ಲಿರುವ ದಾವೂದ್ ಸಹೋದರ ಇಕ್ಬಾಲ್ ಕಸ್ಕರ್ ಪರ ವಕೀಲ ತಿಳಿಸಿದ್ದಾರೆ.
ದಾವೂದ್ ಶರಣಾಗತಿಗೆ ಸಂಬಂಧಿಸಿದಂತೆ ಸುದ್ದಿ ಬಂದಿರುವುದು ಇದೇ ಮೊದಲಲ್ಲ. ಈ ಹಿಂದೆ 2015ರ ಜುಲೈನಲ್ಲಿ ವಕೀಲ ರಾಮ್ ಜೇಠ್ಮಲಾನಿ ಅವರು, ದಾವೂದ್ ಈ ಹಿಂದೆ ನನ್ನ ಜೊತೆ ಭಾರತಕ್ಕೆ ನಾನು ಶರಣಾಗುತ್ತೇನೆ ಎಂದು ಹೇಳಿದ್ದ ಎನ್ನುವುದನ್ನು ತಿಳಿಸಿದ್ದರು. ಇದನ್ನೂ ಓದಿ: ಮೋದಿ ಸರ್ಕಾರ ಬಂದ್ಮೇಲೆ ಪಾಕಿಸ್ತಾನದಲ್ಲಿ 4 ಬಾರಿ ಮನೆ ಬದಲಿಸಿದ್ದಾನೆ ದಾವೂದ್: ಸಹೋದರನೇ ಬಾಯ್ಬಿಟ್ಟ ಸತ್ಯ.
ಭಾರತಕ್ಕೆ ಶರಣಾಗಲು ದಾವೂದ್ ಬಯಸಿದ್ದ. ಆದರೆ ಅಂದಿನ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದ ಶರದ್ ಪವಾರ್ ಆತನ ಭದ್ರತೆಯ ಬೇಡಿಕೆ ವಿಚಾರವಾಗಿ ಯಾವುದೇ ನಿರ್ಧಾರಕ್ಕೆ ಬಂದಿರಲಿಲ್ಲ. ಅಷ್ಟೇ ಅಲ್ಲದೇ ಯುಪಿಎ ಸರ್ಕಾರದಿಂದಲೂ ಯಾವುದೇ ಸಕಾರಾತ್ಮಕ ಪ್ರತಿಕ್ರಿಯೆ ಸಿಗದ ಕಾರಣ ಆತ ಶರಣಾಗಲಿಲ್ಲ ಎಂದು ತಿಳಿಸಿದ್ದರು.
ದಾವೂದ್ ಪ್ರಮುಖ ಆರೋಪಿಯಾಗಿರುವ 1993 ರ ಸರಣಿ ಬಾಂಬ್ ಸ್ಫೋಟ ಪ್ರಕರಣದಲ್ಲಿ ಸುಮಾರು 227 ಜನರು ದಾರಣವಾಗಿ ಸಾವನ್ನಪ್ಪಿದ್ದರು. ಜೊತೆಗೆ 713 ಜನ ಗಂಭೀರವಾಗಿ ಗಾಯಗೊಂಡಿದ್ದರು. ಅಷ್ಟೇ ಅಲ್ಲದೇ ಸುಮಾರು 27 ಕೋಟಿ. ರೂ ನಷ್ಟವಾಗಿತ್ತು.

About the author

ಕನ್ನಡ ಟುಡೆ

Leave a Comment