ರಾಜಕೀಯ

ಮೋದಿ ವಿರುದ್ಧ ಒಂದಾಗಿ: ಮುಸ್ಲಿಂ ಮತದಾರರಿಗೆ ಸಚಿವ ನವಜ್ಯೋತ್‌ ಸಿಂಗ್‌ ಸಿಧು ಕರೆ

ಕಟಿಹಾರ್‌: ಕಾಂಗ್ರೆಸ್‌ಗೆ ಮತ ನೀಡುವ ಮೂಲಕ ಮುಸ್ಲಿಮರೆಲ್ಲರೂ ಪ್ರಧಾನಿ ಮೋದಿ ವಿರುದ್ಧ ಒಂದಾಗಬೇಕು ಎಂದು ಪಂಜಾಬ್‌ ಸಚಿವ ನವಜ್ಯೋತ್‌ ಸಿಂಗ್‌ ಸಿಧು ಮಂಗಳವಾರ ಕರೆ ನೀಡಿದ್ದಾರೆ. ಅಭ್ಯರ್ಥಿ ತಾರಿಕ್‌ ಅನ್ವರ್‌ ಪರ ಪ್ರಚಾರ ನಡೆಸಿ ವೇಳೆ ಮಾತನಾಡಿದ ಮಾಜಿ ಕ್ರಿಕೆಟಿಗ, ”ಒವೈಸಿಯಂತಹ ಬಿಜೆಪಿ ನಾಯಕರನ್ನು ಕರೆತರುವ ಮೂಲಕ ಮತ ವಿಭಜನೆಗೆ ಸಂಚು ರೂಪಿಸಲಾಗಿದೆ. ಇದರ ಬಗ್ಗೆ ನೀವೆಲ್ಲಾ ಎಚ್ಚರದಿಂದ ಇರಬೇಕು. ಮುಸ್ಲಿಮರೆಲ್ಲರೂ ಒಂದಾದರೆ ಮೋದಿ ಕತೆ ಮುಗಿಸಬಹುದು. ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಬಹುದು. ಸಿಕ್ಸ್‌ ಹೊಡೆದು ಮೋದಿಯನ್ನು ಬೌಂಡರಿಯಿಂದ ಆಚೆಗಟ್ಟುವ ಕಾಲ ಬಂದಿದೆ,” ಎಂದು ಹೇಳಿದ್ದಾರೆ.

”ಮುಸ್ಲಿಂ ಬಾಂಧವರೇ, ನೀವು ರಾಜ್ಯದ ಜನಸಂಖ್ಯೆಯಲ್ಲಿ ಶೇ. 54ರಷ್ಟಿದ್ದೀರಿ. ನೀವೆಲ್ಲರೂ ಪಂಜಾಬ್‌ಗೆ ಬಂದು ಕೆಲಸ ಮಾಡಿರಿ. ಅಲ್ಲೇನಾದರೂ ಸಮಸ್ಯೆಯಾದರೆ ನಿಮ್ಮ ಬೆಂಬಲಕ್ಕೆ ನಾನಿರುತ್ತೇನೆ,” ಎಂದಿದ್ದಾರೆ. ಬಿಹಾರದ ಕಟಿಹಾರ್‌ ಕ್ಷೇತ್ರಕ್ಕೆ ಏ.18ರಂದು ಮತದಾನ ನಡೆಯಲಿದ್ದು, ಇಲ್ಲಿ ಜೆಡಿಯು ಅಭ್ಯರ್ಥಿ ದುಲಾಲ್‌ ಗೋಸ್ವಾಮಿ ವಿರುದ್ಧ ತಾರಿಕ್‌ ಅನ್ವರ್‌ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಿದೆ. ಬಿಹಾರದ ಕಿಶನ್‌ಗಂಜ್‌ ಕ್ಷೇತ್ರದಿಂದ ಒಸಾದುದ್ದೀನ್‌ ಓವೈಸಿ ನೇತೃತ್ವದ ಎಐಎಂಐಎಂ ಪಕ್ಷ ಅಖ್ತರುಲ್‌ ಇಮಾಮ್‌ ಅವರನ್ನು ಕಣಕ್ಕಿಳಿಸಿದೆ. ಲಾಲು ಪ್ರಸಾದ್‌ ಯಾದವ್‌ ನೇತೃತ್ವದ ಆರ್‌ಜೆಡಿ ಮತ್ತು ಉಪೇಂದ್ರ ಕುಶ್ವಾಹಾ ನೇತೃತ್ವದ ಆರ್‌ಎಲ್‌ಎಸ್ಪಿ ಜತೆ ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿದೆ. ಬಿಜೆಪಿ ಮತ್ತು ಜೆಡಿಯು ಸೀಟು ಹೊಂದಾಣಿಕೆ ಮಾಡಿಕೊಂಡಿವೆ.

