ರಾಜಕೀಯ

ಯಾರು ಬೇಕಾದರೂ ಚುನಾವಣೆಗೆ ನಿಲ್ಲಬಹುದು: ಮಗ ನಿಖಿಲ್ ಸ್ಪರ್ಧೆಗೆ ಸಿಎಂ ಕುಮಾರಸ್ವಾಮಿ ಸಮರ್ಥನೆ

ಬೆಂಗಳೂರು: ಚುನಾವಣೆಗೆ ಯಾರು ಎಲ್ಲಿ ಬೇಕಾದರೂ ನಿಲ್ಲಬಹುದು. ಎಲ್ಲೋ ಹುಟ್ಟಿ, ಮತ್ತೆಲ್ಲೋ ಸ್ಪರ್ಧೆ ಮಾಡಿ ಶಾಸಕ ಮತ್ತು ಸಂಸದರಾಗಿ ಬಹಳಷ್ಟು ಜನ ಆಯ್ಕೆಯಾಗಿದ್ದಾರೆ. ಎಲ್ಲಾ ಕಡೆ ಪರ ವಿರೋಧ ಇದ್ದೇ ಇರುತ್ತದೆ. ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಮಗ ನಿಖಿಲ್ ಸ್ಪರ್ಧೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇಂದು ಜೆಪಿ ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಮಂಡ್ಯ ಜಿಲ್ಲೆಯ ಜನರ ಪ್ರೀತಿ, ಅಭಿಮಾನವನ್ನು ದುರುಪಯೋಗಪಡಿಸಿಕೊಳ್ಳುವ ಕುಟುಂಬ ತಮ್ಮದಲ್ಲ. ಮಂಡ್ಯ ಜಿಲ್ಲೆಗೂ ತಮ್ಮ ಕುಟುಂಬಕ್ಕೂ ಹಲವಾರು ವರ್ಷಗಳ ಸಂಬಂಧ ಇದೆ. ನಿಖಿಲ್ ಸೋಲು ಗೆಲವಿನ ಬಗ್ಗೆ  ಜಿಲ್ಲೆಯ ಜನರು ತೀರ್ಮಾನ ಮಾಡುತ್ತಾರೆ. ಇದನ್ನು ಯಾರೋ ಪಕ್ಷದ ಮುಖಂಡರು ತೀರ್ಮಾನ ಮಾಡುವುದಲ್ಲ ಎಂದು ಕಾಂಗ್ರೆಸ್ ಮುಖಂಡರಿಗೆ ತಿರುಗೇಟು ನೀಡಿದರು.

ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರು ಮಂಗಳೂರಲ್ಲಿ ಹುಟ್ಟಿ ಬೆಂಗಳೂರು ಉತ್ತರದಲ್ಲಿ ಸಂಸದರಾಗಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಡ್ಯದಲ್ಲಿ ಜನಿಸಿ ಶಿವಮೊಗ್ಗದಲ್ಲಿ ರಾಜಕೀಯ ಮಾಡುತ್ತಿಲ್ಲವೇ. ಹಾಗೆಯೇ ತಾವು ಹಾಸನದಲ್ಲಿ ಹುಟ್ಟಿ ರಾಮನಗರದಲ್ಲಿ ಬಂದು ರಾಜಕೀಯ ‌ಮಾಡುತ್ತಿದ್ದೇವೆ. ಶೋಭಾ ಕರಂದ್ಲಾಜೆ 2008 ರಲ್ಲಿ ಯಶವಂತಪುರದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದರು. ಇಲ್ಲಿಂದ ಉಡುಪಿಗೆ ಹೋಗಿದ್ದಾರೆ. ಅನಿತಾ ಕುಮಾರಸ್ವಾಮಿ ಸ್ಪರ್ಧೆ ಮಾಡುವಾಗ ವಿರೋಧ ಇದೆ ಎಂದು ಹೇಳುತ್ತಿದ್ದರು. ಉಪ ಚುನಾವಣೆಯಲ್ಲಿ 1 ಲಕ್ಷ ಮತಗಳ ಅಂತರದಿಂದ ಗೆದ್ದು ಬಂದಿದ್ದಾರೆ. ಇಂತಹ ನೂರಾರು ಉದಾಹರಣೆ ಕೊಡಬಲ್ಲೆ ಎನ್ನುವ ಮೂಲಕ ತಮ್ಮ ಪುತ್ರ ನಿಖಿಲ್ ಮಂಡ್ಯದಿಂದ ಸ್ಪರ್ಧಿಸಿದರೆ ತಪ್ಪಿಲ್ಲ ಎಂಬ ಸಂದೇಶವನ್ನು ಮುಖ್ಯಮಂತ್ರಿ ರವಾನಿಸಿದ್ದಾರೆ.

