ರಾಷ್ಟ್ರ ಸುದ್ದಿ

ಮೋದಿಗೆ ಸಾಧ್ಯವಾಗದನ್ನು ನಾನು ಮಾಡಿದ್ದೇನೆ ಎಂದು ಹೇಳುವಂತೆ ರಾಹುಲ್‌ಗೆ ಸಿಂಧಿಯಾ ಸಲಹೆ

ಹೊಸದಿಲ್ಲಿ: ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಸರಕಾರ ರಚನೆಯಾದ ನಂತರ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯ ಭಾಷಣ ಶೈಲಿ ಬದಲಾದಂತಿದೆ. ಬಹಳ ಎಚ್ಚರಿಕೆಯಿಂದ ಮಾತನಾಡುತ್ತಿದ್ದಾರೆ. ‘ರೈತರ ಸಾಲ ಮನ್ನಾ ಮಾಡುವ ವರೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿದ್ರಿಸಲು ಬಿಡುವುದಿಲ್ಲ’ ಎಂದು ರಾಹುಲ್‌ ಗಾಂಧಿ ಅಬ್ಬರಿಸಿದ್ದರು.

ಸಂಸತ್ತಿನ ಹೊರಗೆ ಸುದ್ದಿಗೋಷ್ಠಿಯಲ್ಲಿ ರಾಹುಲ್‌ ಗಾಂಧಿ ಮಾತನಾಡುವ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್‌, ಅಹ್ಮದ್‌ ಪಟೇಲ್‌ ಮತ್ತು ಜ್ಯೋತಿರಾಧಿತ್ಯ ಸಿಂಧಿಯಾ ಜತೆಗಿದ್ದರು. ಈ ವೇಳೆ ಸಿಂಧಿಯಾ ರಾಹುಲ್‌ ಅವರಿಗೆ ‘ ನೀವು ಹೇಳಬೇಕಿರುವುದು ಪಿಎಂ ಮೋದಿ ಅವರಿಂದ ಸಾಧ್ಯವಾಗಿಲ್ಲ, ನಾನು ಮಾಡಿದ್ದೇನೆ’ ಎಂದು ಸಲಹೆ ನೀಡುತ್ತಿರುವುದು ವೀಡಿಯೋದಲ್ಲಿ ದಾಖಲಾಗಿದೆ.

ಮಧ್ಯಪ್ರದೇಶದ ಪ್ರಬಲ ಸಿಎಂ ಆಕಾಂಕ್ಷಿಯಾಗಿದ್ದ ಜ್ಯೋತಿರಾಧಿತ್ಯ ಸಿಂಧಿಯಾ ರಾಹುಲ್‌ ಗಾಂಧಿ ಅವರ ಆಪ್ತರು ಹೌದು. ‘ಪ್ರಶ್ನೆಗಳನ್ನು ಕೇಳಬೇಡಿ’ ಎಂದೂ ಸಲಹೆ ನೀಡುತ್ತಿರುವುದು ವೀಡಿಯೋದಲ್ಲಿ ಕಂಡು ಬರುತ್ತದೆ. ಈ ವೀಡಿಯೋವನ್ನು ಬಳಸಿಕೊಂಡು ಕಾಂಗ್ರೆಸ್‌ಗೆ ಮುಜುಗರ ತರಲು ಬಿಜೆಪಿ ಮುಂದಾಗಿದೆ. ಬಿಜೆಪಿ ನಾಯಕಿ ಸ್ಮೃತಿ ಇರಾನಿ ರಾಹುಲ್‌ ಸಲಹೆ ಪಡೆಯುತ್ತಿರುವ ವೀಡಿಯೋವನ್ನು ಟ್ವೀಟ್‌ ಮಾಡಿದ್ದು ‘ಇತ್ತೀಚೆಗೆ ಕನಸು ಕಾಣುವುದಕ್ಕೂ ನಿಮಗೆ ಟ್ಯೂಷನ್‌ ಬೇಕಾಗಿದೆ’ ಎಂದಿದ್ದಾರೆ. ಇರಾನಿ ಟ್ವೀಟ್‌ಗೆ ಖಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್‌ ವಕ್ತಾರ ಪ್ರಿಯಾಂಕ ಚತುರ್ವೇದಿ, ಆತ್ಮೀಯ ಟ್ರೋಲ್‌, ತರಬೇತಿ ಮೂಲಕ ಜನರ ಕನಸುಗಳನ್ನು ‘ಜುಮ್ಲಾ’ ಮಾಡಿದ್ದೀರಿ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕನಿಷ್ಠ ಒಂದು ಸುದ್ದಿಗೋಷ್ಠಿ ನಡೆಸುವಂತೆ ಹೇಳಿ. ಟ್ಯೂಷನ್‌ ಸಹಾಯದಿಂದಲಾದರೂ ಸುದ್ದಿಗೋಷ್ಠಿ ನಡೆಸಲಿ. ತುಂಬಾ ಪ್ರಶ್ನೆಗಳಿಗೆ ಮೋದಿ ಉತ್ತರಿಸಬೇಕಿದೆ. ರಾಷ್ಟ್ರದ ಜನತೆ ಕಾಯುತ್ತಿದ್ದಾರೆ. ತಿಳಿಯಿತಾ? ಎಂದಿದ್ದಾರೆ

About the author

ಕನ್ನಡ ಟುಡೆ

Leave a Comment