ಮೋದಿ ಅತಿದೊಡ್ಡ ಸುಳ್ಳುಗಾರ: ಮಹಾತ್ಮ ಗಾಂಧಿ ಜನಿಸಿದ ಗುಜರಾತ್‌ನಿಂದಲೇ ದೇಶದ ಅತಿದೊಡ್ಡ ಸುಳ್ಳುಗಾರ ಪ್ರಧಾನಿ ನರೇಂದ್ರ ಮೋದಿಯೂ ಬಂದಿರುವುದು ದುರಂತ ಎಂದು ಸಿಧು ಹೇಳಿದ್ದಾರೆ. ಗುಜರಾತ್‌ನ ದಾಂಗ್‌ ಜಿಲ್ಲೆಯಲ್ಲಿ ನಡೆದ ಕಾಂಗ್ರೆಸ್‌ ಪ್ರಚಾರ ಸಭೆಯಲ್ಲಿ ಮಂಗಳವಾರ ಮಾತನಾಡಿದ ಅವರು, ಮೋದಿ ಅವರನ್ನು ಶ್ರೀಮಂತರ ಪ್ರಧಾನಿ ಎಂದು ಜರಿದಿದ್ದಾರೆ.

ಬಿಜೆಪಿ ಭೀತಿ ಬಿತ್ತುತ್ತಿರುವ ಕಾಂಗ್ರೆಸ್‌; ಓವೈಸಿ ತಿರುಗೇಟು: ಸಿಧು ಅವರ ‘ಮತ ವಿಭಜನೆ’ ಹೇಳಿಕೆಗೆ ತಿರುಗೇಟು ನೀಡಿರುವ ಓವೈಸಿ, ಕಾಂಗ್ರೆಸ್‌ ಮತದಾರರಲ್ಲಿ ‘ಬಿಜೆಪಿ ಭೀತಿ’ಯನ್ನು ಬಿತ್ತುತ್ತಿದೆ ಎಂದು ಕಿಡಿಕಾರಿದ್ದಾರೆ. ”ಮುಸ್ಲಿಮರನ್ನು ಒಂದುಗೂಡಿಸಲು ಯತ್ನಿಸುತ್ತಿರುವ ಸಿಧು ಅವರೇ ಹಿಂದೆ ಸುದೀರ್ಘ ಕಾಲ ನೀವು ಬಿಜೆಪಿಯಲ್ಲಿದ್ದಾಗ ಯಾರನ್ನು ಒಟ್ಟುಗೂಡಿಸುತ್ತಿದ್ದಿರಿ? ಕಾಂಗ್ರೆಸ್‌ ಈಗಲೂ ‘ಬಿಜೆಪಿ ಭೀತಿ’ಯನ್ನು ಬಿತ್ತು ಹಳೆಯ ಕಾರ್ಯತಂತ್ರದ ಮೂಲಕವೇ ಪ್ರಚಾರ ನಡೆಸುತ್ತಿದೆ. ಈಗ ಬೇಕಿರುವುದು ಭೀತಿ ಅಲ್ಲ, ನ್ಯಾಯ. ಆಜಾನ್‌ (ಮುಸ್ಲಿಮರ ಪ್ರಾರ್ಥನೆ) ವೇಳೆ ಭಾಷಣವನ್ನು ನಿಲ್ಲಿಸಲು ಸಿಧುಗೆ ಹೇಳಲು ಸಾಧ್ಯವಾಗದ ಕಾಂಗ್ರೆಸ್‌ ನಾಯಕರಿಂದ ಮತ್ತೇನನ್ನು ನಿರೀಕ್ಷಿಸಲು ಸಾಧ್ಯ?” ಎಂದು ಓವೈಸಿ ಹೇಳಿದ್ದಾರೆ.

ಆಯೋಗದಿಂದ ಕ್ರಮ ಸಾಧ್ಯತೆ : ಕೋಮು ಪ್ರಚೋದನಾತ್ಮಕ ಭಾಷಣಕ್ಕಾಗಿ ಚುನಾವಣಾ ಆಯೋಗ ನಾಲ್ವರು ಪ್ರಮುಖ ನಾಯಕರ ವಿರುದ್ಧ ಕ್ರಮ ಜರುಗಿಸಿದ ಮರುದಿನವೇ ಸಿಧು ಅಂಥದ್ದೇ ಪ್ರಚೋದನಕಾರಿ ಭಾಷಣದ ವಿವಾದಕ್ಕೆ ಸಿಲುಕಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಗಾಗಿ ಸಿಧು ವಿರುದ್ಧ ಕ್ರಮ ಕೈಗೊಳ್ಳುವಂತೆ ಈಗಾಗಲೇ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು ನೀಡಿದ್ದು, ಸಿಧು ಸಹ ಪ್ರಚಾರ ನಿಷೇಧಕ್ಕೆ ಒಳಗಾಗುವ ಸಾಧ್ಯತೆಯಿದೆ.

About the author

ಕನ್ನಡ ಟುಡೆ

Leave a Comment