ಮಂಡ್ಯ ಜಿಲ್ಲೆಗೆ ಯಾರು ಏನು ಕೊಡುಗೆ ನೀಡಿದ್ದಾರೆಂದು ಜನರು ನಿರ್ಧಾರ ಕೈಗೊಳ್ಳುತ್ತಾರೆ. ಕ್ಷೇತ್ರದ ಜನತೆ ಮಾನಸಿಕವಾಗಿ ತೀರ್ಮಾನ ಕೈಗೊಂಡಿದ್ದಾರೆ. ಅಲ್ಲಿಯವರೆಗೆ ಕಾದು ನೋಡಿ ಎಂದರು. ಮಂಡ್ಯದಲ್ಲಿ ಕಾಂಗ್ರೆಸ್ ಮುಖಂಡರು, ಮಾಜಿ ಶಾಸಕರು ನಿಖಿಲ್ ಗೆ ಸಹಕಾರ ನೀಡುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಿಖಿಲ್ ಬೆಂಬಲಿಸುವಂತೆ ವೈಯಕ್ತಿಕವಾಗಿ ಹಾಗೂ ಪಕ್ಷದಿಂದ ಮನವಿ ಮಾಡುತ್ತೇನೆ. ಇಷ್ಟಾದರೂ ಬೆಂಬಲ ಕೊಡದೆ ವಿರೋಧ ವ್ಯಕ್ತಪಡಿಸಿದರೆ ತಾವು ಅವರನ್ನು ತಡೆಯಲು ಸಾಧ್ಯವಿಲ್ಲ. ಈ ಬಗ್ಗೆ ತಾವು ಯಾವುದೇ ಕಾಂಗ್ರೆಸ್ ಮುಖಂಡರ ಜೊತೆಗೂ ಮಾತನಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಲೋಕಸಭಾ ಚುನಾವಣೆ ಘೋಷಣೆ ಆದ ಬಳಿಕ ತಾವು ಆರಾಮವಾಗಿ, ಯಾವುದೇ ಆತಂಕ, ಗೊಂದಲಗಳಿಲ್ಲದೆ ತಮ್ಮ ಕೆಲಸ ಮಾಡುತ್ತಿದ್ದೇನೆ. ಮೂರು ನಾಲ್ಕು ದಿನಗಳಲ್ಲಿ ಸ್ಥಾನ ಹಂಚಿಕೆ ಅಂತಿಮವಾಗಲಿದೆ. ಸ್ಥಾನ ಹಂಚಿಕೆ ಬಗ್ಗೆ ಪಕ್ಷದ ವರಿಷ್ಠರು ತೀರ್ಮಾನ ಕೈಗೊಳ್ಳುತ್ತಾರೆ ಎಂದರು. ಮಾಜಿ ಪ್ರಧಾನಿ ದೇವೇಗೌಡರು ಎಲ್ಲಿಂದ ಸ್ಪರ್ಧೆ ಮಾಡುತ್ತಾರೆ ಎಂಬುದು ಇನ್ನೊಂದು ವಾರದಲ್ಲಿ ತಮಗೆ ತಿಳಿಯಲಿದೆ. ಮೈಸೂರು ಲೋಕಸಭಾ  ಕ್ಷೇತ್ರಕ್ಕಾಗಿ ಉಂಟಾಗಿರುವ ಪೈಪೋಟಿ ಬಗ್ಗೆ ತಮಗೇನು ತಿಳಿದಿಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.

About the author

ಕನ್ನಡ ಟುಡೆ

Leave a Comment