ರಾಷ್ಟ್ರ ಸುದ್ದಿ

ಮೋದಿ ಚಾಯ್ ವಾಲಾ ನಿಂದ ರಾಫೆಲ್ ವಾಲಾ ಆಗಿ ರೂಪಾಂತರ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ಕೊಲ್ಕತ್ತಾ: ಪ್ರಧಾನಿ ನರೇಂದ್ರ ಮೋದಿ ಚಾಯ್ ವಾಲಾನಿಂದ ರಾಫೆಲ್ ವಾಲಾ ಆಗಿ ರೂಪಾಂತರಗೊಂಡಿದ್ದಾರೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಫೆಲ್ ಒಪ್ಪಂದ ದೇಶದ ಅತಿದೊಡ್ಡ ಹಗರಣವಾಗಿದ್ದು, ಈ ವಿಚಾರದಲ್ಲಿ  ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಾಗಿ ಅವರು ತಿಳಿಸಿದ್ದಾರೆ. ಚಿಟ್ ಫಂಡ್ ಹಗರಣದಲ್ಲಿ ತೊಡಗಿಸಿಕೊಂಡವರನ್ನು ರಕ್ಷಿಸಲು ಪಶ್ಚಿಮ ಬಂಗಾಳ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಮೋದಿ ಮಾಡಿದ ಆರೋಪದ ಬೆನ್ನಲ್ಲೇ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಮಮತಾ ಬ್ಯಾನರ್ಜಿ, ಭ್ರಷ್ಟಾಚಾರದ, ಸೊಕ್ಕಿನ ಮಾಸ್ಟರ್ ಆಗಿರುವ ಮೋದಿ ದೇಶಕ್ಕೆ ಅಪಮಾನ ಎಂಬಂತಿದ್ದಾರೆ. ಅವರ ಬಗ್ಗೆ ಕಡಿಮೆ ಮಾತನಾಡುತ್ತೇವೆ ಎಂದು ಹೇಳಿದ್ದಾರೆ.ಮೋದಿ ಅಂತಹ ಕೆಳ ಮಟ್ಟದವರು ಪ್ರಧಾನಿಯಾಗುತ್ತಾರೆ ಎಂಬುದನ್ನು ಊಹಿಸಿರಲಿಲ್ಲ. ಪ್ರಧಾನಿ ಸ್ಥಾನಕ್ಕೆ ಗೌರವ ನೀಡುತ್ತೇವೆ ಆದರೆ, ಆ ಮನುಷ್ಯನಿಗೆ ಗೌರವ ನೀಡುವುದಿಲ್ಲ. ಭಾರತದ ಚರಿತ್ರೆಯಲ್ಲಿ ಮೋದಿ ಅತ್ಯಂತ ಭ್ರಷ್ಟಾಚಾರದ ಮನುಷ್ಯರಾಗಿದ್ದಾರೆ ಎಂದು  ಮಮತಾ ಬ್ಯಾನರ್ಜಿ  ಲೇವಡಿ ಮಾಡಿದ್ದಾರೆ.ರಾಫೆಲ್ ಒಪ್ಪಂದದಲ್ಲಿ ಏನು ಆಗಿದೆ ಅಥವಾ ಎಷ್ಟು ಹಣ ಕೈಯಿಂದ ಕೈಗೆ ಬದಲಾಗಿದೆ ಎಂಬುದು ಗೊತ್ತಿಲ್ಲ, ಆದರೆ, ಇದೊಂದು ದೊಡ್ಡ ಹಗರಣವಾಗಿದೆ. ಕಾಂಗ್ರೆಸ್ ಪಕ್ಷದವರು ಈ ಬಗ್ಗೆ ಸಂಪೂರ್ಣ ದಾಖಲೆ ಹೊಂದಿರುವುದರಿಂದ ಅವರನ್ನು ಬೆಂಬಲಿಸುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

About the author

ಕನ್ನಡ ಟುಡೆ

Leave a Comment