ರಾಜ್ಯ ಸುದ್ದಿ

ಮೌಲ್ಯಮಾಪನ ಸಂಭಾವನೆ 5ರಷ್ಟು ಹೆಚ್ಚಳ: ಮೌಲ್ಯಮಾಪಕರ ಅಸಮಾಧಾನ

ಬೆಂಗಳೂರು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನ ದರವನ್ನು ಕೇವಲ ಶೇ 5ರಷ್ಟು ಹೆಚ್ಚಿಸಿರುವ ಮಂಡಳಿಯ ಕ್ರಮಕ್ಕೆ ಮೌಲ್ಯಮಾಪಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಹಿಂದೆ ಮೂರು ವರ್ಷಕ್ಕೊಮ್ಮೆ ಮೌಲ್ಯಮಾಪನ ಸಂಭಾವನೆ ದರವನ್ನು ಶೇ 25ರಿಂದ 30ರಷ್ಟು ಪರಿಷ್ಕರಿಸಲಾಗುತ್ತಿತ್ತು. ಹಿಂದಿನ ಸರಕಾರದಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿದ್ದ ತನ್ವೀರ್‌ ಸೇಠ್‌ ಅವರು ಪ್ರತಿ ವರ್ಷ ಶೇ 10ರಷ್ಟು ಸಂಭಾವನೆ ದರ ಪರಿಷ್ಕರಿಸಲು ಆದೇಶಿಸಿದ್ದರು. ಅದರಂತೆ, ಹಿಂದಿನ ವರ್ಷ ಜಾರಿ ಮಾಡಲಾಗಿತ್ತು. ಆದರೆ, ಈ ವರ್ಷ ಶೇ 10ರ ಬದಲು 5ರಷ್ಟು ಸಂಭಾವನೆ ದರ ಪರಿಷ್ಕರಿಸಲಾಗಿದೆ.

ಪೂರಕ ಪರೀಕ್ಷೆ ವೇಳೆ ಪರಿಷ್ಕರಣೆ: ”ಲೋಕಸಭೆ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಜೂನ್‌ನಲ್ಲಿ ನಡೆಯುವ ಪೂರಕ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ವೇಳೆ ಸಂಭಾವನೆ ದರ ಪರಿಷ್ಕರಿಸುವುದಾಗಿ ಮಂಡಳಿಯ ನಿರ್ದೇಶಕಿ ವಿ. ಸುಮಂಗಲಾ ಭರವಸೆ ನೀಡಿದ್ದಾರೆ. ಹೀಗಾಗಿ, ಮಕ್ಕಳ ಹಿತದೃಷ್ಟಿಯಿಂದ ಮೌಲ್ಯಮಾಪನದಲ್ಲಿ ಭಾಗವಹಿಸುತ್ತಿದ್ದೇವೆ” ಎಂದು ಕರ್ನಾಟಕ ರಾಜ್ಯ ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಎಚ್‌.ಕೆ. ಮಂಜುನಾಥ್‌ ಪ್ರತಿಕ್ರಿಯಿಸಿದ್ದಾರೆ.

”ಎಸ್‌ಎಸ್‌ಎಲ್‌ಸಿ ಉತ್ತರ ಪತ್ರಿಕೆಗಳ ಮೌಲ್ಯಮಾಪನಕ್ಕೆ ಹೋಲಿಸಿದರೆ ದ್ವಿತೀಯ ಪಿಯುಸಿ ಪರೀಕ್ಷೆಯ ಉತ್ತರ ಪತ್ರಿಕೆಗಳ ಮೌಲ್ಯಮಾಪನ ದರ ಒಂದೂವರೆ ಪಟ್ಟು ಹೆಚ್ಚಿದೆ. ಅದೇ ಕೆಪಿಎಸ್‌ಸಿ ನಡೆಸುವ ಪರೀಕ್ಷೆಗಳ ಉತ್ತರ ಪತ್ರಿಕೆಗಳ ಮೌಲ್ಯಮಾಪನ ದರ ಮೂರು ಪಟ್ಟು ಹೆಚ್ಚಿದೆ. ಹೀಗಾಗಿ, ಕನಿಷ್ಠ ಪದವಿ ಪೂರ್ವ ಕಾಲೇಜು ಉಪನ್ಯಾಸಕರಿಗೆ ಸಮಾನವಾದ ಸಂಭಾವನೆ ನೀಡುವಂತೆ ಮಂಡಳಿಗೆ ಮನವಿ ಸಲ್ಲಿಸಲಾಗಿದೆ” ಎಂದು ಅವರು ಹೇಳಿದರು.

ಮೌಲ್ಯಮಾಪನಕ್ಕೆ ಎಷ್ಟು ಮೊತ್ತ?: ಒಬ್ಬ ಮೌಲ್ಯಮಾಪಕ ಪ್ರತಿ ದಿನ ಮೌಲ್ಯಮಾಪನ ಮಾಡಬೇಕಾದ ಉತ್ತರ ಪತ್ರಿಕೆಗಳ ಸಂಖ್ಯೆ (ಆವರಣ) ಹಾಗೂ ಒಂದು ಉತ್ತರ ಪತ್ರಿಕೆ ಮೌಲ್ಯಮಾಪನಕ್ಕೆ ನೀಡುವ ಸಂಭಾವನೆ ದರ ಹೀಗಿದೆ. ಪ್ರಥಮ ಭಾಷೆ (20): 18.06 ರೂ.; ದ್ವಿತೀಯ ಹಾಗೂ ತೃತೀಯ ಭಾಷೆ (26): 16.38 ರೂ.; ಗಣಿತ, ವಿಜ್ಞಾನ, ಸಮಾಜ ವಿಜ್ಞಾನ: (20): 17.43 ರೂ.; ಮಾಹಿತಿ ತಂತ್ರಜ್ಞಾನ/ ರೀಟೇಲ್‌/ ಆಟೋಮೊಬೈಲ್‌/ ಹೆಲ್ತ್‌ಕೇರ್‌/ ಬ್ಯೂಟಿ ಮತ್ತು ವೆಲ್‌ನೆಸ್‌ (26): 16.38. ರೂ. ನಿಗದಿಪಡಿಸಲಾಗಿದೆ.

About the author

ಕನ್ನಡ ಟುಡೆ

Leave a Comment